

ಜೆರುಸಲೆಮ್ : ಇಸ್ರೇಲ್ ಮತ್ತು ಗಾಜಾ ಪಟ್ಟಿ ನಡುವೆ ಸುಮಾರು ಎರಡು ವರ್ಷಗಳ ಕಾಲ ನಡೆದ ಯುದ್ಧಕ್ಕೆ ಮೊನ್ನೆಯಷ್ಟೇ ಕದನ ವಿರಾಮ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ತಮ್ಮ ವಶದಲ್ಲಿದ್ದ ಏಳು ಇಸ್ರೇಲಿ ಒತ್ತೆಯಾಳುಗಳನ್ನು (Israeli Hostages) ಗಾಜಾದ ಹಮಾಸ್ ಸಂಘಟನೆ ರೆಡ್ ಕ್ರಾಸ್ ಸಂಸ್ಥೆಯ ಕಸ್ಟಡಿಗೆ ನೀಡಿದ್ದು, ಬರೋಬ್ಬರಿ ಎರಡು ವರ್ಷಗಳ ಬಳಿಕ ಒತ್ತೆಯಾಳುಗಳು ಸ್ವತಂತ್ರರಾಗಿದ್ದಾರೆ.
ಇಸ್ರೇಲಿ ಮಾಧ್ಯಮಗಳು ಮಾಡಿರುವ ವರದಿಯ ಪ್ರಕಾರ, ಏಳು ಮಂದಿ ಒತ್ತೆಯಾಳುಗಳಲ್ಲಿ ಗಾಲಿ, ಜಿವ್ ಬೆರ್ಮನ್, ಮಾತನ್ ಅಂಗ್ರೆಸ್ಟ್, ಅಲೋನ್ ಓಹೆಲ್, ಓಮ್ರಿ ಮಿರಾನ್, ಐಟನ್ ಮೋರ್ ಮತ್ತು ಗೈ ಗಿಲ್ಬೋವಾ-ಡಲ್ಲಾಲ್ ಸೇರಿದ್ದಾರೆ. ಅವರ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಅವರನ್ನು ಆರೋಗ್ಯ ತಪಾಸಣೆ ಒಳಪಡಿಸಲಾಗುತ್ತದೆ.
ಇನ್ನು ಒತ್ತೆಯಾಳುಗಳನ್ನು ಹಮಾಸ್ ಸಂಘಟನೆ ಬಿಡುಗಡೆ ಮಾಡುವುದನ್ನು ದೇಶಾದ್ಯಂತ ಅಳವಡಿಸಲಾಗಿದ್ದ ಪರದೆಗಳಲ್ಲಿ ಲಕ್ಷಾಂತರ ಇಸ್ರೇಲಿಗರು ವೀಕ್ಷಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಉತ್ತರ ಗಾಜಾದಲ್ಲಿ ಬಂಧಿಸಿ ಇಡಲಾಗಿದ್ದ ಎಲ್ಲ ಒತ್ತೆಯಾಳುಗಳನ್ನು ಅಂತಾರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ, ಹಮಾಸ್ನಿಂದ ತಮ್ಮ ಕಸ್ಟಡಿಗೆ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ಇಸ್ರೇಲ್ ಬಂಧಿಸಿರುವ ನೂರಾರು ಕೈದಿಗಳ ಬಿಡುಗಡೆಗಾಗಿ ಪ್ಯಾಲೆಸ್ತೀನಿಯರು ಕೂಡ ಎದುರು ನೋಡುತ್ತಿದ್ದಾರೆ. ಅಂದಹಾಗೆ, ಎರಡು ವರ್ಷಗಳ ಯುದ್ಧದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಮಹತ್ವದ ಕದನ ವಿರಾಮ ಘೋಷಣೆಯಾಗಿದೆ. ಇದರಿಂದ ಕೇವಲ ಉಭಯ ರಾಷ್ಟ್ರಗಳು ಮಾತ್ರವಲ್ಲ ಇಡೀ ಜಗತ್ತು ನಿಟ್ಟುಸಿರು ಬಿಟ್ಟಿದೆ. ಏಕೆಂದರೆ, ಈ ಯುದ್ಧವೂ ಜಾಗತಿಕ ವ್ಯವಹಾರ ಸರಪಳಿಯನ್ನೇ ಅಲುಗಾಡಿಸಿತ್ತು. ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಎಲ್ಲ ಒತ್ತೆಯಾಳುಗಳು ಮತ್ತು ಕೈದಿಗಳ ವಿನಿಮಯ ನಡೆಯುತ್ತಿದೆ.
ಸದ್ಯ ಯುದ್ಧ ನಿಂತಿದೆ. ಇದರ ನಡುವೆ ಅಮೆರಿಕ ಪ್ರಸ್ತಾಪ ಮಾಡಿರುವ ಒಪ್ಪಂದ ಮತ್ತು ಯುದ್ಧದ ನಂತರದ ಅವಶ್ಯಕವಾಗಿ ಬೇಕಾಗಿರುವ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇತರ ನಾಯಕರೊಂದಿಗೆ ಗಾಜಾ ಹಾಗೂ ಇಸ್ರೇಲ್ಗೆ ತೆರಳಲಿದ್ದಾರೆ. ಸದ್ಯ ಬರಗಾಲದಿಂದ ಬಳಲುತ್ತಿರುವ ಗಾಜಾಗೆ ಮಾನವೀಯ ನೆರವು ಹೆಚ್ಚಾಗುವ ನಿರೀಕ್ಷೆ ಇದೆ. ಅಲ್ಲಿನ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದು, ನೆರವಿಗಾಗಿ ಎದುರು ನೋಡುತ್ತಿದ್ದಾರೆ.
ಇದೀಗ ಒತ್ತೆಯಾಳುಗಳು ತಮ್ಮ ದೇಶಕ್ಕೆ ಮರಳಿರುವುದು ಇಸ್ರೇಲ್ಗೆ ಒಂದು ನೋವಿನ ಅಧ್ಯಾಯ ಮುಗಿದಂತಾಗಿದೆ. 2023, ಅ.7ರ ಶನಿವಾರದಂದು ಇಸ್ರೇಲ್ ಮತ್ತು ಗಾಜಾ ಪಟ್ಟಿ ನಡುವೆ ಯುದ್ಧ ಆರಂಭವಾಯಿತು. ಆರಂಭದಲ್ಲಿ ಹಮಾಸ್ ಉಗ್ರರು ಇಸ್ರೇಲ್ ಕಡೆ ಗುಂಡಿನ ಮಳೆಗೆರೆದರು. ಬಳಿಕ ಇಸ್ರೇಲ್ ಕೂಡ ಪ್ರತಿದಾಳಿ ನಡೆಸಿತು. ಇದರಿಂದ ಉಭಯ ದೇಶಗಳ ನಡುವೆ ಭೀಕರ ಯುದ್ಧ ಆರಂಭವಾಯಿತು. ಈ ಯುದ್ಧದಲ್ಲಿ ಹಮಾಸ್, ಕೆಲ ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿತು. ಅದೇ ರೀತಿ ಇಸ್ರೇಲ್ ಕೂಡ ಪ್ಯಾಲೆಸ್ತಿನಿಯರನ್ನು ಸೆರೆಹಿಡಿದಿತ್ತು. ಅಂತಿಮವಾಗಿ 2 ವರ್ಷಗಳ ಬಳಿಕ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಯುದ್ಧದ ಕಾರ್ಮೋಡ ಕರಗಿದೆ. ಹೀಗಾಗಿ ಒತ್ತೆಯಾಳುಗಳಿಗೂ ಬಿಡುಗಡೆ ಭಾಗ್ಯ ದೊರೆತಿದೆ. (ಏಜೆನ್ಸೀಸ್)