ನಗರಸಭೆ ವ್ಯಾಪ್ತಿ ಆಸ್ತಿಗೆ ಗ್ರಾಪಂ ದಾಖಲೆ ವಿತರಣೆ?

layout story
ಲೇಔಟ್​ ಮಾದರಿ
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ನಗರ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಬಡಾವಣೆಯ ನಿವೇಶನಗಳಿಗೆ ಗ್ರಾಪಂನಿಂದ ಇ&ಸ್ವತ್ತು ದಾಖಲೆ ನೀಡುತ್ತಿರುವುದು ಅವ್ಯಾಹತವಾಗಿದೆ.

ಜಿಲ್ಲೆಯಲ್ಲಿ ಭೂಮಿ, ನಿವೇಶಗಳ ಬೆಲೆಯು ದಿನೇದಿನೆ ಹೆಚ್ಚಾಗುತ್ತಿದ್ದು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಜಮೀನುಗಳು ವಾಣಿಜ್ಯ, ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿ, ಬಡಾವಣೆಗಳನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ.

ಕೃಷಿ ಜಮೀನುಗಳನ್ನು ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಬೇಕಾದರೆ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮ ಪಾಲನೆ ಮಾಡಬೇಕು. ಆದರೆ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ನಿಯಮಗಳನ್ನು ಪಾಲನೆ ಮಾಡದೆ ಬಡಾವಣೆ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ನಗರಸಭೆಗೆ 5 ಕಿಮೀ ವ್ಯಾಪ್ತಿಯಲ್ಲಿರುವ ಯಾವುದೇ ಜಮೀನನ್ನು ಬಡವಣೆಗಳಾಗಿ ನಿರ್ಮಾಣ ಮಾಡಿದರೆ, ಅಲ್ಲಿನ ನಿವೇಶಗಳಿಗೆ ಸಂಬಂಧಿಸಿದ ಇ&ಸ್ವತ್ತು ದಾಖಲೆ ನಗಸಭೆಯಲ್ಲಿ ಪಡೆದುಕೊಳ್ಳಬೇಕು. ಆದರೆ ಕೋಲಾರದಲ್ಲಿ ಬಡಾವಣೆಗಳು ನಗರಸಭೆ ವ್ಯಾಪ್ತಿಯಲ್ಲಿ ಇದ್ದರೂ ಸಹ ಗ್ರಾಮ ಪಂಚಾಯಿತಿಗಳಿಂದ ಇ&ಸ್ವತ್ತು ನೀಡಲಾಗುತ್ತಿದೆ. ನಗರಸಭೆಗೆ ತೆರಿಗೆ ಹೆಚ್ಚು ಪಾವತಿ ಮಾಡಬೇಕು. ಆದ್ದರಿಂದ ಮಾಲೀಕರು ಗ್ರಾಪಂನಿಂದ ನಿವೇಶನ ಖರೀದಿದಾರರಿಗೆ ದಾಖಲೆ ಮಾಡಿಸಿಕೊಡಲು ಮುಂದಾಗಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗಿ ಬಡಾವಣೆಗಳು ಮತ್ತು ನಿವೇಶನಗಳಾಗಲು ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆದೇಶ ಬೇಕು. ನೂತನ ಬಡಾವಣೆ ಮಾಡುವವರು ಭೂ ಪರಿವರ್ತನೆಯ ಸಂಬಂಧ ಲಕ್ಷಾಂತರ ರೂ. ಅಭಿವೃದ್ಧಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಾರೆ. ಇದಲ್ಲದೇ, ಜಿಲ್ಲಾಧಿಕಾರಿಗಳ ಆದೇಶ ಪಡೆಯಲು ಬಡಾವಣೆಯ ನಕ್ಷೆ, ಅಗತ್ಯ ಮೂಲ ಸೌಲಭ್ಯಗಳಾದ ರಸ್ತೆಗಳು, ಪಾರ್ಕ್​, ಆಟದ ಮೈದಾನ ಇತ್ಯಾದಿಗಳಿಗೆ ಸ್ಥಳದ ಅವಕಾಶ ಇದೆಯೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತದೆ. ಅನುಮೋದನೆಯಲ್ಲಿ ಬಡಾವಣೆಯು ನಗರಸಭೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸ್ಪಷ್ಟವಾಗಿ ನಮೂದು ಮಾಡಲಾಗಿರುತ್ತದೆ.

ಆದಾಗ್ಯೂ ಕೋಲಾರದಲ್ಲಿ ಅಕ್ರಮವಾಗಿ ಖಾಸಗಿ ಬಡಾವಣೆಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿದ್ದು, ಸರ್ಕಾರಕ್ಕೆ ಬರಬೇಕಾಗಿರುವ ತೆರಿಗೆ ಸೋರಿಕೆಯಾಗುತ್ತಿದ್ದರೂ ಸಂಬಂಧಿಸಿದ ಅಧಿಖಾರಿಗಳು ವಸೂಲಿಗೆ ಮುಂದಾಗದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ನಗರಕ್ಕೆ ಹೊಂದಿಕೊಂಡಿರುವ ಹೊನ್ನೇನಹಳ್ಳಿ, ಕೊಂಡರಾಜನಹಳ್ಳಿ, ಅಮ್ಮೇರಹಳ್ಳಿ ಗ್ರಾಮ ಪಂಚಾಯಿತಿಗಳು ಇವೆ. ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಬಡಾವಣೆಗಳ ಮಾಲೀಕರು ಸರ್ಕಾರಕ್ಕೆ ತೆರಿಗೆ ವಂಚಿಸಿ ಪಂಚಾಯಿತಿಗಳ ಮೋರೆ ಹೋಗಿದ್ದಾರೆ.

* ದಾಖಲೆ ತಿರುಚಿರುವವರು ಯಾರು..?

ನಗರಸಭೆ ವ್ಯಾಪ್ತಿ ಹಾರೋಹಳ್ಳಿಯ 1.5 ಎಕರೆ ಜಮೀನನ್ನು ವಸತಿ ವಿನ್ಯಾಸ ನೆ ಅನುಮೋದನೆ ಕೋರಿ ಮಾಲೀಕ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದು, ಅದರಂತೆ ಪ್ರಾಧಿಕಾರದ ಸಭೆಯಲ್ಲಿ ವಿಷಯವನ್ನು ಇಟ್ಟು ಚರ್ಚಿಸಿ 2022ರ ಅ.10 ರಂದು ಅನುಮೋದಿಸಲಾಗಿದೆ. ಒಂದೇ ಸರ್ವೇ ನಂಬರ್​ನ 1.5 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕೊಂಡರಾಜನಹಳ್ಳಿ ಗ್ರಾಪಂನಲ್ಲೂ ಅನುಮೋದನೆ ಪಡೆದಿರುವುದಾಗಿ ತಿರುಚಲಾಗಿದೆ. ಗ್ರಾಪಂ ಅಧಿಕಾರಿಗಳು ಬಡಾವಣೆಯ ಮಾಲೀಕನೊಂದಿಗೆ ಶಾಮೀಲಾಗಿ ದಾಖಲೆ ತಿರುಚಿರುವ ಆರೋಪ ಕೇಳಿ ಬಂದಿದೆ. ಆದರೆ ಬಡಾವಣೆಯ ಮಾಲೀಕ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗಿರುವ ಅನುಮೋದನೆ ಆದೇಶದ ಪತ್ರದಲ್ಲಿ ಹಾರೋಹಳ್ಳಿ ಅಂತ ಇರುವ ಕಡೆ ಇಲ್ಲಿ ಕೊಂಡರಾಜನಹಳ್ಳಿ ಗ್ರಾಪಂ ಎಂದು ತಿರುಚಿದ್ದು, ನಗರಸಭೆ ಬದಲಿಗೆ ದಾಖಲೆ ಪಡೆಯುತ್ತಿದ್ದಾರೆ. ದಾಖಲೆ ತಿರುಚಲು ಪಿಡಿಒಗಳು ಸಹ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

* ಮುಂದಿನ ದಿನಗಳಲ್ಲಿ ಸಮಸ್ಯೆ ಗ್ಯಾರಂಟಿ!

ನಗರಸಭೆ ವ್ಯಾಪ್ತಿಯಲ್ಲಿನ ಬಡಾವಣೆಗೆ ಪಂಚಾಯಿತಿಯಿಂದ ಇ&ಸ್ವತ್ತು ಪಡೆದುಕೊಂಡರೂ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ನಿವೇಶನ ಖರೀದಿ ಮಾಡಿರುವವರು ಎದುರಿಸಬೇಕಾಗುತ್ತದೆ. ಈಗಾಗಲೇ ಈ ವಿಚಾರವು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಾರಾದರು ತರಕಾರರು ಸಲ್ಲಿಸಿದರೆ ನಗರಸಭೆ ಅಧಿಕಾರಿಗಳು ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಸಿಕ್ಕಾಕಿಕೊಳ್ಳುವುದಂತೂ ಗ್ಯಾರಂಟಿ. ಆಗ ನಗರಸಭೆಯಲ್ಲಿ ಇ&ಸ್ವತ್ತು ಪಡೆದುಕೊಳ್ಳಬೇಕಾದರೆ ದುಪ್ಪಟ್ಟು ತೆರಿಗೆ ಪಾವತಿಸಬೇಕು.

ಕೋಟ್​..

ನಗರಸಭೆ ವ್ಯಾಪ್ತಿಯಲ್ಲಿನ ಬಡಾವಣೆಗಳಿಗೆ ಗ್ರಾಪಂಗಳಲ್ಲಿ ದಾಖಲೆ ಕೊಡುತ್ತಿರುವ ಬಗ್ಗೆ ಸಭೆಗಳಲ್ಲಿ ಧ್ವನಿ ಎತ್ತಲಾಗಿದೆ. ಆದರೆ ಅಧಿಕಾರಿಗಳು ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಲೇಔಟ್​ ಮಾಲೀಕರೊಂದಿಗೆ ಶಾಮೀಲಾಗಿರುವ ಅನುಮಾನ ಕಾಡುತ್ತಿದೆ.

> ರಾಕೇಶ್​, ನಗರಸಭೆ ಸದಸ್ಯ, ಕೋಲಾರ

ಕೋಟ್​....

ದಾಖಲೆಗಳನ್ನು ತಿರುಚಿರುವ ಬಗ್ಗೆ ಗಮನಕ್ಕೆ ಬಂದಿದೆ. ಪಂಚಾಯಿತಿಯ ಅಧಿಕಾರಿಗಳು ಶಾಮೀಲಾಗಿ ತಪು$್ಪ ಎಸಗಿದ್ದಾರೆಯೆ ಎಂಬುದರ ಬಗ್ಗೆ ಪರಿಶೀಲನೆ ಮಾಡಿಸಲಾಗುವುದು.

> ರಾಜೇಶ್​, ಅಧ್ಯಕ್ಷ, ಕೊಂಡರಾಜನಹಳ್ಳಿ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net