ಮೂವರ ಸಾವು, ಇರಾನ್‌ಗೆ ದೊಡ್ಡ ಹೊಡೆತ! ಇಸ್ರೇಲ್ ದಾಳಿಯ ಬೆನ್ನಲ್ಲೇ ಪ್ರತೀಕಾರದ ಮಾತು, ಮುಂದೇನು? | Israeli Attack

ವಿಜಯವಾಣಿ (15)
Published on

Israeli Attack: ಮಧ್ಯಪ್ರಾಚ್ಯದ ಮೇಲೆ ಮತ್ತೊಮ್ಮೆ ಯುದ್ಧದ ಕಾರ್ಮೋಡ ಕವಿದಿವೆ. ಇರಾನ್‌ ಸೇನೆಗೆ ದೊಡ್ಡ ಶಕ್ತಿಯಾಗಿದ್ದ ಮೂವರು ಉನ್ನತ ಅಧಿಕಾರಿಗಳು ಯಾರೂ ನಿರೀಕ್ಷಿಸದ ಇಸ್ರೇಲ್ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ ಸೇನಾ ಮುಖ್ಯಸ್ಥ ಮೊಹಮ್ಮದ್ ಬಘೇರಿ ಮತ್ತು ಇನ್ನಿಬ್ಬರು ಉನ್ನತ ಅಧಿಕಾರಿಗಳು ಸೇರಿದಂತೆ ಆರು ಇರಾನಿನ ಪರಮಾಣು ವಿಜ್ಞಾನಿಗಳು ಜೀವ ಕಳೆದುಕೊಂಡಿದ್ದಾರೆ.

"ಆಪರೇಷನ್ ರೈಸಿಂಗ್ ಲಯನ್"ನಿಂದ ಕಂಗೆಟ್ಟಿರುವ ಇರಾನ್ ತೀವ್ರ ಆಘಾತಕ್ಕೊಳಗಾಗಿದೆ. ತನ್ನ ಮಿಲಿಟರಿ ಪಡೆಯ ಕಾರ್ಯತಂತ್ರಗಳಿಗೆ ಬಲ ತುಂಬಿದ್ದ ಮೂವರು ನಾಯಕರನ್ನು ಕಳೆದುಕೊಂಡು ಕಂಗಾಲಾಗಿರುವ ಇರಾನ್​, ಇದೀಗ ಇಸ್ರೇಲ್​ ವಿರುದ್ಧ ಪ್ರತೀಕಾರದ ಕಿಚ್ಚನ್ನು ತೀರಿಸಿಕೊಳ್ಳಲು ಎದುರುನೋಡುತ್ತಿದೆ. ಅಷ್ಟಕ್ಕೂ ಈ ದಾಳಿಯಲ್ಲಿ ಮಡಿದ ಮೂವರು ಪ್ರಬಲ ಅಧಿಕಾರಿಗಳು ಯಾರು? ಇರಾನ್​ನ ಮುಂದಿನ ನಡೆಯೇನು? ಎಂಬುದರ ವಿವರ ಹೀಗಿದೆ ನೋಡಿ.

1. ಮೇಜರ್ ಜನರಲ್ ಹೊಸೇನ್ ಸಲಾಮಿ

ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ವಿಭಾಗವಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥ, ದೇಶದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಆಪ್ತ, ಕಳೆದ ವರ್ಷ ಇಸ್ರೇಲ್ ಮೇಲೆ ನೂರಾರು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ ಕೀರ್ತಿ ಅವರಿಗಿದೆ. ಅವರು ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ವ್ಯಕ್ತಿಯಾಗಿ ಸೇನೆಯಲ್ಲಿ ಗುರುತಿಸಿಕೊಂಡಿದ್ದರು.

2. ಮೇಜರ್ ಜನರಲ್ ಮೊಹಮ್ಮದ್ ಬಾಘೇರಿ

ಇರಾನ್‌ನ ಸೈನ್ಯದ ಮುಖ್ಯಸ್ಥರಾಗಿದ್ದ ಬಾಘೇರಿ, ದೇಶದ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು. ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತಿದ್ದ ನಡುವೆ ಸೌದಿ ಅರೇಬಿಯಾದೊಂದಿಗಿನ ಶಾಂತಿ ಮಾತುಕತೆಗಳಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

3. ಅಲಿ ಶಮ್ಖಾನಿ

10 ವರ್ಷಗಳ ಕಾಲ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅಲಿ ಶಮ್ಖಾನಿ, ದೇಶದ ಭದ್ರತಾ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚೀನಾದ ಮಧ್ಯಸ್ಥಿಕೆಯ ಮೂಲಕ ಸೌದಿ ಅರೇಬಿಯಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇರಾನ್ ಅಧ್ಯಕ್ಷ ಸ್ಥಾನಕ್ಕೆ ಸಹ ಅಲಿ ಸ್ಪರ್ಧಿಸಿದ್ದರು.

ಇಸ್ರೇಲಿ ದಾಳಿಗೆ ಇರಾನ್‌ ಪ್ರತಿಕ್ರಿಯೆ ಏನು?

ತನ್ನ ಮೂವರು ಉನ್ನತ ಅಧಿಕಾರಿಗಳ ಪ್ರಾಣ ಕಸಿದುಕೊಂಡ ಇಸ್ರೇಲ್​ ವಿರುದ್ಧ ಪ್ರತೀಕಾರದ ಸೂಚನೆ ನೀಡಿರುವ ಇರಾನ್‌ನ ಸುಪ್ರೀಂ ನಾಯಕ ಅಲಿ ಖಮೇನಿ, ತಕ್ಷಣವೇ ಜಾರಿಗೆ ಬರುವಂತೆ ಹೊಸ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಹೊಸ IRGC ಮುಖ್ಯಸ್ಥರಾಗಿ ಮೊಹಮ್ಮದ್ ಪಕ್‌ಪೋರ್ ಅಧಿಕಾರ ವಹಿಸಿಕೊಂಡರೆ, ಹೊಸ ಸೇನಾ ಮುಖ್ಯಸ್ಥನಾಗಿ ಅಬ್ದುಲ್ ರಹೀಮ್ ಮೌಸವಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಎರಡೂ ದೇಶಗಳ ಕಿಚ್ಚು ಹೆಚ್ಚು!

ಈ ಘಟನೆಯನ್ನು ಕೇವಲ ಮಿಲಿಟರಿ ದಾಳಿ ಎಂದು ಇರಾನ್ ಒಪ್ಪಿಕೊಂಡಿಲ್ಲ. ಇದರ ಪರಿಣಾಮವು ಬಹಳ ದೊಡ್ಡದಾಗಿರಲಿದೆ ಎಂಬ ಸೂಚನೆಯನ್ನು ಈಗಾಗಲೇ ಇಸ್ರೇಲ್​ಗೆ ರವಾನಿಸಿದೆ. ಎರಡೂ ದೇಶಗಳ ನಡುವೆ ಯುದ್ಧ ಭೀತಿ ಮತ್ತಷ್ಟು ಜೋರಾಗಿದ್ದು, ಶಾಂತಿ ಮಾತುಕತೆಗೆ ಜಾಗವಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಉದ್ವಿಗ್ನತೆಗಳು ಕಚ್ಚಾ ತೈಲ ಬೆಲೆಗಳ ಹೆಚ್ಚಳಕ್ಕೂ ಕಾರಣವಾಗಬಹುದು. ಇದು ವಿಶ್ವ ಶಾಂತಿಗೆ ಧಕ್ಕೆ ತರಬಹುದು ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net