ಇಸ್ರೋ ಶತಕ ಉತ್ತುಂಗ; 100ನೇ ರಾಕೆಟ್ ಯಶಸ್ವಿ ಉಡಾವಣೆ

Isro
Published on

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ 100ನೇ ಉಡಾವಣೆಯ ಇತಿಹಾಸ ನಿರ್ವಿುಸಿತು. ಭೂಮಂಡಲ, ವೈಮಾನಿಕ, ಜಲಯಾನ ಹಾಗೂ ನಿಖರ ಕೃಷಿ ಮತ್ತಿತರ ಕ್ಷೇತ್ರಗಳಲ್ಲಿ ನೆರವಾಗುವ ಆಧುನಿಕ ನ್ಯಾವಿಗೇಷನ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಮತ್ತೊಮ್ಮೆ ಜಾಗತಿಕವಾಗಿ ಗಮನ ಸೆಳೆಯಿತು. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್

ಉಡಾವಣೆ ಮಾಡ ಲಾಯಿತು. ಇದು ಜ.16ರಂದು ಅಧಿಕಾರ ಸ್ವೀಕರಿಸಿದ ಇಸ್ರೋ ನೂತನ ಅಧ್ಯಕ್ಷ ವಿ. ನಾರಾಯಣನ್ ಸಾರಥ್ಯದಲ್ಲಿ ನಡೆದ ಮೊದಲ ಕಾರ್ಯಾಚರಣೆಯಾಗಿದೆ. ಇದಕ್ಕೂ ಮುನ್ನ, 2024ರ ಡಿ.30ರಂದು 99ನೇ ಮಿಷನ್​ನಲ್ಲಿ ಎರಡು ಉಪಗ್ರಹಗಳ ಜೋಡಣೆಯ ಸ್ಪೇಸ್ ಡಾಕಿಂಗ್ ಪ್ರಯೋಗವನ್ನು ಇಸ್ರೋ ಯಶಸ್ವಿಯಾಗಿ ನಡೆಸಿತ್ತು. ‘ಇಸ್ರೋದ 2025ರ ಮೊದಲ ಸಾಹಸ ಯಶಸ್ವಿಯಾಗಿದೆಯೆಂದು ಘೋಷಿಸಲು ಅತೀವ ಸಂತಸವಾಗುತ್ತಿದೆ. ಉಪಗ್ರಹವನ್ನು ನಿಗದಿತ ಜಿಟಿಒ ಕಕ್ಷೆಗೆ ಸೇರಿಸಲಾಯಿತು. ಈ ಮಿಷನ್ 100ನೇ ಲಾಂಚ್ ಆಗಿದ್ದು ತುಂಬಾ ಮಹತ್ವದ ಮೈಲಿಗಲ್ಲಾಗಿದೆ. ಈ ಮಿಷನ್​ನ ದತ್ತಾಂಶ ಬಂದಿದ್ದು ಉಪಗ್ರಹದ ಎಲ್ಲ ವ್ಯವಸ್ಥೆಗಳು ಸಹಜವಾಗಿವೆ’ ಎಂದು ನಾರಾಯಣನ್ ವಿವರಿಸಿದರು.

1979ರಲ್ಲಿ ಆರಂಭ: 1979ರ ಆ.10ರಂದು ಎಸ್​ಎಲ್​ವಿ-3 ಇ1/ರೋಹಿಣಿ ಟೆಕ್ನಾಲಜಿ ಪೇಲೋಡ್ ಪ್ರಥಮ ಉಡಾವಣೆಯಾಗಿತ್ತು. ಅದರ ನಂತರ, ಇದುವರೆಗಿನ 100 ಲಾಂಚ್​ಗಳಲ್ಲಿ ಇಸ್ರೋ 548 ಉಪಗ್ರಹಗಳನ್ನು ಕಕ್ಷೆಗೆ ‘ಲಿಫ್ಟ್’ ಮಾಡಿದೆ. ಅವುಗಳಲ್ಲಿ ವಿದೇಶಗಳ ಸ್ಯಾಟಿಲೈಟ್​ಗಳೂ ಸೇರಿವೆ. ಎತ್ತಿನ ಬಂಡಿ ಮತ್ತು ಸೈಕಲ್​ನಲ್ಲಿ ರಾಕೆಟ್ ಭಾಗಗಳನ್ನು ಸಾಗಿಸುವುದರಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆವರೆಗೆ ಇಸ್ರೋ ಪಯಣ ಅನನ್ಯ.

ಅಭೂತಪೂರ್ವ ದೃಶ್ಯ: ಯಶಸ್ವಿ ಉಡಾವಣಾ ಶತಕದ ಕೆಲವು ಗಂಟೆ ನಂತರ ಜಿಎಸ್​ಎಲ್​ವಿ-ಎಫ್15ರ ಒಂದು ನಿಮಿಷದ ಫೂಟೇಜ್​ಅನ್ನು ಇಸ್ರೋ ಎಕ್ಸ್​ನಲ್ಲಿ ಹಂಚಿಕೊಂಡಿದೆ. ‘ಇದೊಂದು ಅಭೂತಪೂರ್ವ ದೃಶ್ಯವಾಗಿದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಸ್ಪೂರ್ತಿ ನೀಡುವುದನ್ನು ಮುಂದುವರಿಸುತ್ತದೆ’ ಎಂದು ಅದು ವರ್ಣಿಸಿದೆ.

5 ವರ್ಷದಲ್ಲಿ 100 ಮಿಷನ್: 100 ಮಿಷನ್​ನ ಮೈಲಿಗಲ್ಲು ಸ್ಥಾಪಿಸಲು ಇಸ್ರೋಗೆ 46 ವರ್ಷ ತಗಲಿರಬಹುದು. ಆದರೆ, ಮುಂಬರುವ ಅರ್ಧ ದಶಕದಲ್ಲಿ ಮುಂದಿನ ಶತಕ ಬಾರಿಸುವ ವಿಶ್ವಾಸವನ್ನು ಇಸ್ರೋ ಹೊಂದಿದೆ. ಮುಂದಿನ 5 ವರ್ಷದಲ್ಲಿ 100 ಲಾಂಚ್​ಗಳು ಸಾಧ್ಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾರಾಯಣನ್, ‘ನೀವು ಸರಿಯಾದ ಪ್ರಶ್ನೆಯನ್ನೇ ಕೇಳಿದ್ದೀರಿ. ಅದು ಸಾಧ್ಯವಿದೆ’ ಎಂದು ಆತ್ಮವಿಶ್ವಾಸದಿಂದ ನುಡಿದರು.

ಎನ್​ವಿಎಸ್-02 ಉದ್ದೇಶ ಏನು?: ಭಾರತೀಯ ಉಪಖಂಡ ಮಾತ್ರವಲ್ಲದೆ ಭಾರತದ ಭೂಪ್ರದೇಶದಿಂದ 1,500 ಕಿಮೀ ವರೆಗಿನ ದೂರದಲ್ಲಿರುವ ಪ್ರದೇಶಗಳ ಬಳಕೆದಾರರಿಗೆ ನಿಖರ ಸ್ಥಾನ, ವೇಗ, ಸಮಯ ಒದಗಿಸುವುದು ಎನ್​ವಿಎಸ್-02 ಉಪಗ್ರಹದ ಉದ್ದೇಶ. ಸರಣಿಯ ಮೊದಲ ಸ್ಯಾಟಿಲೈಟ್ ಎನ್​ವಿಎಸ್-01 ಉಪಗ್ರಹವನ್ನು 2023 ಮೇ 29ರಂದು ಜಿಎಸ್​ಎಲ್​ವಿ-ಎಫ್12 ಉಡಾಯಿಸಿದ ನಂತರದ ಜಿಎಸ್​ಎಲ್​ವಿ-ಎಫ್15 ಮಿಷನ್ ಇದಾಗಿತ್ತು.

19 ನಿಮಿಷದ ಪಯಣ: 27.30 ಗಂಟೆಗಳ ಕೌಂಟ್​ಡೌನ್ ಮುಗಿಯುತ್ತಲೇ 50.9 ಮೀಟರ್ ಎತ್ತರದ ಜಿಯೋಸಿಂಕ್ರನಸ್ ಉಪಗ್ರಹ ಉಡಾವಣಾ ವಾಹನ (ಜಿಎಸ್​ಎಲ್​ವಿ-ಎಫ್15) ರಾಕೆಟ್, ಬುಧವಾರ ಬೆಳಗ್ಗೆ 6.23ಕ್ಕೆ ನಭೋಮಂಡಲಕ್ಕೆ ನೆಗೆದು ಉಪಗ್ರಹವನ್ನು (ಪೇಲೋಡ್) ಒಯ್ದಿತು. 19 ನಿಮಿಷದ ಪಯಣದ ನಂತರ ಪೇಲೋಡ್ ಆದ ಎನ್​ವಿಎಸ್-02 ನ್ಯಾವಿಗೇಷನ್ ಉಪಗ್ರಹವನ್ನು ರಾಕೆಟ್ ಯಶಸ್ವಿಯಾಗಿ ಬೇರ್ಪಡಿಸಿ ಉದ್ದೇಶಿತ ಜಿಯೋಸಿಂಕ್ರನಸ್ ಟ್ರಾನ್ಸ್​ಫರ್ ಆರ್ಬಿಟ್​ಗೆ (ಜಿಟಿಒ) ಸೇರಿಸಿತು. ಇದು ನ್ಯಾವಿಗೇಷನ್ ವಿದ್ ಇಂಡಿಯನ್ ಕಾನ್​ಸ್ಟಲೇಷನ್ (ನ್ಯಾವ್​ಐಸಿ) ಸರಣಿಯ ಎರಡನೇ ಉಪಗ್ರಹವಾಗಿದೆ.

ಬೆಂಗಳೂರಿನಲ್ಲಿ ಅಭಿವೃದ್ಧಿ: ಎನ್​ವಿಎಸ್-02 ಉಪಗ್ರಹವನ್ನು ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಅದು 2,250 ಕೆಜಿ ತೂಕದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net