

ಬೈರುತ್: ಲೆಬನಾನ್ ರಾಜಧಾನಿಯಲ್ಲಿ ಸಂಭವಿಸಿದ ಭೀಕರ ಅಮೋನಿಯಂ ನೈಟ್ರೇಟ್ ಸ್ಫೋಟದ ಬಳಿಕ ಹೆಚ್ಚಾದ ಜನರ ಆಕ್ರೋಶಕ್ಕೆ ಸರ್ಕಾರವೇ ಪತನವಾಗಿದೆ.
ಸಂಪುಟ ಸಭೆ ಬಳಿಕ ಪ್ರಧಾನಿ ಹಸನ್ ದಯಾಬ್ ಎಲ್ಲ ಸಚಿವರ ರಾಜೀನಾಮೆಗಳನ್ನು ರಾಷ್ಟ್ರಾಧ್ಯಕ್ಷರಿಗೆ ಸಲ್ಲಿಸಿದ್ದಾರೆ ಎಂದು ಆರೋಗ್ಯ ಸಚಿವ ಹಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ಫೋಟದ ಬಳಿಕ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ. ಹೀಗಾಗಿ ಬಹಳಷ್ಟು ಸಚಿವರು ರಾಜೀನಾಮೆ ನೀಡುವ ಅಥವಾ ಅಧಿಕಾರ ತ್ಯಜಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿಯೇ ಸಚಿವ ಸಂಪುಟವೇ ರಾಜೀನಾಮೆ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಸ್ಫೋಟದ ಬಳಿಕ ದೇಶದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಯ ಹೊಸ ಅಲೆಯೇ ಶುರುವಾಗಿದೆ. 2013ರಲ್ಲಿ ಸಂಗ್ರಹಿಸಿಡಲಾಗಿದ್ದ ಅಮೋನಿಯಂ ನೈಟ್ರೇಟ್ನಿಂದ ಅಪಾಯ ಕಾದಿದೆ ಎಂದು ಹಲವು ಎಚ್ಚರಿಕೆಗಳನ್ನು ನೀಡಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜನರು ಸಂಸತ್ ಬಳಿಯೇ ಪ್ರತಿಭಟನೆ ನಡೆಸಿದ್ದರು. ಕಲ್ಲುತೂರಾಟ, ದೊಂಬಿ, ಬೆಂಕಿ ಹಚ್ಚುವುದು ಮೊದಲಾದ ದುಷ್ಕೃತ್ಯಗಳಲ್ಲಿ ತೊಡಗಿದ್ದಾರೆ. ಆಗಸ್ಟ್ 4ರಂದು ಸಂಭವಿಸಿದ ಸ್ಫೋಟದಲ್ಲಿ ಈವರೆಗೆ 160 ಜನರು ಮೃತಪಟ್ಟಿದ್ದರೆ, 6000 ಜನರು ಗಾಯಗೊಂಡಿದ್ದಾರೆ. ಅಂದಾಜು ಮೂರು ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.