ದಕ್ಷಿಣ ಗಾಜಾದಲ್ಲಿ ಇಸ್ರೇಲ್​ನ ಸತತ ಬಾಂಬಿಂಗ್; ಅಡ್ಡಕತ್ತರಿಯಲ್ಲಿ ಸಿಲುಕಿದ ಪ್ಯಾಲೆಸ್ತೀನಿಯರು

Gaza Strip
Published on

ಖಾನ್ ಯೂನಿಸ್ (ಗಾಜಾ ಪಟ್ಟಿ): ದಕ್ಷಿಣ ಗಾಜಾದ ಯೂನಿಸ್ ಖಾನ್ ನಗರದಿಂದ ಪ್ಯಾಲೆಸ್ತೀನಿಯರ ತೆರವಿಗೆ ಆದೇಶ ಹೊರಡಿಸಿರುವ ಇಸ್ರೇಲ್, ಪಟ್ಟಣದ ಮೇಲೆ ಬಾಂಬ್ ದಾಳಿ ತೀವ್ರಗೊಳಿಸಿದೆ. ಉತ್ತರದಿಂದ ದಕ್ಷಿಣಕ್ಕೆ ತೆರಳುವಂತೆ ಹೇಳಿದ್ದ ಇಸ್ರೇಲ್ ಈಗ ದಕ್ಷಿಣದ ಮೇಲೂ ಕಾಕದೃಷ್ಟಿ ಬೀರಿರುವುದರಿಂದ ಪ್ಯಾಲೆಸ್ತೀನಿಯರಿಗೆ ಹೋಗಲು ಸುರಕ್ಷಿತ ಸ್ಥಳವೇ ಇಲ್ಲದಂತಾಗಿದ್ದು ಆತಂಕ-ಅನಿಶ್ಚತತೆಗಳ ನಡುವೆ ತೊಳಲಾಡುವಂತಾಗಿದೆ. ಭೂದಾಳಿ ತೀವ್ರಗೊಳಿಸಿರುವುದರ ಜೊತೆಯಲ್ಲೇ ತೆರವು ಮಾಡುವಂತೆ ಇಸ್ರೇಲ್ ಆದೇಶಿಸಿರುವುದರಿಂದ ಅಸಹಾಯಕ ಪ್ಯಾಲೆಸ್ತೀನಿಯರು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದ್ದಾರೆ.

ಈ ನಡುವೆ, ಅ.7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದಂಥ ಹಠಾತ್ ದಾಳಿ ಇನ್ನೊಮ್ಮೆ ನಡೆದರೆ ಆ ದೇಶ ಸಂಪೂರ್ಣ ಕುಸಿದು ಹೋಗುತ್ತದೆ. ಜಗತ್ತಿನ ರಾಜಕೀಯ ಭೂಗೋಳದಿಂದ ಇಸ್ರೇಲ್ ಮಾಯವಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಸಿರಿಯಾದಲ್ಲಿ ಇರಾನ್​ನ ಐಆರ್​ಜಿಸಿ ಪಡೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಇರಾನಿ ಯೋಧರು ಮೃತರಾದ ಹಿನ್ನೆಲೆಯಲ್ಲಿ ಇರಾನ್ ಈ ಎಚ್ಚರಿಕೆ ರವಾನಿಸಿದೆ.

ಉಳಿದಿರುವುದು ಎರಡೇ ಆಯ್ಕೆ: ಇಸ್ರೇಲಿ ಪಡೆಗಳ ಮಾರಕ ಆಕ್ರಮಣ ವಿಸ್ತರಣೆ ಗೊಂಡಿರುವುದರಿಂದ ಒಂದೋ ಇಸ್ರೇಲ್ ಸೈನಿಕರ ದಾಳಿಯ ಹಾದಿಯಲ್ಲೇ ಉಳಿದುಕೊಳ್ಳುವುದು, ಇಲ್ಲವೇ ಸುರಕ್ಷತೆಯ ಖಾತರಿ ಇಲ್ಲದೆ ದಕ್ಷಿಣ ಗಾಜಾದ ಮಿತಿಯೊಳಗೇ ಪಲಾಯನ ಮಾಡುವುದು ಸಾವಿರಾರು ಪ್ಯಾಲೆಸ್ತೀನಿ ಸಂತ್ರಸ್ತರ ಮುಂದಿರುವ ಎರಡೇ ಆಯ್ಕೆಗಳಾಗಿವೆ.

15890 ಸಾವು, 41000 ಗಾಯಾಳು: ಇಸ್ರೇಲ್ ಆಕ್ರಮಣದಿಂದ ಇದುವರೆಗೆ ಮೃತಪಟ್ಟ ಪ್ಯಾಲೆಸ್ತೀನಿ ಯರ ಸಂಖ್ಯೆ 15,890 ದಾಟಿದ್ದು, 41,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯ ತಿಳಿಸಿದೆ. ಅದು ನಾಗರಿಕರು ಮತ್ತು ಹೋರಾಟ ಗಾರರ ಸಾವಿನ ನಡುವೆ ಯಾವುದೇ ವ್ಯತ್ಯಾಸ ಮಾಡಿಲ್ಲ.

ಸುರಂಗಕ್ಕೆ ನೀರು ನುಗ್ಗಿಸಲು ಸಿದ್ಧತೆ: ಹಮಾಸ್ ಸರ್ವನಾಶ ಮಾಡುವುದೇ ತನ್ನ ಪ್ರಮುಖ ಗುರಿ ಎಂದು ಘೋಷಿಸಿರುವ ಇಸ್ರೇಲ್, ಉಗ್ರಗಾಮಿಗಳನ್ನು ಹೊರಹಾಕಲು ಹಮಾಸ್​ನ ಸುರಂಗಗಳೊಳಗೆ ಅಪಾರ ಪ್ರಮಾಣದ ನೀರನ್ನು ಹರಿಸುವ ಯೋಜನೆ ರೂಪಿಸಿದೆ ಎಂದು ವಾಲ್​ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಉಗ್ರರ ವಿರುದ್ಧ ಸೆಣಸಿದ ವಕೀಲ: ಅ.7ರ ಹಠಾತ್ ದಾಳಿ ವೇಳೆ ತನ್ನನ್ನು ಅಪಹರಿಸಲು ಯತ್ನಿಸಿದ ಏಳು ಹಮಾಸ್ ಉಗ್ರರ ವಿರುದ್ಧ ಅಮಿತ್ ಸೌಸಾನಾ ಎಂಬ ಇಸ್ರೇಲಿ ವಕೀಲ ಸೆಣಸಿದ ವಿಡಿಯೋ ಫೂಟೇಜ್ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net