ಇಸ್ರೇಲ್​​-ಇರಾನ್​... ಯಾರು ಹಿತವರು ಈ ಇಬ್ಬರೊಳಗೆ? ಹೀಗಿದೆ ಭಾರತದ ಸಂದಿಗ್ಧ... Israel-Iran

Israel-Iran
Published on

Israel-Iran : ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ದಿನೇದಿನೆ ಹೆಚ್ಚುತ್ತಿದೆ. ಇಸ್ರೇಲ್ ಪರ ನಿಂತಿರುವ ಅಮೆರಿಕ, ಭಾನುವಾರ ಬೆಳಗಿನ ಜಾವ ಇರಾನ್​ನ ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡಿದೆ. ಹಾಗಾದರೆ ಇರಾನ್ ಪರ ಚೀನಾ, ರಷ್ಯಾ ನಿಲ್ಲುತ್ತವೆಯೇ? ಅದಕ್ಕೆ ಕಾಲವೇ ಉತ್ತರ ಹೇಳಬೇಕು. ಈ ಮಧ್ಯೆ, ಭಾರತ ಯಾರ ಪರ ಎಂಬ ಪ್ರಶ್ನೆ ಅಲ್ಲಲ್ಲಿ ಕೇಳಿಬರುತ್ತಿದೆ. ‘ಇವೆರಡೂ ಮಿತ್ರರಾಷ್ಟ್ರಗಳೇ’ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆಯಾದರೂ, ರಾಜಕಾರಣಿಗಳಲ್ಲಿ ಕೆಲವರು ಇಸ್ರೇಲ್ ಪರವಾಗಿ, ಇನ್ನು ಕೆಲವರು ಇರಾನ್ ಪರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾದರೆ, ಈ ದೇಶಗಳ ಜತೆ ಭಾರತದ ‘ದೋಸ್ತಿ’ ಎಷ್ಟು ಹಳೆಯದು, ಅವರಿಂದ ನಮಗೆ ಮತ್ತು ನಮ್ಮಿಂದ ಅವರಿಗೆ ಏನೇನು ಸಹಾಯ ಆಗಿದೆ, ಯಾಕೆ ಈ ವಿಷಯದಲ್ಲಿ ಭಾರತ ಕವಲು ದಾರಿಯಲ್ಲಿ ನಿಲ್ಲುವಂತಾಗಿದೆ ಎಂಬುದರ ಸ್ಥೂಲ ಮಾಹಿತಿ ಇಲ್ಲಿದೆ.

ಇಸ್ರೇಲ್​- ಭಾರತ ಸಂಬಂಧ

ಭಾರತಕ್ಕೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ದೇಶಗಳಲ್ಲಿ ಇಸ್ರೇಲ್ ಪ್ರಮುಖವಾದದ್ದು. ಡ್ರೋನ್​ಗಳು, ಅತ್ಯಾಧುನಿಕ ರಾಡಾರ್ ವ್ಯವಸ್ಥೆಗಳು, ಬ್ಯಾರಕ್-8 ಕ್ಷಿಪಣಿಗಳನ್ನು ಅದು ನಮಗೆ ಒದಗಿಸುತ್ತ ಬಂದಿದೆ. ಕಳೆದ ಒಂದು ದಶಕದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಇನ್ನೂ ಆಪ್ತವಾಗಿದೆ. ಇತ್ತೀಚೆಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ವಾಯುದಾಳಿ ಮಾಡಿದಾಗಲೂ ಇಸ್ರೇಲಿ ಶಸ್ತ್ರಾಸ್ತ್ರಗಳನ್ನು ಬಳಸಿತ್ತು ಎನ್ನಲಾಗಿದೆ. ಇಸ್ರೇಲ್ ಜತೆಗಿನ ರಕ್ಷಣಾ ಒಪ್ಪಂದ ಭಾರತಕ್ಕೆ ಎಷ್ಟು ಮಹತ್ವದ್ದು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಕೃಷಿ, ಗುಪ್ತಚರ ವ್ಯವಸ್ಥೆ ಮತ್ತು ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಿಗೂ ಈ ‘ದೋಸ್ತಿ’ ವಿಸ್ತರಿಸಿದೆ. ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ 10 ಶತಕೋಟಿ ಡಾಲರ್ (ಸುಮಾರು 86 ಸಾವಿರ ಕೋಟಿ ರೂ.) ಮೀರಿ ಮುನ್ನಡೆದಿದೆ.

2023ರ ಅ. 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದಾಗ, ಭಾರತ ತಡ ಮಾಡದೆ ಇಸ್ರೇಲ್​ಗೆ ಬಹಿರಂಗ ಬೆಂಬಲ ಘೊಷಿಸಿತ್ತು. ಏಕೆಂದರೆ, ಭಾರತ ಮತ್ತು ಇಸ್ರೇಲ್ ಎರಡೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ದೇಶಗಳು. 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಪೈಕಿ ಇಸ್ರೇಲಿಗಳೂ ಇದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಮಗ್ಗುಲಮುಳ್ಳಾಗಿರುವ ಗಾಜಾ ಮೇಲೆ ಇಸ್ರೇಲ್ ಹಲವು ವರ್ಷಗಳಿಂದ ದಾಳಿ ಮಾಡುತ್ತಿದ್ದು, ಇದರ ಬಗ್ಗೆ ಭಾರತ ‘ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡುತ್ತ ಬಂದಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆ ‘ಗಾಜಾದಲ್ಲಿ ತಕ್ಷಣದಿಂದಲೇ ಷರತ್ತುರಹಿತ ಶಾಶ್ವತ ಕದನವಿರಾಮ ಘೊಷಿಸಬೇಕು’ ಎಂದು ನಿರ್ಣಯ ಅಂಗೀಕರಿಸಿದಾಗ, ಅದರ ಮೇಲೆ ನಡೆದ ಮತದಾನದಲ್ಲಿ ಭಾರತ ಭಾಗವಹಿಸಲಿಲ್ಲ. ಇಸ್ರೇಲ್ ವಿಷಯದಲ್ಲಿ ಭಾರತ ಸಾಮಾನ್ಯವಾಗಿ ಯಾವ ರೀತಿಯ ನಿಲುವು ಹೊಂದಿರುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ.

ಭಾರತೀಯರು ಎಷ್ಟಿದ್ದಾರೆ?

ಇಸ್ರೇಲ್​ನಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ 18-20 ಸಾವಿರ ಭಾರತೀಯರಿದ್ದಾರೆ. ಸುಮಾರು 85,000 ಭಾರತೀಯ ಮೂಲದ ಯಹೂದಿಗಳು ಮತ್ತು ಸುಮಾರು 32,000 ಭಾರತೀಯ ಕಾರ್ವಿುಕರಿದ್ದಾರೆ. ಇರಾನ್​ನಲ್ಲಿ ವ್ಯಾಪಾರಿಗಳು ಮತ್ತು ಶಿಕ್ಷಕರು ಸೇರಿದಂತೆ 10,700ಕ್ಕಿಂತ ಹೆಚ್ಚು ಭಾರತೀಯರಿದ್ದಾರೆ. ಸಂಘರ್ಷ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಈ ಎರಡೂ ದೇಶಗಳಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯವನ್ನು ಕೇಂದ್ರ ಸರ್ಕಾರ ಈಗಾಗಲೇ ಪ್ರಾರಂಭಿಸಿದೆ.

ಇರಾನ್​- ಭಾರತ ಸಂಬಂಧ

ಭಾರತ- ಇರಾನ್ ಸಂಬಂಧಕ್ಕೆ ಬಹುದೊಡ್ಡ ಹಿನ್ನೆಲೆ ಇದೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಜತೆ ಗಡಿ ಹಂಚಿಕೊಂಡಿರುವ ಇರಾನ್ ರಾಜತಾಂತ್ರಿಕವಾಗಿ ಭಾರತಕ್ಕೆ ಪ್ರಮುಖವೇ. ಶೀತಲ ಸಮರದ (1947- 1991) ನಂತರ, ಪಶ್ಚಿಮ ಏಷ್ಯಾದ ಹೆಚ್ಚಿನ ದೇಶಗಳೊಂದಿಗೆ ಭಾರತ ಸೌಹಾರ್ದ ಸಂಬಂಧ ಕಾಪಾಡಿ ಕೊಂಡಿದೆ. ತಾಲಿಬಾನ್ ಮತ್ತು ಪಾಕಿಸ್ತಾನದ ಬಗ್ಗೆ ಭಾರತ ಮತ್ತು ಇರಾನ್​ನ ನಿಲುವುಗಳಲ್ಲಿ ಸಾಮ್ಯ ಇದೆ. ಇರಾನ್ ಜತೆ ಭಾರತ ಮೊದಲಿನಿಂದಲೂ ವ್ಯಾಪಾರ ಸಂಬಂಧ ಹೊಂದಿದೆ. ಭಾರತಕ್ಕೆ ಕಚ್ಚಾತೈಲ ಪೂರೈಸುವ ದೇಶಗಳ ಪೈಕಿ ಅದೂ ಒಂದು. ಆದರೆ ಪರಮಾಣು ಮಹತ್ವಾಕಾಂಕ್ಷೆ ಹಿನ್ನೆಲೆಯಲ್ಲಿ ಇರಾನ್ ಮೇಲೆ ಅಮೆರಿಕ 2019ರಲ್ಲಿ ನಿರ್ಬಂಧಗಳನ್ನು ವಿಧಿಸಿದ ನಂತರ ಇರಾನ್​ನಿಂದ ಕಚ್ಚಾತೈಲ ಖರೀದಿಸುವುದನ್ನು ಭಾರತ ನಿಲ್ಲಿಸಬೇಕಾಯಿತು. ಇದೇ ವೇಳೆ, ಚೀನಾದೊಂದಿಗೆ ಇರಾನ್ ಒಡನಾಟ, ಒಪ್ಪಂದ ಹೆಚ್ಚಾದವು. ಹೀಗಾಗಿ ಭಾರತ- ಇರಾನ್ ಸಂಬಂಧ ಸ್ವಲ್ಪ ತಣ್ಣಗಾಯಿತು. ಆದರೂ ಪ್ರಾದೇಶಿಕ ಸಂಪರ್ಕ, ಇಂಧನ ಭದ್ರತೆ, ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ಸಮತೋಲನ ಮುಂತಾದ ಕಾರಣಗಳಿಂದಾಗಿ ಭಾರತ- ಇರಾನ್ ಸಂಬಂಧ ಚೆನ್ನಾಗಿಯೇ ಇದೆ. ಸಾಂಸ್ಕೃತಿಕ- ಐತಿಹಾಸಿಕ ಸಂಬಂಧವನ್ನು ಭಾರತ ರಕ್ಷಿಸಿಕೊಳ್ಳುತ್ತಲೇ ಬಂದಿದೆ.

ಇರಾನ್​ನ ಚಾಬಹಾರ ಬಂದರಂತೂ ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅತ್ಯಂತ ಪ್ರಮುಖವಾದದ್ದು. ಕಳೆದ ವರ್ಷ, ಭಾರತ ಈ ಬಂದರಿನ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 10 ವರ್ಷದ ಒಡಂಬಡಿಕೆಗೆ ಸಹಿ ಹಾಕಿತು. ನಮ್ಮ ಉತ್ಪಾದನೆಗಳು ಪಾಕಿಸ್ತಾನದ ಮೂಲಕ ಹೋಗುವುದನ್ನು ತಪ್ಪಿಸಲು ಈ ಬಂದರು ಸಹಕಾರಿ. ಆಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ದೇಶಗಳೊಂದಿಗೆ ವ್ಯಾಪಾರ ಹೆಚ್ಚಿಸಿಕೊಳ್ಳುವುದಕ್ಕೂ ಇರಾನೇ ಭಾರತದ ಗೇಟ್​ವೇ. ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಕಾರಿಡಾರ್​ನಿಂದಾಗಿಯೂ ಭಾರತ-ಇರಾನ್ ಸಂಬಂಧ ವೃದ್ಧಿಯಾಗಿದೆ. 2000ರ ಸೆಪ್ಟೆಂಬರ್​ನಲ್ಲಿ ಭಾರತ, ಇರಾನ್ ಮತ್ತು ರಷ್ಯಾ ಸೇರಿ ಆರಂಭಿಸಿದ 7,200 ಕಿಮೀ ಉದ್ದನೆಯ ಈ ಮಾರ್ಗ 13 ಸದಸ್ಯ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿ ಹೊಂದಿದೆ. ಅಜರ್ಬೆಜಾನ್, ಆಮೇನಿಯಾ, ಕಜಕಸ್ಥಾನ, ರ್ಕಿಗಿಜ್​ಸ್ಥಾನ, ತಾಜಿಕಿಸ್ಥಾನ, ಟರ್ಕಿ, ಯೂಕ್ರೇನ್, ಬೆಲಾರುಸ್, ಓಮನ್ ಮತ್ತು ಸಿರಿಯಾ ಕೂಡ ಈ ಯೋಜನೆಯ ಭಾಗವಾಗಿವೆ.

ಜನಮಾನಸದಲ್ಲೇನಿದೆ?

ಇಸ್ರೇಲ್ ಬಗ್ಗೆ : ತಾಂತ್ರಿಕ ಪರಾಕ್ರಮ ಮತ್ತು ಭದ್ರತಾ ಸಹಕಾರದಿಂದಾಗಿ ಇಸ್ರೇಲ್ ಬಗ್ಗೆ ಭಾರತೀಯರಲ್ಲಿ ಸಕಾರಾತ್ಮಕ ಭಾವನೆ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ (ವಿಶೇಷವಾಗಿ ಹಮಾಸ್ ದಾಳಿಗಳ ನಂತರ) ಇಸ್ರೇಲ್-ಪರ ಪೋಸ್ಟ್​ಗಳು ಕಾಣಿಸುತ್ತಿವೆ. ಭಾರತದ ರಕ್ಷಣಾ ಮತ್ತು ತಂತ್ರಜ್ಞಾನ ಆಕಾಂಕ್ಷೆಗಳಿಗೆ ಇಸ್ರೇಲ್ ಬೆಂಬಲ ನೀಡುತ್ತಿರುವುದೂ ಇದಕ್ಕೆ ಕಾರಣವಿರಬಹುದು. ಆದರೆ ಇದು ಸಾರ್ವತ್ರಿಕ ಅಲ್ಲ.

ಇರಾನ್ ಬಗ್ಗೆ : ಭಾರತದಲ್ಲಿ ಇರಾನ್ ಬಗ್ಗೆ ಐತಿಹಾಸಿಕವಾಗಿ ಸದ್ಭಾವನೆ ಇದ್ದರೂ ಸಾರ್ವಜನಿಕ ಸ್ಪಂದನೆ ಮತ್ತು ಸಾಂಸ್ಕೃತಿಕ ಸಂವೇದನೆ ಸೀಮಿತವಾಗಿದೆ. ಇಂಧನ ಭದ್ರತೆ, ಪ್ರಾದೇಶಿಕ ಸಂಪರ್ಕದ ಅನಿವಾರ್ಯತೆಯ ಜೊತೆಜೊತೆಗೆ ಇರಾನ್​ನ ಆಂತರಿಕ ಅಸ್ಥಿರತೆ ಮತ್ತು ಅಮೆರಿಕದ ಒತ್ತಡ ಗಳಿಂದಾಗಿ ಭಾರತ ಈ ವಿಷಯದಲ್ಲಿ ಸದಾಕಾಲ ಎಚ್ಚರಿಕೆ ಯಿಂದ ಹೆಜ್ಜೆ ಇಡುತ್ತಿದೆ.

ಐತಿಹಾಸಿಕ ಸಂಬಂಧ

ಇಸ್ರೇಲ್ ಜತೆ: ಐತಿಹಾಸಿಕ ಕಾರಣಗಳಿಗಾಗಿ ಜಗತ್ತಿನಾದ್ಯಂತ ಹಂಚಿ ಹೋಗಿದ್ದ ಯಹೂದಿಗಳಿಗೆ ತಮ್ಮದೇ ಆದ ಒಂದು ದೇಶವನ್ನು ರೂಪಿಸಿಕೊಳ್ಳಲು ಅವಕಾಶ ಸಿಕ್ಕಿದ್ದೇ ಕಳೆದ ಶತಮಾನದಲ್ಲಿ (1948). ಉಭಯ ದೇಶಗಳ ನಡುವಿನ ಔಪಚಾರಿಕ ರಾಜತಾಂತ್ರಿಕ ಸಂಬಂಧ ಶುರುವಾಗಿದ್ದು 1992ರಲ್ಲಿ. ಆದರೆ 2000ನೇ ಇಸ್ವಿ ನಂತರ ಭಯೋತ್ಪಾದನೆ-ನಿಗ್ರಹ, ರಕ್ಷಣೆ, ತಂತ್ರಜ್ಞಾನ ಸಹಕಾರದಿಂದಾಗಿ ಈ ಸಂಬಂಧ ಗಾಢವಾಗುತ್ತ ಸಾಗಿತು.

ಇರಾನ್ ಜತೆ: ಜೊರಾಸ್ಟ್ರಿಯನ್ ವಲಸೆಯ ಕಾಲದಿಂದಲೂ ಭಾರತ-ಇರಾನ್ ಮಧ್ಯೆ ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧ ಇದೆ. ದ್ವಿತೀಯ ಮಹಾಯುದ್ಧದ ನಂತರ, ರಷ್ಯಾ ಮತ್ತು ಅಮೆರಿಕ ಮಧ್ಯೆ ನಾಲ್ಕೈದು ದಶಕಗಳ ಕಾಲ ಶೀತಲ ಸಮರ (ಕೋಲ್ಡ್ ವಾರ್) ನಡೆಯುತ್ತಿದ್ದಾಗ ಇರಾನ್ ಕೂಡ ಅಲಿಪ್ತ ಒಕ್ಕೂಟದ ಭಾಗವಾಗಿತ್ತು. ಪಾಶ್ಚಿಮಾತ್ಯ ದೇಶಗಳು ಸಾಕಷ್ಟು ನಿರ್ಬಂಧಗಳನ್ನು ಹಾಕಿದರೂ ಇರಾನ್ ಜತೆ ಭಾರತ ಸೌಹಾರ್ದ ಸಂಬಂಧ ಕಾಯ್ದುಕೊಂಡಿತು. 2003ರ ‘ನವದೆಹಲಿ ಘೊಷಣೆ’ಯಿಂದಾಗಿ ಎರಡೂ ದೇಶಗಳ ನಡುವಿನ ಇಂಧನ ಮತ್ತು ಭೌಗೋಳಿಕ ಸಂಪರ್ಕ (ಉದಾಹರಣೆಗೆ, ಚಾಬಹಾರ್ ಬಂದರು) ಇನ್ನಷ್ಟು ಬಲಗೊಂಡಿತು.

ಹೀಗಿದೆ ಭಾರತದ ಸಂದಿಗ್ಧ...

ಇರಾನ್ ಮತ್ತು ಇಸ್ರೇಲ್ ಸಂಘರ್ಷ ಹೆಚ್ಚಾದರೆ, ಇತರ ದೇಶಗಳು ಇವೆರಡರ ಪೈಕಿ ಒಂದಕ್ಕೆ ಬೆಂಬಲ ನೀಡುವ ಅನಿವಾರ್ಯ ಸ್ಥಿತಿ ಎದುರಿಸುತ್ತವೆ. ಕೆಲವು ದೇಶಗಳು ಈಗಾಗಲೇ ತಮ್ಮ ಒಲವು-ನಿಲುವುಗಳನ್ನು ಬಹಿರಂಗಪಡಿಸಿಬಿಟ್ಟಿವೆ. ಉದಾಹರಣೆಗೆ, ಇಸ್ರೇಲ್ ಪರ ಅಮೆರಿಕ; ಇರಾನ್ ಪರ ರಷ್ಯಾ ಮತ್ತು ಚೀನಾ; ಆದರೆ ಭಾರತ ಹೀಗೆ ಮಾಡುವ ಸ್ಥಿತಿಯಲ್ಲಿಲ್ಲ. ಈ ಹಿಂದೆ, 2012ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಇಸ್ರೇಲ್​ನ ರಾಜತಾಂತ್ರಿಕ ಅಧಿಕಾರಿಗಳ ಕಾರಿನ ಮೇಲೆ ಬಾಂಬ್ ದಾಳಿಯಾಯಿತು. ಇದನ್ನು ಮಾಡಿದ್ದು ಇಸ್ರೇಲ್ ಎಂದು ಇರಾನ್ ಆರೋಪ ಹೊರಿಸಿತಲ್ಲದೆ ತನಿಖೆಗೆ ಆಗ್ರಹಿಸಿತು. ಅಂದು ಕೂಡ ಸಂದಿಗ್ಧಸ್ಥಿತಿ ಎದುರಿಸಿದ್ದ ಭಾರತ, ಮಧ್ಯಮ ಮಾರ್ಗ ಅನುಸರಿಸಿತು. ಘಟನೆಯನ್ನು ಖಂಡಿಸಿ, ತನಿಖೆ ಆರಂಭಿಸಿತು. ಆದರೆ ಇದಕ್ಕಾಗಿ ಇರಾನನ್ನು ಭಾರತ ದೂಷಿಸಲಿಲ್ಲ. ಇದು ಒಂದು ಉದಾಹರಣೆ ಮಾತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net