ಮಧ್ಯಪ್ರಾಚ್ಯ ಬಿಕ್ಕಟ್ಟು: ಕನಸಾಗೇ ಉಳಿಯಿತೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ? | Israel- Iran

petrole price
petrol pump
Published on

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ. ಇಸ್ರೇಲ್-ಇರಾನ್( Israel- Iran) ಬಿಕ್ಕಟ್ಟಿನಿಂದಾಗಿ, ಕಚ್ಚಾ ತೈಲ ಪೂರೈಕೆಯ ಬಿಕ್ಕಟ್ಟು ತೀವ್ರಗೊಳ್ಳಲು ಪ್ರಾರಂಭಿಸಿದೆ. ಇದರಿಂದಾಗಿ ಕಚ್ಚಾತೈಲದ ಬೆಲೆ ಏರಿಕೆಯಾಗಿದ್ದು, ಸದ್ಯದಲ್ಲಿಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದೀರ್ಘಕಾಲದವರೆಗೆ ಕಡಿಮೆ ಇದ್ದರೆ, ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಡಿಮೆ ಮಾಡಲು ಪರಿಗಣಿಸಬಹುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್ ಇತ್ತೀಚೆಗಷ್ಟೇ ಹೇಳಿದ್ದರು.

ಆದರೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಯುದ್ಧ ಭೀತಿಯ ಕಾರಣ, ಕಚ್ಚಾ ತೈಲ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಬಿಕ್ಕಟ್ಟು ಉಂಟಾಗುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ, ಕಳೆದ ಐದು ದಿನಗಳಲ್ಲಿ ಬ್ರೆಂಟ್ ಕಚ್ಚಾ ತೈಲ ಶೇ.8ಕ್ಕಿಂತ ಹೆಚ್ಚಾಗಿ ದರವು ಪ್ರತಿ ಬ್ಯಾರೆಲ್‌ಗೆ 77.62 ಡಾಲರ್​ ತಲುಪಿದೆ.

ಇನ್ನು ಇರಾನ್​ ಭಾರತದ ಪ್ರಮುಖ ಕಚ್ಚಾತೈಲ ಸರಬರಾಜು ದೇಶವಾಗಿದ್ದು, ಯುದ್ಧದ ಕಾರ್ಮೋಡ ಕವಿದಿರುವುದರಿಂದ ಕಚ್ಚಾ ತೈಲದ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀಳುತ್ತದೆ. ಸಮಸ್ಯೆ ಉಂಟಾದರೆ, ಕಚ್ಚಾ ತೈಲದ ಬೆಲೆ ಮತ್ತಷ್ಟು ಏರಿಕೆಯಾಗಬಹುದು. ಇದರ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವುದು ನಿಶ್ಚಿತ ಎಂಬ ಮಾತುಗಳು ವಾಣಿಜ್ಯ ವಲಯದಲ್ಲಿ ಕೇಳಿಬರುತ್ತಿವೆ

ಸದ್ಯಕ್ಕಿಲ್ಲ ಏರಿಕೆ?: Israel- Iran

ಆದರೆ, ಸದ್ಯದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆಯಿಲ್ಲ ಎಂದು ದೇಶೀಯ ರೇಟಿಂಗ್ ಏಜೆನ್ಸಿ ಐಸಿಆರ್‌ಎ ಇತ್ತೀಚೆಗೆ ವರದಿಯೊಂದರಲ್ಲಿ ಹೇಳಿತ್ತು. ತೈಲ ಕಂಪನಿಗಳು ಕಚ್ಚಾತೈಲ ಬ್ಯಾರಲ್​ಗೆ 70 ಡಾಲರ್​ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 15 ರೂ.ವರೆಗೆ ಲಾಭ ಗಳಿಸುತ್ತಿದ್ದು, ಸ್ವಲ್ಪ ಪ್ರಮಾಣದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದರೂ ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net