

ಖಾನ್ ಯೂನಿಸ್; ಇಂದು (ಆ.25) ದಕ್ಷಿಣ ಗಾಜಾದ ಪ್ರಮುಖ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಪತ್ರಕರ್ತರು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ.
ಮೊದಲ ದಾಳಿ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ರಕ್ಷಣಾ ತಂಡಗಳು ಆಗಮಿಸುತ್ತಿದ್ದಂತೆ ಎರಡನೇ ಕ್ಷಿಪಣಿ ದಾಳಿ ನಡೆದಿದೆ ಎಂದು ಸಚಿವಾಲಯವು ತಿಳಿಸಿದೆ. ಗಾಜಾದಲ್ಲಿ ಹಮಾಸ್ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಆಸ್ಪತ್ರೆಗಳ ಮೇಲಿನ ದಾಳಿಯ ಬಗ್ಗೆ ಇಸ್ರೇಲ್ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಪ್ರದೇಶದಾದ್ಯಂತ ಹಲವಾರು ವೈದ್ಯಕೀಯ ಸೌಲಭ್ಯಗಳ ಮೇಲೆ ದಾಳಿ ಮಾಡಲಾಗಿದೆ. ಆಸ್ಪತ್ರೆಗಳೊಳಗಿಂದಲೇ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ.
22 ತಿಂಗಳ ಕಾಲ ನಡೆದ ಸಂಘರ್ಷದ ಉದ್ದಕ್ಕೂ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯನ್ನು ಪದೇ ಪದೇ ಗುರಿಯಾಗಿಸಿಕೊಳ್ಳಲಾಗಿದೆ. ಕಳೆದ ಜೂನ್‌ನಲ್ಲಿ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದರು ಮತ್ತು ಹತ್ತು ಜನರು ಗಾಯಗೊಂಡರು. ಆ ಸಮಯದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು (IDF) ಆಸ್ಪತ್ರೆಯೊಳಗಿಂದ ಕಾರ್ಯನಿರ್ವಹಿಸುತ್ತಿದ್ದ ಹಮಾಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದವು. ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಸಂಘರ್ಷ ಪ್ರಾರಂಭವಾದಾಗಿನಿಂದ 62,686 ಕ್ಕೂ ಹೆಚ್ಚು ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಂದಾಜಿಸಲಾಗಿದೆ.
(ಏಜೆನ್ಸೀಸ್)