

ಜೆರುಸಲೇಂ: ಗಾಜಾ ಪಟ್ಟಿಯ ಒಳಗೆ ನುಗ್ಗಿ ಹಮಾಸ್ ಉಗ್ರರನ್ನು ಸೆದೆಬಡಿಯಲು ತಯಾರಿ ಮಾಡಿಕೊಂಡಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮೊದಲ ಸ್ಥಳೀಯ ದಾಳಿಯನ್ನು ಇಂದು ಆರಂಭಿಸಿದೆ. ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಇದು ಸೇಡಿನ ಆರಂಭವಷ್ಟೇ ಎನ್ನುವ ಮೂಲಕ ಆಕ್ರಮಣಕಾರಿ ದಾಳಿಯ ಸುಳಿವನ್ನು ನೀಡಿದ್ದಾರೆ.
24 ಗಂಟೆಯೊಳಗೆ ಉತ್ತರ ಗಾಜಾವನ್ನು ತೊರೆದು ದಕ್ಷಿಣ ಗಾಜಾಗೆ ಸ್ಥಳಾಂತರವಾಗುವಂತೆ ಇಸ್ರೇಲ್ ನೀಡಿದ್ದ ಗಡುವು ಮುಗಿಯುತ್ತಾ ಬಂದಿದ್ದು, ಸಾವಿರಾರು ಮಂದಿ ಜೀವ ಭಯದಲ್ಲಿ ದಕ್ಷಿಣ ಗಾಜಾ ಕಡೆ ಕಾಲ್ಕಿತ್ತಿದ್ದಾರೆ. ಅ.7ರ ಶನಿವಾರದಂದು ಪ್ಯಾಲೆಸ್ತೀನ್ನ ಹಮಾಸ್ ಉಗ್ರರು ದಿಢೀರನೇ 5000 ರಾಕೆಟ್ಗಳಿಂದ ಇಸ್ರೇಲ್ ಮೇಲೆ ವಿಧ್ವಂಸಕ ದಾಳಿ ಮಾಡಿರುವುದಕ್ಕೆ ಪ್ರತೀಕಾರವಾಗಿ ಇಸ್ರೇಲ್, ಗಾಜಾ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್ ಮತ್ತು ಗಾಜಾ ನಡುವೆ ಯುದ್ಧ ಆರಂಭವಾಗಿ ಒಂದು ವಾರ ಕಳೆದಿದ್ದರೂ ಇನ್ನೂ ಕದನ ಕಾರ್ಮೋಡ ಮಾತ್ರ ತಿಳಿಗೊಂಡಿಲ್ಲ. ಸ್ಥಳೀಯ ಜನರು ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಯುದ್ಧದಲ್ಲಿ ಈಗಾಗಲೇ 3000ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಹಮಾಸ್ ಉಗ್ರರಿಂದ ಇಸ್ರೇಲ್ನ 1300 ಜನರು ಹತರಾದರೆ, ಇಸ್ರೇಲ್ ದಾಳಿಗೆ ಗಾಜಾದ 1900 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದ ಪ್ರಮುಖ ಬೆಳವಣಿಗೆಗಳು
* ಹಮಾಸ್ ವಿರುದ್ಧ ನಿರೀಕ್ಷಿತ ಭೂಆಕ್ರಮಣಕ್ಕೆ ಮುಂಚಿತವಾಗಿ, ಇಸ್ರೇಲಿ ರಕ್ಷಣಾ ಪಡೆ (IDF) ಗಾಜಾದಲ್ಲಿ ತನ್ನ ಮೊದಲ 'ಸ್ಥಳೀಕೃತ' ದಾಳಿಗಳನ್ನು ಆರಂಭಿಸಿದೆ. ಸೇನೆಯ ವಕ್ತಾರರ ಪ್ರಕಾರ, ತಮ್ಮ ಇನ್ಫ್ಯಾಂಟ್ರಿ ಪಡೆಗಳು ಶೋಧಗಳನ್ನು ನಡೆಸಿ, ಇಸ್ರೇಲ್ ಭೂಪ್ರದೇಶಕ್ಕೆ ನುಸುಳಲು ಉದ್ದೇಶಿಸಿರುವ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ಸ್ಕ್ವಾಡ್‌ಗಳನ್ನು ವಿಫಲಗೊಳಿಸಿವೆ.
* ಯುದ್ಧದ ಬೆಳವಣಿಗೆ ಬಗ್ಗೆ ಇತ್ತೀಚಗೆ ಮಾತನಾಡಿದ ಬೆಂಜಮಿನ್ ನೇತನ್ಯಾಹು, ತಮ್ಮ ರಕ್ಷಣಾ ಪಡೆಗಳು "ಸಿಂಹಗಳಂತೆ ಹೋರಾಡುತ್ತಿವೆ" ಮತ್ತು ಇದು ಕೇವಲ ಆರಂಭ ಎಂದು ಅವರು ಹೇಳಿದರು. ಗಾಜಾ ಆಕ್ರಮಣವು ಇನ್ನೂ ಆರಂಭಿಕ ಹಂತದಲ್ಲಿದೆ ಎನ್ನುವ ಮೂಲಕ ವಿನಾಶಕಾರಿ ಆಕ್ರಮಣದ ಸುಳಿವು ನೀಡಿದ್ದಾರೆ. ನಮ್ಮ ಶತ್ರುಗಳು ನಡೆಸಿದ ದೌರ್ಜನ್ಯವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ನಾವು ಎಂದಿಗೂ ಕ್ಷಮಿಸುವುದೂ ಇಲ್ಲ ಎಂದಿದ್ದಾರೆ.
* ಇದರ ಮಧ್ಯೆ ಹಮಾಸ್ ಗುಂಪು ಇಸ್ರೇಲ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದೆ. ಉತ್ತರ ಗಾಜಾದಿಂದ ದಕ್ಷಿಣಕ್ಕೆ ಪಲಾಯನ ಮಾಡುತ್ತಿರುವ ನಾಗರಿಕರನ್ನು ಇಸ್ರೇಲ್ ಗುರಿಯಾಗಿಸಿದೆ. ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 70 ಮಂದಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಆದರೆ, ಈ ಆರೋಪವನ್ನು ಇಸ್ರೇಲ್ ನಿರಾಕರಿಸಿದೆ.
* ಗಾಜಾದಲ್ಲಿ ಹಮಾಸ್ ಆಡಳಿತ ಇರುವ ಪ್ರದೇಶವನ್ನು ಇಸ್ರೇಲ್ ಆಕ್ರಮಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿರುವುದರ ನಡುವೆಯೇ 24 ಗಂಟೆಯೊಳಗೆ ಉತ್ತರ ಗಾಜಾದಲ್ಲಿರುವ 1.1 ಮಿಲಿಯನ್ ನಿವಾಸಿಗಳು ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಆದೇಶ ಮಾಡಿರುವುದಾಗಿ ವಿಶ್ವಸಂಸ್ಥೆಗೆ ಇಸ್ರೇಲ್ ತಿಳಿಸಿದೆ. ಆದರೆ, ಇದು ಭೀಕರ ಸ್ಥಿತಿಗೆ ಕಾರಣವಾಗುತ್ತದೆ. ಸಾಮೂಹಿಕ ಸ್ಥಳಾಂತರ ಅಸಾಧ್ಯವಾಗಿದ್ದು, ಹೀಗಾಗಿ ಆದೇಶವನ್ನು ಹಿಂಪಡೆಯುವಂತೆ ವಿಶ್ವಸಂಸ್ಥೆ ಆಗ್ರಹಿಸಿದೆ. ಆದರೆ, ಇಸ್ರೇಲ್ ಮಾತ್ರ ತನ್ನ ನಿಲುವನ್ನು ಬದಲಿಸಿಲ್ಲ.
* ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ತಕ್ಷಣದ ಕದನ ವಿರಾಮಕ್ಕೆ ರಷ್ಯಾ ಕರೆ ನೀಡಿದೆ. ಭದ್ರತಾ ಮಂಡಳಿಯ ಸಭೆಯಲ್ಲಿ ರಷ್ಯಾದ ಅಧಿಕಾರಿಗಳು ಕರಡು ನಿರ್ಣಯವನ್ನು ಪ್ರಸ್ತಾಪ ಮಾಡಿದರು. ಈ ಸಂಘರ್ಷ ಪ್ರಾರಂಭವಾದ ನಂತರ ಭದ್ರತಾ ಮಂಡಳಿಯ ಯಾವುದೇ ಸದಸ್ಯರ ಮೊದಲ ಕರಡು ಪ್ರಸ್ತಾಪ ಇದಾಗಿದೆ. ಕದನ ವಿರಾಮ ಮತ್ತು ಮಧ್ಯಸ್ಥಿಕೆಗಾಗಿ ರಷ್ಯಾದ ಕರೆಯನ್ನು ಹಮಾಸ್ ಸ್ವಾಗತಿಸಿದೆ.
ಇಸ್ರೇಲ್ ರಕ್ಷಣಾ ಪಡೆಗಳು ಶುಕ್ರವಾರ ಗಾಜಾ ಗಡಿ ಬಳಿ 250ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ರಕ್ಷಣೆ ಒತ್ತೆಯಾಳು ರಕ್ಷಣೆ ಮಾಡಿರುವ ವಿಡಿಯೋ ತುಣುಕನ್ನು ಅಲ್ಲಿನ ಸರ್ಕಾರ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ 60 ಹಮಾಸ್ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹಮಾಸ್ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಉಗ್ರ ಮುಹಮ್ಮದ್ ಅಬು ಅಲಿ ಸೇರಿ 26 ಉಗ್ರರನ್ನು ಸೆರೆಹಿಡಿಯಲಾಗಿದೆ ಎಂದು ಮಿಲಿಟರಿ ತಿಳಿಸಿದೆ. ಇಸ್ರೇಲಿ ಸೈನಿಕರು ಕಟ್ಟಡದೊಳಗೆ ನುಗ್ಗಿ ಉಗ್ರರ ಮೇಲೆ ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಇದೆ. ಬಳಿಕ ಬಂಕರ್ ಒಳಗೆ ಇರುವ ಒತ್ತೆಯಾಳುಗಳಿಗೆ ಸೈನಿಕರು ಧೈರ್ಯ ತುಂಬಿ, ಹಲವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಕೆಲವರನ್ನು ಸೈನಿಕರು ಸ್ಟೇಚರ್ ಮೂಲಕ ಹೊತ್ತೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಉಗ್ರರ ಜತೆ ಯೋಧರು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಸಿದರು.
* ಇದೇ ಸಂದರ್ಭದಲ್ಲಿ ಆಪರೇಷನ್ ಅಜಯ್ ಅಡಿಯಲ್ಲಿ 235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್ ಶನಿವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದಿದೆ. 211 ವಯಸ್ಕರೊಂದಿಗೆ ಮೊದಲ ವಿಮಾನವು ಎರಡು ದಿನಗಳ ಹಿಂದೆ ಭಾರತವನ್ನು ತಲುಪಿದೆ. ಭಾನುವಾರವೂ ಕಾರ್ಯಾಚರಣೆ ಮುಂದುವರಿಯಲಿದೆ. (ಏಜೆನ್ಸೀಸ್)