

ಶ್ರೀಹರಿಕೋಟ: ಭಾರತದ 42ನೇ ಸಂವಹನ ಉಪಗ್ರಹ ‘ಸಿಎಂಎಸ್-01’ ಯಶಸ್ವಿಯಾಗಿ ಉಡಾವಣೆ ಆಗಿದ್ದು, ಸುರಕ್ಷಿತವಾಗಿ ಕಕ್ಷೆಗೆ ಸೇರಿದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲ್ಯಾಂಚ್ಪ್ಯಾಡ್ನಿಂದ ಗುರುವಾರ ಮಧ್ಯಾಹ್ನ 3.41ಕ್ಕೆ ಉಡಾವಣೆಯಾದ ಪಿಎಸ್ಎಲ್ವಿ-ಸಿ50 ರಾಕೆಟ್ ಈ ಉಪಗ್ರಹವನ್ನು ಹೊತ್ತೊಯ್ಯಿತು.
ಉಡಾವಣೆಯಾದ 20 ನಿಮಿಷದಲ್ಲಿ ಸ್ಯಾಟಲೈಟ್ ಉಪಜಿಯೋ ಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ (ಸಬ್ಜಿಟಿಒ) ತಲುಪಿತು. ನಂತರದಲ್ಲಿ ಈ ಸ್ಯಾಟಲೈಟ್ನ್ನು ನೋದಕ ಶಕ್ತಿ ಮೂಲಕ ನಿಗದಿತ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ. ‘ಸಿಎಂಎಸ್-01’ ಉಪಗ್ರಹದ ಜೀವಿತಾವಧಿ 7 ವರ್ಷವಾಗಿದ್ದು, ಅಂಡಮಾನ್-ನಿಕೋಬಾರ್ ಹಾಗೂ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳು ಸೇರಿ ಇಡೀ ಭಾರತಕ್ಕೆ ಸಿ-ಬ್ಯಾಂಡ್ ಸೇವೆ ವಿಸ್ತರಿಸಲಿದೆ. 11 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಜಿಸ್ಯಾಟ್-12 ಉಪಗ್ರಹವನ್ನು ‘ಸಿಎಂಎಸ್-01’ ಬದಲಿಸಲಿದೆ. ಕರೊನಾ ಸಾಂಕ್ರಾಮಿಕದ ಕಾರಣ ಮುಂದೂಡಲ್ಪಟ್ಟಿರುವ ಚಂದ್ರಯಾನ-3 ಯೋಜನೆಯ ಪರೀಕ್ಷಾರ್ಥ ಮಿಷನ್ಗಳು, ಆದಿತ್ಯ ಎಲ್-1, ಗಗನಯಾನ ಹಾಗೂ ಜಿಎಸ್ಎಲ್ವಿ, ಎಸ್ಎಸ್ಎಲ್ವಿ ವಾಹಕಗಳ ಮಿಷನ್ಗಳಿಗೂ ಮುಂದಿನ ವರ್ಷ ಮರುಚಾಲನೆ ನೀಡಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ವರ್ಷದ ಕೊನೆಯ ಉಡಾವಣೆ: ಗುರುವಾರ ಉಡಾವಣೆಯಾದ ಪಿಎಸ್ಎಲ್ವಿ-ಸಿ 50 ಶ್ರೀಹರಿಕೋಟದಿಂದ ಉಡಾವಣೆಯಾದ 77ನೇ ಮತ್ತು ಪಿಎಸ್ಎಲ್ವಿಯ 52ನೇ ರಾಕೆಟ್ ಆಗಿದ್ದು, ಎಕ್ಸ್ಎಲ್ ಸಂರಚನೆ (ಆರು ಸ್ಟ್ರಾಪ್-ಆನ್ ಮೋಟಾರ್) ಹೊಂದಿದ 22ನೇ ಪಿಎಸ್ಎಲ್ವಿ ರಾಕೆಟ್ ಇದಾಗಿತ್ತು. ಕರೊನಾ ಸಂಕಷ್ಟ ಎದುರಾಗಿರುವ ಈ ವರ್ಷ ಇಸ್ರೊ ಉಡಾವಣೆ ಮಾಡಿರುವ ಎರಡನೇ ಮತ್ತು ಕೊನೆಯ ರಾಕೆಟ್ ಇದಾಗಿದೆ. ನ. 7ರಂದು ಸರ್ವಋತುವಿನಲ್ಲೂ ಭೂಮಿಯ ಚಿತ್ರವನ್ನು ಸೆರೆ ಹಿಡಿಯುವ ಇಒಎಸ್-01 ಸ್ಯಾಟಲೈಟ್ ಸೇರಿ ವಿದೇಶದ 9 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.
ಕಕ್ಷೆ ಸೇರಿರುವ ‘ಸಿಎಂಎಸ್-01’ ಉಪಗ್ರಹವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ನಾಲ್ಕು ದಿನದಲ್ಲಿ ಇದನ್ನು ಜಿಟಿಒ ಕಕ್ಷೆಗೆ ಸೇರಿಸಲಾಗುವುದು. ಈ ಯೋಜನೆಗೆ ಶ್ರಮಿಸಿದ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ. | ಕೆ.ಶಿವನ್ ಇಸ್ರೊ ಅಧ್ಯಕ್ಷ
ಖಾಸಗಿ ಉಪಗ್ರಹ
ಸ್ಟಾರ್ಟಪ್ವೊಂದು ಅಭಿವೃದ್ಧಿ ಪಡಿಸಿರುವ ಭೂಮಿಯ ನಿಗಾವಣೆ ಇರಿಸುವ ‘ಆನಂದ್’ ಸ್ಯಾಟಲೈಟ್ನ್ನು ಪಿಎಸ್ಎಲ್ವಿ-ಸಿ51 ರಾಕೆಟ್ ಮೂಲಕ ಮುಂಬರುವ ದಿನಗಳಲ್ಲಿ ಇಸ್ರೊ ಉಡಾವಣೆ ಮಾಡಲಿದೆ. ಬಾಹ್ಯಾಕಾಶದಲ್ಲಿ ಖಾಸಗಿ ವಲಯ ಪಾಲ್ಗೊಳ್ಳಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದರಿಂದ ಅಂತರಿಕ್ಷ ಪರಿಶೋಧನೆಯಲ್ಲಿ ಖಾಸಗಿ ಸಂಸ್ಥೆಗಳಿಗೂ ಅವಕಾಶ ತೆರೆದುಕೊಳ್ಳುತ್ತಿದೆ ಎಂದು ಕೆ.ಶಿವನ್ ಹೇಳಿದ್ದಾರೆ.
ಚೀನಾದ ಚಂದ್ರಾನ್ವೇಷಣೆ ಯಶಸ್ವಿ
ಬೀಜಿಂಗ್: ಚಂದ್ರನ ಮೇಲ್ಮೈ ಮಾದರಿಗಳನ್ನು ಹೊತ್ತ ಚೀನಾದ ಷಾಂಗೆ-5 ಬಾಹ್ಯಾಕಾಶ ನೌಕೆ ಗುರುವಾರ ಭೂಮಿಗೆ ಯಶಸ್ವಿಯಾಗಿ ಮರಳಿದೆ. 40 ವರ್ಷಗಳಲ್ಲಿ ಚಂದ್ರನ ಮಾದರಿ ತಂದಿರುವುದು ಇದೇ ಮೊದಲ ಸಲವಾಗಿದೆ. ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಸಿಜಿವಾಂಗ್ ಬಾನರ್ನಲ್ಲಿ ನೌಕೆ ಭೂಸ್ಪರ್ಶ ಮಾಡಿತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್ಎಸ್ಎ) ತಿಳಿಸಿದೆ. ಷಾಂಗೆ-5 ಮಿಷನ್ ಯಶಸ್ವಿಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಝಾಂಗ್ ಕೆಜಿಯಾನ್ ಘೋಷಿಸಿದ್ದಾರೆ. 2004ರಲ್ಲಿ ಆರಂಭವಾದ ಚಂದ್ರಾನ್ವೇಷಣೆಯ ಮೂರು ಹಂತದ ಕಾರ್ಯಕ್ರಮ ಇದರೊಂದಿಗೆ ಪೂರ್ಣಗೊಂಡಿದೆ.
ಜಿನ್ಪಿಂಗ್ ಅಭಿನಂದನೆ: ಯೋಜನೆ ಯಶಸ್ವಿಯಾಗಿರುವುದಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಅತಿ ಸಂಕೀರ್ಣ ಕಾರ್ಯವನ್ನು ಎಲ್ಲ ಅಡೆತಡೆಗಳನ್ನು ಮೀರಿ ಯಶಸ್ವಿಗೊಳಿಸಿದ್ದು ಮಹತ್ತರ ಸಾಧನೆ ಎಂದು ವರ್ಣಿಸಿದ್ದಾರೆ.