ಆಟೋ ಚಾಲನೆಗೆ ಪರವಾನಗಿ ನೀಡಿ

auto strike
ಹೊಸ ಆಟೋಗಳಿಗೆ ಪರವಾನಗಿ ನೀಡುವಂತೆ ಒತ್ತಾಯಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ರಾಮಪ್ಪ, ಕಿರಣ್, ಮುರುಗೇಶ್, ಗೋವಿಂದಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Published on

ಶಿವಮೊಗ್ಗ: ಹೊಸದಾಗಿ ಆಟೋ ಖರೀದಿಸಿದರೆ ಶಿವಮೊಗ್ಗ ಆರ್‌ಟಿಒ ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ ಅದನ್ನು ರಸ್ತೆಗಿಳಿಸಲು ಪರವಾನಗಿ ನೀಡುವುದಿಲ್ಲ. ಇಂತಹದೊಂದು ವಿಚಿತ್ರ ಸಮಸ್ಯೆ ಎದುರಿಸುತ್ತಿರುವ ಸಾವಿರಕ್ಕೂ ಹೆಚ್ಚು ಆಟೋಗಳು ಶಿವಮೊಗ್ಗದಲ್ಲಿವೆ. ಆರ್‌ಟಿಒ ನಡೆಯಿಂದ ಬೇಸತ್ತಿರುವ ಆಟೋ ಚಾಲಕರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೊಸದಾಗಿ ಖರೀದಿಸಿರುವ ಆಟೋಗಳನ್ನು ಚಲಾಯಿಸಲು ಪರವಾನಗಿ ನೀಡದ ಕಾರಣ ಬಂಡವಾಳ ಹೂಡಿಕೆ ಮಾಡಿ ಆಟೋ ಖರೀದಿಸಿದವರಿಗೆ ಸಾಲದ ಹೊರೆ ಹೆಗಲೇರುತ್ತಿದೆ. ಅವರ ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ. ಸಾಲಕ್ಕೆ ಬಡ್ಡಿ ಕಟ್ಟುವುದೇ ಸಮಸ್ಯೆಯಾಗಿದೆ. ಕೂಡಲೇ ಇಂತಹ ಆಟೋಗಳ ಚಾಲನೆಗೆ ಪರವಾನಗಿ ನೀಡಬೇಕೆಂದು ಆಗ್ರಹಿಸಿದರು.
ಪರವಾನಗಿ ಇಲ್ಲದೆ ಆಟೋ ಚಲಾಯಿಸಿದರೆ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ. ಚಾಲಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಇಂತಹ ಆಟೋಗಳನ್ನು ಚಲಾಯಿಸುವುದೂ ಸರಿಯಲ್ಲ. ಆಟೋ ಚಾಲನೆಯಿಂದಲೇ ವೃತ್ತಿ ಬದುಕು ಕಂಡುಕೊಂಡು ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನಮಗೆ ದಾರಿ ಕಾಣದಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಶಾಸಕ ಎಸ್.ಎನ್.ಚನ್ನಬಸಪ್ಪ ಕೂಡಾ ಆರ್‌ಟಿಒಗೆ ಪತ್ರ ಬರೆದು ಪರವಾನಗಿ ನೀಡುವಂತೆ ಸೂಚಿಸಿದ್ದಾರೆ. ಆದರೆ ಆರ್‌ಟಿಒ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಆಟೋ ಚಾಲಕರಾದ ಗೋವಿಂದಪ್ಪ, ಮುರುಗೇಶ್, ಅಸ್ಲಾಂ, ರಾಮಪ್ಪ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net