

Israeli bombs: ಗಾಜಾ ಮೇಲಿನ ವಾಯುದಾಳಿಗೆ ಬ್ರೇಕ್ ಕೊಡದ ಇಸ್ರೇಲ್, ತನ್ನ ದಾಳಿಯನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಗಟ್ಟಿಯಾಗಿ ರವಾನಿಸಿದೆ. ಬಾಂಬ್‌ಗಳ ಸುರಿಮಳೆಯಿಂದ ಗಾಜಾದಲ್ಲಿ ರಕ್ತದ ಹೊಳೆಯನ್ನು ಹರಿಸಿದೆ. "ಆಲ್ಜಜೀರಾ" ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಇಸ್ರೇಲ್ ಬಾಂಬ್ ದಾಳಿಗೆ 132 ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇತ್ತೀಚಿನ ವಾಯುದಾಳಿಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದು, ಇದೀಗ ಸಾವಿನ ಸಂಖ್ಯೆ 132ಕ್ಕೆ ಏರಿದೆ. ಇಸ್ರೇಲ್ ಗಾಜಾ ಸುತ್ತಮುತ್ತಲಿನ ನಗರಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಿರುವ ಇಸ್ರೇಲ್, ರಾತ್ರಿಯ ದಾಳಿಯಲ್ಲಿ ಕನಿಷ್ಠ 100 ಪ್ಯಾಲೆಸ್ತಿಯನ್ನರನ್ನು ಬಲಿ ಪಡೆದಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಏತನ್ಮಧ್ಯೆ, ಮಧ್ಯವರ್ತಿಗಳು ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಘೋಷಿಸಲು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ, ಇಸ್ರೇಲ್ ಮಿಲಿಟರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸಿದ್ದು, ಬಾಂಬ್‌ಗಳ ಸುರಿಮಳೆಯನ್ನೇ ಹರಿಸುತ್ತಿದೆ. ಇಸ್ರೇಲ್ ಭೀಕರ ದಾಳಿಗೆ ಅನೇಕರು ಜೀವವನ್ನು ಕಳೆದುಕೊಂಡರೆ, ಹಲವು ಕುಟುಂಬಗಳ ಜೀವನ ಛಿದ್ರಗೊಂಡಿವೆ.
"ಇಸ್ರೇಲಿ ದಾಳಿಗಳು ತೀವ್ರಗೊಳ್ಳುತ್ತಿದ್ದಂತೆ, ಇದೀಗ ಉತ್ತರ ಗಾಜಾ ಪಟ್ಟಿಯಲ್ಲಿರುವ ಆಸ್ಪತ್ರೆಗಳು ತನ್ನ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಇದರಿಂದ ಜನರಿಗೆ ಚಿಕಿತ್ಸೆ ಕೊರತೆ ಎದುರಾಗಿದೆ. ಇಂಡೋನೇಷ್ಯಾದ ಆಸ್ಪತ್ರೆ ಯುದ್ಧಪೀಡಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊನೆಯ ಸರ್ಕಾರಿ ಆಸ್ಪತ್ರೆ ಇದಾಗಿದ್ದು, ಉತ್ತರ ಗಾಜಾದ ಮತ್ತೊಂದು ಪ್ರಮುಖ ಆಸ್ಪತ್ರೆ ಕಮಲ್ ಅದ್ವಾನ್ ಕೂಡ ಕಳೆದ ವರ್ಷ ಇಸ್ರೇಲ್ ದಾಳಿಯಿಂದಾಗಿ ಮುಚ್ಚಿಹೋಯಿತು" ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).