ಹಿಜ್ಬೊಲ್ಲಾ ಉಗ್ರರು ಶಸ್ತ್ರಾಸ್ತ್ರ ತ್ಯಜಿಸಿದರೇ, ಇಸ್ರೇಲ್ ಲೆಬನಾನ್‌ನಿಂದ ಹಿಂದೆ ಸರಿಯುತ್ತದೆ: ಬೆಂಜಮಿನ್ ನೆತನ್ಯಾಹು| Israel

Benjamin Netanyahu,25
Published on

Israel: 2025ರ ಅಂತ್ಯದ ವೇಳೆಗೆ ಹೆಜ್ಬೊಲ್ಲಾವನ್ನು ನಿಶ್ಯಸ್ತ್ರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಈ ತಿಂಗಳ ಆರಂಭದಲ್ಲಿ ಲೆಬನಾನ್ ಕ್ಯಾಬಿನೆಟ್ ತೆಗೆದುಕೊಂಡ ಮಹತ್ವದ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ (ಆಗಸ್ಟ್​,25) ಸ್ವಾಗತಿಸಿದ್ದಾರೆ.

ಜೆರುಸಲೆಮ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ, ಲೆಬನನ್ ಹೆಜ್ಬೊಲ್ಲಾವನ್ನು ನಿಶ್ಯಸ್ತ್ರಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ, ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿರುವ ಇಸ್ರೇಲ್​ ಸೇನೆಯ ಉಪಸ್ಥಿತಿಯನ್ನು ಹಂತಹಂತವಾಗಿ ಕಡಿಮೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದೊಂದಿಗೆ ಇಸ್ರೇಲ್-ಹೆಜ್ಬೊಲ್ಲಾ ಯುದ್ಧ ಕೊನೆಗೊಂಡಿತ್ತು. ಆದರೆ ಇಸ್ರೇಲ್ ಲೆಬನಾನ್‌ನೊಳಗಿನ ಐದು ಬೆಟ್ಟಗಳಿಂದ ಹಿಂದೆ ಸರಿಯುವವರೆಗೆ ಮತ್ತು ದೈನಂದಿನ ವೈಮಾನಿಕ ದಾಳಿಗಳನ್ನು ನಿಲ್ಲಿಸುವವರೆಗೆ ನಾವು ನಿಶ್ಯಸ್ತ್ರೀಕರಣದ ಬಗ್ಗೆ ಚರ್ಚಿಸುವುದಿಲ್ಲ ಎಂದು ಹಿಜ್ಬೊಲ್ಲಾ ಅಧಿಕಾರಿಗಳು ತಿಳಿಸಿದ್ದರು.

ಇತ್ತೀಚೆಗೆ ಇಸ್ರೇಲ್ ಜತೆಗೆ ಹೆಜ್ಬೊಲ್ಲಾ 14 ತಿಂಗಳ ಯುದ್ಧ ಮಾಡಿ ತೀವ್ರವಾಗಿ ದುರ್ಬಲಗೊಂಡಿತ್ತು. ಹೆಜ್ಬೊಲ್ಲಾದ ಅನೇಕ ರಾಜಕೀಯ ಹಾಗೂ ಮಿಲಿಟರಿ ನಾಯಕರು ಸಾವನ್ನಪ್ಪಿದ ಕಾರಣ ಈ ಗುಂಪನ್ನು ನಿಶ್ಯಸ್ತ್ರಗೊಳಿಸುವಂತೆ ಲೆಬನಾನ್​ಗೆ ಅಮೆರಿಕ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಇರಾನ್ ಬೆಂಬಲಿತ ಗುಂಪು, ಶಸ್ತ್ರಾಸ್ತ್ರಗಳನ್ನು ಈ ವರ್ಷದ ಅಂತ್ಯದ ವೇಳೆಗೆ ತೆಗೆದುಹಾಕುವ ರಾಷ್ಟ್ರೀಯ ಸರ್ಕಾರದ ನಿರ್ಧಾರವು ಇಸ್ರೇಲ್‌ ಹಿತಾಸಕ್ತಿಗಳನ್ನು ಪೂರೈಸುತ್ತದೆ ಎಂದು ಹೇಳಿತ್ತು. ಅಲ್ಲದೆ, ಹಿಜ್ಬೊಲ್ಲಾ ನಾಯಕತ್ವವು ನಿಶ್ಯಸ್ತ್ರಗೊಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿತ್ತು.

ಹೆಜ್ಬೊಲ್ಲಾ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಉತ್ತರ ಇಸ್ರೇಲ್‌ನ ಸಮುದಾಯಗಳ ಎದುರು ನೆಲೆಗೊಂಡಿವೆ ಎಂದು ಇಸ್ರೇಲ್ ಹೇಳಿದೆ, ಅಲ್ಲಿ ಯುದ್ಧದ ಸಮಯದಲ್ಲಿ ಸುಮಾರು 60,000 ಇಸ್ರೇಲಿಗಳು ಸ್ಥಳಾಂತರಗೊಳಿಸಲಾಗಿತ್ತು.

2023ರ ಅಕ್ಟೋಬರ್ 7 ರಂದು ಗಾಜಾದಿಂದ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಒಂದು ದಿನದ ನಂತರ ಇಸ್ರೇಲ್-ಹಿಜ್ಬೊಲ್ಲಾ ಯುದ್ಧ ಪ್ರಾರಂಭವಾಯಿತು. ಇದು 4,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು ಮತ್ತು $11 ಬಿಲಿಯನ್ ಮೌಲ್ಯದ ಆಸ್ತಿಗಳಿಗೆ ಹಾನಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net