

ಯೂನಿಸ್ ಖಾನ್: ಇಸ್ರೇಲ್ ಮೇಲೆ ಪ್ಯಾಲೆಸ್ತೀನಿ ಉಗ್ರಗಾಮಿ ಸಂಘಟನೆ ಹಮಾಸ್ ನಡೆಸಿದ ಹಠಾತ್ ದಾಳಿಗೆ ಗುರುವಾರ (ಡಿ. 7) ಎರಡು ತಿಂಗಳು ತುಂಬಲಿದೆ. ದಾಳಿಗೆ ಪ್ರತಿಯಾಗಿ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸಾರಿರುವ ಪೂರ್ಣ ಪ್ರಮಾಣದ ಯುದ್ಧದಿಂದಾಗಿ ಅಲ್ಲಿ ಅಮಾನವೀಯ ವಾತಾವರಣ ಸೃಷ್ಟಿಯಾಗಿದ್ದು ಭೀಕರ ಬಾಂಬ್ ದಾಳಿಯಿಂದ ಪರಿಸ್ಥಿತಿ ಹದಗೆಡುತ್ತಲೇ ಇದೆ. ದಕ್ಷಿಣದ ಯೂನಿಸ್ ಖಾನ್ ಮೇಲಿನ ಭೂದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲಿ ಮಿಲಿಟರಿಯ ಟ್ಯಾಂಕ್ಗಳಿಂದಾಗಿ ಅಲ್ಲಿನ ಸರ್ವಸ್ವವೂ ಧರಾಶಾಯಿಯಾಗುತ್ತಿದ್ದು ಜನರಿಗೆ ಉಳಿದುಕೊಳ್ಳಲು ನೆಲೆಯೇ ಇಲ್ಲದಂತಾಗುತ್ತಿದೆ.
ಹಮಾಸ್ ದಾಳಿಕೋರರು ಅ. 7ರಂದು ಭೂ, ವಾಯು ಹಾಗೂ ಜಲಮಾರ್ಗದಿಂದ ಹಠಾತ್ತನೆ ನಡೆಸಿದ ಆಕ್ರಮಣದಲ್ಲಿ ಕೆಲವು ವಿದೇಶೀಯರ ಸಹಿತ ಸುಮಾರು 1,200 ಜನರು ಮೃತಪಟ್ಟಿದ್ದು 240 ಜನರನ್ನು ಹಮಾಸ್ನ ಒತ್ತೆಸೆರೆಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಗಾಜಾ ಮೇಲೆ ಇಸ್ರೇಲ್ ಮಿಲಿಟರಿ ನಡೆಸಿದ ದಾಳಿ ಹಾಗೂ ತದನಂತರ ಘೋಷಿಸಿದ ಪೂರ್ಣ ಪ್ರಮಾಣದ ಯುದ್ಧದಲ್ಲಿ ಕನಿಷ್ಠ 16,248 ಜನರು ಅಸುನೀಗಿದ್ದಾರೆ. ಅವರಲ್ಲಿ 7,112 ಮಕ್ಕಳು ಮತ್ತು 4,885 ಮಹಿಳೆಯರಿದ್ದಾರೆ.
ಒಂದು ವಾರ ಅವಧಿಯ ತಾತ್ಕಾಲಿಕ ಯುದ್ಧ ನಿಲುಗಡೆ ಒಪ್ಪಂದ ಕಳೆದ ಶುಕ್ರವಾರ ಅಂತ್ಯಗೊಂಡ ನಂತರ ಪುನಾರಂಭವಾದ ಸಮರ ಇದೀಗ ಭೀಕರ ಸ್ವರೂಪ ತಾಳುತ್ತಿದೆ. ಯುದ್ಧ ವಿಮಾನಗಳ ಬೆಂಬಲದೊಂದಿಗೆ ತನ್ನ ಸೈನಿಕರು ಗಾಜಾದಲ್ಲಿ ಬುಧವಾರ ಭಯಾನಕ ಕಾಳಗದಲ್ಲಿ ತೊಡಗಿದ್ದರು ಎಂದು ಇಸ್ರೇಲ್ ತಿಳಿಸಿದೆ. ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಯೂನಿಸ್ ಖಾನ್ ನಗರದ ಹೃದಯ ಭಾಗ ಹಾಗೂ ಸುತ್ತಮುತ್ತಲ ಪ್ರದೇಶವನ್ನು ತಲುಪಿದ ಒಂದು ದಿನದ ನಂತರ ಸಂಘರ್ಷ ತೀವ್ರಗೊಂಡಿದೆ.
ಯೂನಿಸ್ ಖಾನ್ ಮೇಲಿನ ದಾಳಿಯು ಹಮಾಸ್ಅನ್ನು ನಿರ್ನಾಮ ಮಾಡಲು ಐದು ವಾರದ ಹಿಂದೆ ಭೂ ಆಕ್ರಮಣ ಆರಂಭಿಸಿದ ನಂತರದ ಅತ್ಯಂತ ತೀವ್ರ ದಾಳಿಯಾಗಿದೆ. ಇಸ್ರೇಲಿ ಪಡೆಗಳು, ಒಂದು ದೊಡ್ಡ ನಿರಾಶ್ರಿತ ಶಿಬಿರ ಹಾಗೂ ಹಮಾಸ್ನ ಹಾಟ್ಬೆಡ್ ಆದ ಜಾಬಾಲಿಯಾದಲ್ಲಿ ಕೂಡ ತೀವ್ರ ಸ್ವರೂಪದ ಕಾಳಗದಲ್ಲಿ ತೊಡಗಿಸಿಕೊಂಡಿದೆ.
ಹತ್ಯಾಕಾಂಡ ನಿಲ್ಲಿಸಿ: ಗಾಯಾಳು ಪ್ಯಾಲೆಸ್ತೀನಿಯರ ಚಿಕಿತ್ಸೆಗಾಗಿ ಗಾಜಾದ ಆಸ್ಪತ್ರೆಗಳು ಪರದಾಡುತ್ತಿದ್ದು ‘ನಾಗರಿಕರ ಹತ್ಯಾಕಾಂಡ ನಿಲ್ಲಬೇಕು’ ಎಂದು ವಿಶ್ವ ಸಂಸ್ಥೆಯ ವಿಶೇಷ ಪ್ರತಿನಿಧಿ ಆಗ್ರಹಿಸಿದ್ದಾರೆ.
ಇಬ್ಬರು ಮಕ್ಕಳು ಪಾರು: ಈ ನಡುವೆ, ದೀಲ್ ಅಲ್ ಬಲಾಹ್ನಲ್ಲಿ ನಾಲ್ಕು ದಿನದ ಹಿಂದೆ ಇಸ್ರೇಲ್ನ ಬರ್ಬರ ದಾಳಿಯಿಂದ ಕುಸಿದುಬಿದ್ದ ಒಂದು ಪೌಲ್ಟ್ರಿ ಫಾಮರ್್ನ ಅವಶೇಷಗಳಡಿಯಿಂದ ಇಬ್ಬರು ಯುವ ಸೋದರಿಯರನ್ನು ಜೀವಂತವಾಗಿ ಪಾರು ಮಾಡಲಾಗಿದೆ.
ಕುಗ್ಗದ ಶಕ್ತಿ: ಇಸ್ರೇಲ್ನ ಭಾರಿ ಬಾಂಬಿಂಗ್ ಮತ್ತಿತರ ದಾಳಿಯ ನಡುವೆಯೂ ಹಮಾಸ್ ಪ್ರತಿರೋಧ ಒಡ್ಡುತ್ತಿರುವುದು ಸಂಘಟನೆಯ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಇದರಿಂದಾಗಿ ಎರಡು ತಿಂಗಳಿಂದ ನಡೆಯುತ್ತಿರುವ ಸಂಘರ್ಷ ಸದ್ಯಕ್ಕೆ ಅಂತಿಮಗೊಳ್ಳುವ ಸೂಚನೆಯಿಲ್ಲ.
ಪ್ರಮಾದಕ್ಕೆ ಇಸ್ರೇಲ್ ವಿಷಾದ: ಹೆಜ್ಬುಲ್ಲಾ ಸಂಬಂಧಿತ ನೆಲೆಯೊಂದನ್ನು ಗುರಿಯಾಗಿಸಿ ನಡೆಸಿದ ದಾಳಿ ಪ್ರಮಾದವಶಾತ್ ಲೆಬನಾನ್ ಸೈನಿಕನೊಬ್ಬನ ಸಾವಿಗೆ ಕಾರಣವಾದ ಘಟನೆ ಬಗ್ಗೆ ಇಸ್ರೇಲ್ ಬುಧವಾರ ವಿಷಾದ ವ್ಯಕ್ತಪಡಿಸಿದೆ. ಬಹಳ ಅಪರೂಪಕ್ಕೆನ್ನುವಂತೆ ಕ್ಷಮೆಯನ್ನೂ ಕೋರಿದೆ.
ಅತ್ಯಾಚಾರ ಆಘಾತಕಾರಿ: ಅಕ್ಟೋಬರ್ 7ರ ದಾಳಿ ವೇಳೆ ಹಮಾಸ್ ಉಗ್ರಗಾಮಿಗಳು ಇಸ್ರೇಲಿ ಹುಡುಗಿಯರು ಮತ್ತು ಮಹಿಳೆಯರ ಮೇಲೆ ನಡೆಸಿದರೆನ್ನಲಾದ ಅತ್ಯಾಚಾರ ಹಾಗೂ ಲೈಂಗಿಕ ಹಿಂಸಾಚಾರ ಖಂಡನೀಯ. ಜಗತ್ತು ಇದನ್ನು ನಿರ್ಲಕ್ಷಿಸಲಾಗದು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಆದರೆ, ತನ್ನ ಹೋರಾಟಗಾರರು ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಗಳನ್ನು ಹಮಾಸ್ ತಿರಸ್ಕರಿಸಿದೆ.