

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು 56 ಮಂದಿ ಗಾಯಗೊಂಡ ಹೃದಯವಿದ್ರಾವಕ ಘಟನೆ ಇಡೀ ದೇಶದ ಮನ ಕಲಕಿದೆ.
ಸಂಭ್ರಮಾಚರಣೆಗೆ ಬಂದಿದ್ದ ಕ್ರಿಕೆಟ್ ಅಭಿಮಾನಿಗಳು ಹೀಗೆ ಪ್ರಾಣ ಕಳೆದುಕೊಂಡಿದ್ದು ನಿಜಕ್ಕೂ ದುರದೃಷ್ಟಕರ. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಗಂಭೀರ ಚರ್ಚೆ ನಡೆದು ಹಲವು ಕಠಿಣ ತೀರ್ವನಗಳನ್ನು ಕೈಗೊಳ್ಳಲಾಗಿದೆ.
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚನೆ; ಆರ್ಸಿಬಿ ಸಂಸ್ಥೆ, ಕಾರ್ಯಕ್ರಮ ಆಯೋಜಿಸಿದ್ದ ಡಿಎನ್ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರತಿನಿಧಿಗಳ ಬಂಧನ, ಅವರ ವಿರುದ್ಧ ಎಫ್ಐಆರ್; ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಆ ಭಾಗದ ಎಸಿಪಿ, ಡಿಸಿಪಿ ಅಮಾನತು- ಇವೇ ಆ ಪ್ರಮುಖ ತೀರ್ವನಗಳಾಗಿವೆ. ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯವೇ ಅಹಿತಕರ ಘಟನೆಗೆ ಕಾರಣ ಎಂಬುದು ಸರ್ಕಾರದ ಸಮರ್ಥನೆ. ಮೇಲ್ನೋಟಕ್ಕೆ ಈ ಕ್ರಮಗಳು ಸಕಾಲಿಕವಾಗಿವೆ ಎಂದೆನಿಸುವುದು ಸಹಜ. ಆದರೆ, ಇಲ್ಲಿ ಹಲವು ಪ್ರಶ್ನೆಗಳು, ಅನುಮಾನಗಳು ಉದ್ಭವಿಸುತ್ತವೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬಂತೆ ಯಾರದ್ದೋ ತಪ್ಪಿಗೆ ಇನ್ಯಾರನ್ನೋ ಬಲಿ ತೆಗೆದುಕೊಳ್ಳುವ ಹುನ್ನಾರ ನಡೆದಿದೆ ಎಂಬ ಮಾತು ಕೇಳಿ ಬಂದಿವೆ.
ಇಡೀ ಘಟನೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇರಲಿಲ್ಲವೇ? ಎಲ್ಲ ನಿರ್ಧಾರಗಳನ್ನು ಪೊಲೀಸ್ ಅಧಿಕಾರಿಗಳು, ಕೆಎಸ್ಸಿಎ, ಆರ್ಸಿಬಿ ಮತ್ತು ಡಿಎನ್ಎ ಸಂಸ್ಥೆಗಳೇ ಕೈಗೊಂಡಿದ್ದವೇ? ಕೆಲವು ಮೂಲಗಳ ಪ್ರಕಾರ, ತರಾತುರಿಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರ ಹಿಂದೆ ಅಧಿಕಾರಸ್ಥ ರಾಜಕಾರಣಿಗಳ ಒತ್ತಡ ಕೆಲಸ ಮಾಡಿದೆ.
ಅಹಮದಾಬಾದ್ನಲ್ಲಿ ಐಪಿಎಲ್ ಫೈನಲ್ ಪಂದ್ಯ ಮಂಗಳವಾರ ತಡರಾತ್ರಿ ಮುಗಿದಿತ್ತು. ಅಲ್ಲಿಯೇ ಬೆಳಗಿನ ಜಾವ 3 ಗಂಟೆಯವರೆಗೂ ಆರ್ಸಿಬಿ ಆಟಗಾರರು ಸಂಭ್ರಮ ಆಚರಿಸಿದ್ದರು. ಮರುದಿನ ಬೆಳಗ್ಗೆ 10 ಗಂಟೆಗೇ ವಿಶೇಷ ವಿಮಾನದಲ್ಲಿ ಹೊರಟು ಬುಧವಾರವೇ ಬೆಂಗಳೂರಿನ ಸಾರ್ವಜನಿಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಅವರ ಮೇಲೆ ಒತ್ತಡ ಹೇರಿದವರು ಯಾರು? ಹಿಂದಿನ ರಾತ್ರಿಯಿಂದ ಬೆಳಗಿನ ಜಾವದವರೆಗೂ ಬೆಂಗಳೂರಿನಲ್ಲಿ ಸ್ಥಳೀಯ ಪೊಲೀಸರು ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಸಂಭ್ರಮ-ಸಡಗರವನ್ನು ನಿಯಂತ್ರಿಸಲು ಹೆಣಗಾಡಿ ಹೈರಾಣಾಗಿದ್ದು ಎಲ್ಲರಿಗೂ ಗೊತ್ತಿದೆ.
ಅವರಿಗೆ ತಕ್ಷಣವೇ ಮತ್ತೆ ಸರ್ಕಾರದ ಅಧಿಕೃತ ಸಂಭ್ರಮಾಚರಣೆಯ ಹೊಣೆ ಹೊರಿಸಿ ‘ಬಲವಂತದ ಮಾಘಸ್ನಾನ’ ಮಾಡಿಸಿದ ರಾಜಕಾರಣಿಗಳು ಯಾರು? ಗುರುವಾರ ಹೈಕೋರ್ಟ್ ಸ್ವಇಚ್ಛೆಯಿಂದ (ಸುಮೋಟೋ) ವಿಚಾರಣೆ ಕೈಗೆತ್ತಿಕೊಂಡು ಚಾಟಿ ಬೀಸಿದ್ದು ರಾಜ್ಯ ಸರ್ಕಾರದ ದಿಢೀರ್ ಕ್ರಿಯಾಶೀಲತೆಗೆ ಕಾರಣವಾಯಿತೇ? ಸರ್ಕಾರ ಕೆಲವು ಅಧಿಕಾರಿಗಳನ್ನು ಬಲಿಪಶು ಮಾಡಿ, ತನ್ನನ್ನು ಬಚಾವ್ ಮಾಡಿಕೊಳ್ಳಲು ಹೊರಟಿದೆಯೇ? ಇಷ್ಟು ದೊಡ್ಡ ಘಟನೆ ನಡೆದಿರುವಾಗ ಸರ್ಕಾರ ನೈತಿಕ ಹೊಣೆ ಹೊತ್ತು ಕ್ಷಮೆ ಕೇಳುವ ಸೌಜನ್ಯವನ್ನಾದರೂ ತೋರಿಸಬೇಕಲ್ಲವೇ? ಸಾರ್ವಜನಿಕರ ಇಂತಹ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗಬೇಕಿದೆ.