

Elon Musk : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಸಿಇಒ ಹಾಗೂ ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನಡುವಿನ ಸ್ನೇಹ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇಬ್ಬರೂ ಪರಸ್ಪರ ಆರೋಪಗಳನ್ನು ಮಾಡುತ್ತಿರುವುದು ಹಲವರ ಗೊಂದಲಕ್ಕೂ ಕಾರಣವಾಗಿದೆ. ಈ ಬೆಳವಣಿಗೆಯ ನಡುವೆ ಹೊಸ ರಾಜಕೀಯ ಪಕ್ಷವೊಂದು ಉದಯಿಸುವ ಸಾಧ್ಯತೆ ಇದೆ. ಟ್ರಂಪ್ಗೆ ಸೆಡ್ಡು ಹೊಡೆದ ರಾಜಕೀಯ ಪಕ್ಷ ರಚನೆಗೆ ಮಸ್ಕ್ ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎಲಾನ್ ಮಸ್ಕ್ ಅವರು ಈಗಾಗಲೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷದ ಅಗತ್ಯವಿದೆಯೇ? ಎಂದು ಕೇಳುವ ಸಮೀಕ್ಷೆಯೊಂದನ್ನು ಪೋಸ್ಟ್ ಮಾಡಿದ್ದರು. ಮಸ್ಕ್ ಪೋಸ್ಟ್ ಮಾಡಿದ ಸಮೀಕ್ಷೆಗೆ ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಸ್ಕ್ ನಡೆಸಿದ ಸಮೀಕ್ಷೆಯನ್ನು ಶೇ. 80.4 ರಷ್ಟು ನೆಟ್ಟಿಗರು ಬೆಂಬಲಿಸಿದ್ದಾರೆ. ಅಮೆರಿಕದಲ್ಲಿ ಹೊಸ ಪಕ್ಷದ ಅಗತ್ಯವಿದೆ ಎಂದು ಬಹುತೇಕರು ಮತ ಚಲಾಯಿಸಿದ್ದಾರೆ. ಶೇ. 19.6 ರಷ್ಟು ಜನರು ಮಾತ್ರ ಅಮೆರಿಕದಲ್ಲಿ ಸದ್ಯಕ್ಕೆ ಹೊಸ ಪಕ್ಷದ ಅಗತ್ಯವಿಲ್ಲ ಎಂದು ಮತ ಚಲಾಯಿಸಿದ್ದಾರೆ.
ಇತ್ತೀಚೆಗೆ, ಮಸ್ಕ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದು, ತಾವು ನಡೆಸಿದ ಸಮೀಕ್ಷೆಗೆ ಪ್ರತಿಕ್ರಿಯಿಸಿ, ದಿ ಅಮೆರಿಕ ಪಾರ್ಟಿ ಎಂದು ಬರೆದಿದ್ದಾರೆ. ಇದರೊಂದಿಗೆ, ಎಲಾನ್ ಮಸ್ಕ್ ರಚಿಸಲಿರುವ ಹೊಸ ಪಕ್ಷದ ಹೆಸರು ದಿ ಅಮೆರಿಕ ಪಾರ್ಟಿ ಎಂದು ಅಮೆರಿಕ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಎಲಾನ್ ಮಸ್ಕ್ ಅಮೆರಿಕದಲ್ಲಿ 'ದಿ ಅಮೆರಿಕ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷವನ್ನು ರಚಿಸಲಿದ್ದಾರೆ ಎಂಬ ಪ್ರಚಾರ ಪಡೆದುಕೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ರಷ್ಯಾ, ಮಸ್ಕ್ ಅವರಿಗೆ ಬಂಪರ್ ಆಫರ್ ಘೋಷಿಸಿದೆ. ರಷ್ಯಾದ ಸ್ಟೇಟ್ ಡುಮಾದ ಫೆಡರೇಶನ್ ಸಮಿತಿಯ ಅಧ್ಯಕ್ಷ ಡಿಮಿಟ್ರಿ ನೊವಿಕೋವ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, ಎಲಾನ್ ಮಸ್ಕ್ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿ. ಅವರು ವಿಭಿನ್ನ ಆಟ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ರಾಜಕೀಯ ನಿರಾಶ್ರಿತರಾಗುವ ಅಗತ್ಯವಿಲ್ಲ. ಅವರು ಹಾಗೆ ಮಾಡಲು ಬಯಸಿದರೆ, ರಷ್ಯಾ ಬೆಂಬಲ ನೀಡುತ್ತದೆ ಮತ್ತು ಮಸ್ಕ್‌ಗೆ ತಮ್ಮ ದೇಶದಲ್ಲಿ ರಾಜಕೀಯ ಆಶ್ರಯ ಪಡೆಯುವ ಅವಕಾಶವನ್ನು ಒದಗಿಸುತ್ತದೆ ಎಂದಿದ್ದಾರೆ.
ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಟ್ರಂಪ್ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ಮಾಧ್ಯಮಗಳು ಟ್ರಂಪ್ ಮುಂದೆ ಮಸ್ಕ್ ಬಗ್ಗೆ ಪ್ರಸ್ತಾಪಿಸಿದಾಗ, ನಾನೀಗ ಎಲಾನ್ ಮಸ್ಕ್ ಬಗ್ಗೆ ಯೋಚಿಸುತ್ತಿಲ್ಲ. ನಾನು ಚೀನಾ ಮತ್ತು ರಷ್ಯಾ ಸೇರಿದಂತೆ ಇತರ ವಿಷಯಗಳಲ್ಲಿ ನಿರತನಾಗಿದ್ದೇನೆ. ಮಸ್ಕ್ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದರು.
ಅಂದಹಾಗೆ, ಮಸ್ಕ್ ಇತ್ತೀಚೆಗೆ ಟ್ರಂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಅದೇನೆಂದರೆ, ಇದು ದೊಡ್ಡ ಬಾಂಬ್‌ಶೆಲ್‌ನಂತಹ ಸ್ಫೋಟಕ ಸಂಗತಿ ಹೇಳುವ ಸಮಯ. ಎಪ್ಸ್ಟೀನ್ ಫೈಲ್‌ಗಳಲ್ಲಿ ಟ್ರಂಪ್ ಹೆಸರಿದೆ. ಅದಕ್ಕಾಗಿಯೇ ಆ ಫೈಲ್‌ಗಳ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ‘ಬಿಗ್ ಬ್ಯೂಟಿಫುಲ್ ಬಿಲ್’ ವ್ಯವಹಾರದಲ್ಲಿ ಮಸ್ಕ್ ಅವರ ವರ್ತನೆಯಿಂದ ನಾನು ತೀವ್ರ ಬೇಸತ್ತಿದ್ದೇನೆ ಎಂದು ಟ್ರಂಪ್ ಮಾಧ್ಯಮಗಳಿಗೆ ಹೇಳಿದ ಕೆಲವೇ ಗಂಟೆಗಳಲ್ಲಿ ಮಸ್ಕ್ ಈ ಟ್ವೀಟ್ ಮಾಡಿದ್ದಾರೆ ಎಂಬುದು ಗಮನಾರ್ಹ. ಇನ್ನು ಮಸ್ಕ್ ಇತ್ತೀಚೆಗೆ ಅಮೆರಿಕದ ಸರ್ಕಾರಿ ದಕ್ಷತಾ ಇಲಾಖೆಯಿಂದ ಹಿಂದೆ ಸರಿದರು ಎಂಬ ವಿಷಯ ಬಹುತೇಕರಿಗೆ ಗೊತ್ತೇ ಇದೆ. ಈ ಇಲಾಖೆಯಿಂದ ಹಿಂದೆ ಸರಿದ ಬೆನ್ನಲ್ಲೇ ಹೇಳಿಕೆ ನೀಡಿದ ಮಸ್ಕ್, ಟ್ರಂಪ್ ನನ್ನ ಸಹಾಯದಿಂದ 2024ರ ಅಧ್ಯಕ್ಷೀಯ ಚುನಾವಣೆ ಗೆದ್ದರು ಎಂದರು. ಹೀಗೇ ಇಬ್ಬರ ನಡುವಿ ವಾಕ್ಸಮರ ಮುಂದುವರಿದಿದ್ದು, ಇದು ಎಲ್ಲಿ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)