ಇರಾನ್​ ಮೇಲೆ ಇಸ್ರೇಲ್​ನಿಂದ​ ನಿರಂತರ ದಾಳಿ: ಈವರೆಗೆ 224 ಮಂದಿ ಮೃತಪಟ್ಟಿದ್ದಾರೆಂದ ಟೆಹರಾನ್​! Israel

Israel
Published on

Israel : ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇಸ್ರೇಲ್ ಮತ್ತು ಇರಾನ್ ನಡುವಿನ ಕ್ಷಿಪಣಿ ಮತ್ತು ಡ್ರೋನ್​ ದಾಳಿಗಳು ಮುಂದುವರಿದೆ. ಉಭಯ ದೇಶಗಳ ನಡುವಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಎರಡೂ ರಾಷ್ಟ್ರಗಳು ಪರಸ್ಪರ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಉಭಯ ದೇಶಗಳ ನಡುವಿನ ಯುದ್ಧವು ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಅಂತಾರಾಷ್ಟ್ರೀಯ ಕದನ ವಿರಾಮದ ಮನವಿಗಳನ್ನು ನಿರ್ಲಕ್ಷಿಸಿ, ಯುದ್ಧವನ್ನು ಮುಂದುವರಿಸಿವೆ. ಈ ಉದ್ವಿಗ್ನ ಪರಿಸ್ಥಿತಿ ಜಾಗತಿಕವಾಗಿಯೂ ಪರಿಣಾಮ ಬೀರುತ್ತಿದೆ.

ತನ್ನ ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ)ನ ಗುಪ್ತಚರ ಮುಖ್ಯಸ್ಥ ಮತ್ತು ಇತರ ಇಬ್ಬರು ಹಿರಿಯ ಜನರಲ್‌ಗಳನ್ನು ಇಸ್ರೇಲ್​ ಕೊಂದಿದೆ ಎಂದು ಟೆಹರಾನ್​ಆರೋಪಿಸಿದೆ. ಇತ್ತೀಚಿಗೆ ಇಸ್ರೇಲ್​ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವಾರು ಜನವಸತಿ ಕೇಂದ್ರಗಳು ಕೂಡ ಹಾನಿಗೊಳಗಾಗಿವೆ ಎಂದು ಇರಾನ್ ಹೇಳಿದೆ.

ಇರಾನಿನ ಆರೋಗ್ಯ ಅಧಿಕಾರಿಗಳ ಪ್ರಕಾರ, ಶುಕ್ರವಾರ ಇಸ್ರೇಲ್ ದಾಳಿ ಪ್ರಾರಂಭವಾದಾಗಿನಿಂದ ಈವರೆಗೆ ಸಾವಿನ ಸಂಖ್ಯೆ 224ಕ್ಕೆ ಏರಿದೆ. ಅಲ್ಲದೆ, ಈ ದಾಳಿಯಲ್ಲಿ 1,277 ಮಂದಿ ಗಾಯಗೊಂಡಿರುವುದಾಗಿಯೂ ತಿಳಿಸಿದೆ. ಆದರೆ, ಈ ಸಾವು-ನೋವುಗಳಲ್ಲಿ ಎಷ್ಟು ಮಂದಿ ನಾಗರಿಕರು ಅಥವಾ ಮಿಲಿಟರಿ ಸಿಬ್ಬಂದಿ ಅನ್ನೋ ಮಾಹಿತಿಯನ್ನು ಅಧಿಕಾರಿಗಳು ಇನ್ನೂ ನಿರ್ದಿಷ್ಟಪಡಿಸಿಲ್ಲ.

ಇನ್ನು ಇರಾನ್‌ನ ಪರಮಾಣು ಮೂಲಸೌಕರ್ಯ ಮತ್ತು ಮಿಲಿಟರಿ ನಾಯಕತ್ವವನ್ನು ಇಸ್ರೇಲ್​ ಗುರಿಯಾಗಿಸಿಕೊಂಡಿದೆ ಎಂದು ಟೆಹರಾನ್​ ಹೇಳಿದೆ. ಇದಕ್ಕೆ ಪ್ರತಿಯಾಗಿ ಶುಕ್ರವಾರದಿಂದ ಟೆಹರಾನ್​ ಕೂಡ 270ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ, ಹೆಚ್ಚಿನವುಗಳನ್ನು ಇಸ್ರೇಲ್‌ನ ಬಹು-ಪದರದ ವಾಯು ರಕ್ಷಣಾ ವ್ಯವಸ್ಥೆಯು ತಡೆಹಿಡಿದರೆ, 22 ಕ್ಷಿಪಣಿಗಳು ಗುರಾಣಿಯನ್ನು ಭೇದಿಸುವಲ್ಲಿ ಯಶಸ್ವಿಯಾಗಿ, ವಸತಿ ಉಪನಗರಗಳ ಮೇಲೆ ಅಪ್ಪಳಿಸಿವೆ. ಇದರಿಂದ 14 ಜನರು ಸಾವಿಗೀಡಾಗಿದ್ದು, 390 ಮಂದಿ ಗಾಯಗೊಂಡಿದ್ದಾರೆಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇಸ್ರೇಲ್-ಇರಾನ್ ಸಂಘರ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು

ಭಾನುವಾರ ತಡರಾತ್ರಿ ಜೆರುಸಲೆಮ್‌ನಾದ್ಯಂತ ವಾಯುದಾಳಿಯ ಸೈರನ್‌ಗಳು ಮೊಳಗಿದವು. ಇಸ್ರೇಲ್ ರಕ್ಷಣಾ ಪಡೆಗಳು (IDF) ಇರಾನಿನ ಕ್ಷಿಪಣಿಗಳು ಬರುತ್ತಿರುವುದನ್ನು ದೃಢಪಡಿಸಿದವು. ಇದಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಹ ವೈರಲ್​ ಆಗಿವೆ. ಟೆಲ್ ಅವಿವ್ ಮತ್ತು ಜೆರುಸಲೆಮ್ ಮೇಲೆ ಕ್ಷಿಪಣಿಗಳು ಹಾದುಹೋದವು. ಅವುಗಳಲ್ಲಿ ಹಲವು ಕ್ಷಿಪಣಿಗಳನ್ನು ಇಸ್ರೇಲ್‌ನ ಬಹು-ಪದರದ ರಕ್ಷಣಾ ವ್ಯವಸ್ಥೆ ಗಾಳಿಯಲ್ಲೇ ಅಡ್ಡಿಪಡಿಸಿದವು. ಇದಕ್ಕೆ ತ್ವರಿತ ಪ್ರತೀಕಾರವಾಗಿ, ಇಸ್ರೇಲ್, ಇರಾನಿನ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳೊಂದಿಗೆ ಪ್ರತಿದಾಳಿ ನಡೆಸಿದೆ.

ಇರಾನಿನ ವಾಯುಪ್ರದೇಶದಲ್ಲಿ ಬಹುತೇಕ ಸಂಪೂರ್ಣ ಹಿಡಿತ ಸಾಧಿಸಿರುವುದಾಗಿ ಇಸ್ರೇಲ್ ಹೇಳಿದೆ. ಭಾನುವಾರ ಇರಾನ್‌ನ ರಕ್ಷಣಾ ಸಚಿವಾಲಯ, ಕ್ಷಿಪಣಿ ಉಡಾವಣಾ ತಾಣಗಳು ಮತ್ತು ವಾಯು ರಕ್ಷಣಾ ಘಟಕಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಇಸ್ರೇಲ್​ ದಾಳಿಯಲ್ಲಿ ಕ್ರಾಂತಿಕಾರಿ ಗಾರ್ಡ್ ಗುಪ್ತಚರ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಕಜೆಮಿ ಮತ್ತು ಅವರ ಉಪ ಜನರಲ್ ಹಸನ್ ಮೊಹಾಕಿಕ್ ಸೇರಿದಂತೆ ಹೆಚ್ಚಿನ ಉನ್ನತ ಜನರಲ್‌ಗಳನ್ನು ಹತ್ಯೆಯಾಗಿರುವುದಾಗಿ ಇರಾನ್ ಒಪ್ಪಿಕೊಂಡಿದೆ.

ಇಸ್ರೇಲ್ ಎಷ್ಟರ ಮಟ್ಟಿಗೆ ಯುದ್ಧ ಮಾಡಲು ಸಿದ್ಧವಾಗಿದೆ ಅಂದರೆ, ಅದನ್ನು ಅಮೆರಿಕದ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡುವ ಇಸ್ರೇಲ್ ಯೋಜನೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆದಿದ್ದಾರೆ. ಖಮೇನಿ ಅವರು ದೇಶದ ಅತ್ಯುನ್ನತ ಅಧಿಕಾರಿ, ಅವರು ರಾಜ್ಯ ನೀತಿ, ಮಿಲಿಟರಿ ಮತ್ತು ಗಣ್ಯ ಕ್ರಾಂತಿಕಾರಿ ಗಾರ್ಡ್ ಮೇಲೆ ವ್ಯಾಪಕ ಅಧಿಕಾರವನ್ನು ಹೊಂದಿದ್ದಾರೆ. ಅವರನ್ನೇ ಹತ್ಯೆ ಮಾಡಲು ಇಸ್ರೇಲ್​ ಮುಂದಾಗಿದೆ ಎಂದು ಅಮೆರಿಕ ಅಧಿಕಾರಿ ಹೇಳಿದ್ದಾರೆ.

ಇನ್ನು ಇಸ್ರೇಲ್​ ದಾಳಿಗಳು ಇರಾನ್‌ನ ಮಿಲಿಟರಿ ತಾಣಗಳನ್ನು ಮೀರಿ, ಸರ್ಕಾರಿ ಕಟ್ಟಡಗಳು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರಿವೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ಗುರಿಗಳಲ್ಲಿ ವಿದೇಶಾಂಗ ಸಚಿವಾಲಯ ಮತ್ತು ಟೆಹರಾನ್‌ನ ಉತ್ತರದಲ್ಲಿರುವ ಶಹ್ರಾನ್ ತೈಲ ಡಿಪೋ ಮತ್ತು ದಕ್ಷಿಣದಲ್ಲಿರುವ ಇಂಧನ ಟ್ಯಾಂಕ್ ಸೇರಿದಂತೆ ಹಲವಾರು ಇಂಧನ ಸೌಲಭ್ಯಗಳು ಸೇರಿವೆ. ಇವೆರಡೂ ಭಾನುವಾರ ಬೆಂಕಿಗೆ ಆಹುತಿಯಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇರಾನ್‌ನ ಉಪ ವಿದೇಶಾಂಗ ಸಚಿವ ಸಯೀದ್ ಖತಿಬ್ಜಾದೆ ಮತ್ತು ಇತರ ರಾಜತಾಂತ್ರಿಕರು ವಿದೇಶಾಂಗ ಸಚಿವಾಲಯದ ಕಚೇರಿ ಮತ್ತು ಗ್ರಂಥಾಲಯದ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಅವು ಸಾಕಷ್ಟು ಚೂರುಗಳಿಂದ ತುಂಬಿವೆ. ಅಷ್ಟರಮಟ್ಟಿಗೆ ಇಸ್ರೇಲ್​, ಇರಾನ್​ ಮೇಲೆ ದಾಳ ಮಾಡುತ್ತಿದೆ.

ಇದರ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಕರೆಗಳನ್ನು ತಳ್ಳಿಹಾಕಿದ್ದಾರೆ. ಟೆಲ್ ಅವಿವ್ ತನ್ನ ಮಿಲಿಟರಿ ಉದ್ದೇಶಗಳನ್ನು ಅನುಸರಿಸುತ್ತದೆ ಎಂದಿದ್ದಾರೆ. ಫಾಕ್ಸ್ ನ್ಯೂಸ್‌ಗೆ ಮಾತನಾಡಿದ ನೆತನ್ಯಾಹು, ಇರಾನ್‌ನಲ್ಲಿನ ಆಡಳಿತ ಬದಲಾವಣೆಯು ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿರಬಹುದು ಎಂದು ಹೇಳಿದರು. ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ವರ್ಗಾಯಿಸುವ ಇರಾನಿನ ಯೋಜನೆಗಳನ್ನು ಇಸ್ರೇಲ್​ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ ಎಂದು ನೇತನ್ಯಾಹು ಆರೋಪಿಸಿದ್ದಾರೆ.

ಇಸ್ರೇಲ್​​​ ಕ್ಷಿಪಣಿಗಳ ದಾಳಿಗೆ ಧರೆಗುರುಳಿದ ವಸತಿ ಕಟ್ಟಡಗಳ ಅವಶೇಷಗಳಲ್ಲಿ ರಕ್ತಸಿಕ್ತ, ಧೂಳಿನಿಂದ ಆವೃತವಾದ ಮಕ್ಕಳನ್ನು ಪುರುಷರು ಮತ್ತು ಮಹಿಳೆಯರು ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ಭಯಾನಕ ದೃಶ್ಯಗಳನ್ನು ಇರಾನ್‌ನ ರಾಜ್ಯ ಟಿವಿ ಟೆಹರಾನ್​ನ ನಗರ ಕೇಂದ್ರದಿಂದ ಪ್ರಸಾರ ಮಾಡಿತು. ಈವರೆಗೆ ಸಾವಿಗೀಡಾದ 224 ಜನರಲ್ಲಿ 90% ನಾಗರಿಕರು ಎಂದು ಇರಾನ್ ಆರೋಗ್ಯ ಸಚಿವಾಲಯದ ವಕ್ತಾರ ಹೊಸೈನ್ ಕೆರ್ಮನ್‌ಪೋರ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net