

ನವದೆಹಲಿ: ಸೆಪ್ಟೆಂಬರ್ ವೇಳೆಗೆ ಭಾರತ ಸೂರ್ಯ ಶಿಕಾರಿಗೆ ಸಿದ್ಧವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಂಬರುವ ಕಾರ್ಯಾಚರಣೆಗಳ ವಿವರಗಳನ್ನು ಬಹಿರಂಗಪಡಿಸಿದ ಸಂಸ್ಥೆಯ ಮುಖ್ಯಸ್ಥ ಎಸ್. ಸೋಮನಾಥ್, ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್-1 ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆಗೆ ಸಜ್ಜುಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಸಂಶೋಧನಾ ಕೇಂದ್ರದಲ್ಲಿ ರೂಪುಗೊಂಡಿರುವ ಈ ಗಗನನೌಕೆ ಶ್ರೀಹರಿಕೋಟಾಗೆ ಆಗಮಿಸಿದ್ದು, ಉಡ್ಡಯನಕ್ಕಾಗಿ ಸಿದ್ಧಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಇದಲ್ಲದೆ, ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆ ಗಗನಯಾನ ಉಡಾವಣೆ ಕುರಿತು ಸೋಮನಾಥ ವಿವರ ನೀಡಿದ್ದಾರೆ. ಈ ಯೋಜನೆ ಇನ್ನೂ ಪ್ರಗತಿಯಲ್ಲಿದೆ. ಮಾನವಸಹಿತ ಕಾರ್ಯಾಚರಣೆಗೂ ಮುನ್ನ ಹಲವು ಪರೀಕ್ಷೆ ನಡೆಸಬೇಕಾಗುತ್ತದೆ. 2025ರ ವೇಳೆಗೆ ಇದನ್ನು ಉಡಾವಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ರೋವರ್ ಮುಂದಿನ ಕೆಲಸ ಏನು?: ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆ, ಮಣ್ಣು ಮತ್ತು ಬಂಡೆಗಳ ಬಗ್ಗೆ ಅಧ್ಯಯನ ನಡೆಸಲಿದೆ. ಇದು ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈನ ಅಯಾನುಗಳು, ಎಲೆಕ್ಟ್ರಾನ್ಗಳ ಸಾಂದ್ರತೆ ಮತ್ತು ಉಷ್ಣ, ಇತರ ಗುಣಲಕ್ಷಣಗಳನ್ನು ಅಳೆಯುತ್ತದೆ. ಈ ಪ್ರದೇಶಕ್ಕೆ ಹಿಂದೆಂದೂ ಯಾವುದೇ ದೇಶ ನೌಕೆ ಕಳುಹಿಸಿಲ್ಲ. ಹೀಗಾಗಿ ಈ ಅಧ್ಯಯನ ಮಹತ್ವದ್ದಾಗಿದೆ. 14 ದಿನಗಳಲ್ಲಿ ರೋವರ್ ಚಂದ್ರನ ಮೇಲೆ ನಿಶ್ಚಿತ ಮಾರ್ಗದಲ್ಲಿ ಚಲಿಸಲಿದೆ. ಹಲವು ಪ್ರಯೋಗ, ಪರಿಶೀಲನೆ ನಡೆಸಲಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಇಸ್ರೋ ಡೇಟಾ ಸೆಂಟರ್ಗೆ ಕಳುಹಿಸುತ್ತದೆ. ಲ್ಯಾಂಡರ್ ಮೂಲಕವೂ ಹಲವು ಮಾಹಿತಿಗಳನ್ನು ಪಡೆಯಬಹುದು. ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಲು ಅನುಕೂಲವಾಗುವಂತೆ ಲ್ಯಾಂಡರ್ ಮತ್ತು ರೋವರ್ ಸಿದ್ಧಪಡಿಸಲಾಗಿದೆ. ಇವುಗಳ ಪವರ್ ಬ್ಯಾಕಪ್ ಸಾಮರ್ಥ್ಯ 14 ದಿನಗಳವರೆಗೆ ಇರಲಿದೆ. ನಂತರ ಮಾಹಿತಿ ರವಾನೆ ಮಾಡುವುದನ್ನು ಸ್ಥಗಿತಗೊಳಿಸಲಿವೆ.
ಚಂದ್ರಯಾನದ ಅದ್ಭುತ ಯಶಸ್ಸಿಗೆ ವಿಜ್ಞಾನಿಗಳನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ (ಆ.26) ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಪೀಣ್ಯದಲ್ಲಿರುವ ಇಸ್ರೋ ನಿಯಂತ್ರಣ ಕಚೇರಿಗೆ ತೆರಳಲಿದ್ದಾರೆ. ಒಂದು ತಾಸು ವಿಜ್ಞಾನಿಗಳೊಂದಿಗೆ ಮಾತನಾಡಲಿದ್ದಾರೆ. ಚಂದ್ರಯಾನ-3ರ ಲ್ಯಾಂಡಿಂಗ್ ದಿನ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ನಿಂದ ವರ್ಚುವಲ್ ವೇದಿಕೆ ಮೂಲಕ ಜತೆಯಾಗಿ ವಿಜ್ಞಾನಿಗಳನ್ನು ಪ್ರಶಂಸಿಸಿದ್ದರು. ಚಂದ್ರಯಾನ-2ರ ವೇಳೆ ಇಸ್ರೋ ಕೇಂದ್ರದಲ್ಲಿ ಮೋದಿ ಹಾಜರಿದ್ದರು.
ಐತಿಹಾಸಿಕ ಸಾಧನೆ ಮಾಡಿರುವ ಇಸ್ರೋ ವಿಜ್ಞಾನಿಗಳನ್ನು ವಿಧಾನಸೌಧದಲ್ಲಿ ಸನ್ಮಾನಿಸಲು ಸರ್ಕಾರ ನಿರ್ಧರಿಸಿದೆ. ವಿಜ್ಞಾನಿಗಳು ಹಗಲಿರುಳು ಶ್ರಮಿಸಿದ್ದಾರೆ. ದೇಶದ ಒಟ್ಟು 1 ಸಾವಿರ ವಿಜ್ಞಾನಿಗಳು ಚಂದ್ರಯಾನ -3ರಲ್ಲಿ ತೊಡಗಿಸಿ ಕೊಂಡಿದ್ದು, ಬೆಂಗಳೂರಿನಿಂದಲೇ 500 ಜನ ಪಾಲ್ಗೊಂಡಿದ್ದಾರೆ. ಸೆಪ್ಟೆಂಬರ್ 2ರ ನಂತರ ಬ್ಯಾಂಕ್ವೆಟ್ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಇಸ್ರೋ ಅಧ್ಯಕ್ಷ ಎಸ್. ಸೋಮ ನಾಥ್ ಸೇರಿದಂತೆ ವಿಜ್ಞಾನಿಗಳನ್ನು ಸರ್ಕಾರ ಗೌರವಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಅಧ್ಯಕ್ಷ ಎಸ್. ಸೋಮನಾಥ್ ಹಾಗೂ ವಿಜ್ಞಾನಿಗಳನ್ನು ಅಭಿನಂದಿಸಿದ ಸಿಎಂ, 3 ಲಕ್ಷ 84 ಸಾವಿರ ಕಿಮೀ ಪ್ರಯಾಣ ಮಾಡಿರುವ ಗಗನನೌಕೆಯ ಸಾಧನೆ ಕಡಿಮೆಯಲ್ಲ. ಇದು ಭಾರತದ ಹೆಮ್ಮೆ. ಇಸ್ರೋಗೆ ರಾಜ್ಯ ಸರ್ಕಾರದ ಸಹಕಾರ ಬೆಂಬಲ ಇರಲಿದೆ ಎಂದು ಹೇಳಿದರು. ಇಸ್ರೋ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆಗೆ ನೋಡುವಂಥ ಕೆಲಸವಾಗಿದೆ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು ಎಂದರು.
ಬುಧವಾರ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಂತರ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಸಂಚಾರ ಆರಂಭಿಸಿದೆ. ಇದು 14 ದಿನಗಳವರೆಗೆ (ಚಂದ್ರನ ಲೆಕ್ಕದಲ್ಲಿ ಒಂದು ಹಗಲು) ಕಾರ್ಯಾಚರಣೆ ನಡೆಸುತ್ತದೆ. ಈ ಅವಧಿಯಲ್ಲಿ ಚಂದ್ರನ ದಕ್ಷಿಣ ಭಾಗದಲ್ಲಿ ಬೆಳಕು ಇರುತ್ತದೆ. ಈ ದಿನಗಳಲ್ಲಿ ಲ್ಯಾಂಡರ್ ಮತ್ತು ರೋವರ್ ಸಕ್ರಿಯವಾಗಿ ಇಸ್ರೋದ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ಕಳಿಸುತ್ತವೆ. ಆ ಬಳಿಕ ಮತ್ತೆ 14 ದಿನ ಈ ಭಾಗದಲ್ಲಿ ರಾತ್ರಿಯಾಗುತ್ತದೆ. ಈ ವೇಳೆ ವಿಕ್ರಮ್ ಮತ್ತು ಪ್ರಜ್ಞಾನ್ ನಿಷ್ಕ್ರಿಯವಾಗುತ್ತವೆ. ಆದರೆ, ಮತ್ತೆ ಅಲ್ಲಿ ಬೆಳಕು ಬಿದ್ದಾಗ ಕೆಲಸ ಮಾಡುವ ಸಾಧ್ಯತೆಯನ್ನು ಇಸ್ರೋ ವಿಜ್ಞಾನಿಗಳು ತಳ್ಳಿಹಾಕಿಲ್ಲ.