

ನಿಜವಾದ ಅರ್ಥದಲ್ಲಿ ಭಗವಂತನ ನಾಮ ಸ್ಮರಣೆಯ ಬಗ್ಗೆ ಭಗವಾನ್ ಶ್ರೀ ರಾಮಕೃಷ್ಣರು ಅನೇಕ ಬಾರಿ ಸತ್ಸಂಗಗಳಲ್ಲಿ ಸರಳವಾಗಿ ವಿವರಿಸುತ್ತಾರೆ. ಅವರ ಪ್ರಕಾರ ಭಗವತ್ ಚಿಂತನೆ ಎಂಬುದು ನಿರಂತರವಾಗಿ ನಡೆಯುತ್ತಿರುವಂತಹದ್ದು. ಹೇಗೆ ಹೃದಯ ಸ್ಪಂದಿಸುತ್ತಿರುತ್ತದೆಯೋ ಅದೇ ತೆರನಾಗಿ ನಮ್ಮ ಆಂತರ್ಯದಲ್ಲಿ ಭಗವನ್ನಾಮ ಜಪ ನಮ್ಮ ಬಾಹ್ಯ ಸ್ಥಿತಿಗೆ ಅರಿವಿಲ್ಲದೆಯೇ ನಡೆಯುತ್ತಿರಬೇಕು. ಅದೊಂದು ಸಮಯ. ಶ್ರೀರಾಮ ಮತ್ತು ಲಕ್ಷ್ಮಣ, ಸೀತೆಯನ್ನು ಹುಡುಕುತ್ತಾ ಕಾನನದಲ್ಲಿ ಅಲೆಯುತ್ತಿರುವಾಗ ಒಂದು ಕಾಗೆ ನೀರಿನ ಬಳಿ ಬರುತ್ತದೆ, ತಕ್ಷಣ ನೀರು ಕುಡಿಯದೆ ಹಿಂದಿರುಗುತ್ತದೆ. ಈ ತೆರನಾಗಿ ಪದೇ ಪದೇ ಮಾಡುತ್ತಿರುವಾಗ ಲಕ್ಷ್ಮಣ ಈ ದೃಶ್ಯವನ್ನು ಕಂಡು ಶ್ರೀರಾಮನಿಗೆ ಪ್ರಶ್ನಿಸುತ್ತಾನೆ. ಏಕೆ ಈ ಕಾಗೆ ನೀರಿನ ಬಳಿ ಬಂದು ಮತ್ತೆ ಹಿಂದಿರುಗುತ್ತದೆ ಎಂದು. ರಾಮಚಂದ್ರ ನೀನೇ ಹೋಗಿ ವಿಚಾರಿಸು ಎನ್ನುತ್ತಾನೆ. ಆಗ ಲಕ್ಷ್ಮಣ ಕುತೂಹಲದಿಂದ ಆ ಕಾಗೆಯ ಬಳಿ ಕೇಳಿದಾಗ, ಆ ಕಾಗೆ ಉತ್ತರಿಸುತ್ತದೆ: ನಾನು ನಿರಂತರವಾಗಿ ಶ್ರೀರಾಮನ ಸ್ಮರಣೆ ಮಾಡುತ್ತಿದ್ದೇನೆ. ಒಂದು ವೇಳೆ ನೀರನ್ನು ಕುಡಿಯುವಾಗ
ಶ್ರೀರಾಮ ನಾಮವನ್ನು ಎಲ್ಲಿ ಬಿಟ್ಟುಬಿಡುತ್ತೇನೋ ಎಂಬ ಆತಂಕ ಎಂದಾಗ, ಲಕ್ಷ್ಮಣ ಆಶ್ಚರ್ಯಚಕಿತನಾದನಂತೆ. ಈ ಉದಾಹರಣೆಯನ್ನು ರಾಮಕೃಷ್ಣರು ನೆರೆದ ಭಕ್ತರಿಗೆ ತಿಳಿಸಿ ಒಂದು ಕ್ಷಣವನ್ನೂ ಬಿಡದೆ ನಿರಂತರ ಭಗವನ್ನಾಮ ಸ್ಮರಣೆ ಎಂದರೆ ಇದು ಎಂದು ಭೋಧಿಸಿದರಂತೆ.
ಹಾಗೆಯೇ ನಾಮಸ್ಮರಣೆಯ ಮಹಿಮೆಯನ್ನು ವಿವರಿಸುತ್ತಿದ್ದಾಗ ಭಕ್ತನೊಬ್ಬ ರಾಮಕೃಷ್ಣರಿಗೆ ಈ ಪ್ರಶ್ನೆ ಯನ್ನು ಹಾಕುತ್ತಾನೆ: ಮಹಾಶಯರೇ, ಒಬ್ಬ ವ್ಯಕ್ತಿ ಉಳಿದ ಸಮಯದಲ್ಲೆಲ್ಲಾ ಭಗವದ್ ಚಿಂತನೆ ಮಾಡಿದ್ದಾನೆ, ಆದರೆ ಮರಣಶಯ್ಯೆಯಲ್ಲಿರುವಾಗ ಆತನ ಚಿಂತನೆ ಮಾಡಲಿಲ್ಲ ಎಂದು ಆತ ಮತ್ತೆ ಈ ಸುಖ-ದುಃಖಮಯ ಸಂಸಾರಕ್ಕೆ ಹಿಂದಿರುಗಿ ಬರಬೇಕಾಗುತ್ತೇನು? ಹಾಗೆ ಏಕಾಗಬೇಕು? ಆತ ಹಿಂದೆಯೇ ಭಗವದ್ ಚಿಂತನೆ ಮಾಡಿದ್ದಾನಲ್ಲವೇ?
ರಾಮಕೃಷ್ಣರು: ಮನುಷ್ಯ ಭಗವದ್ ಚಿಂತನೆಯೇನೋ ಮಾಡುತ್ತಾನೆ, ಆದರೆ ಆತನ ಇರುವಿಕೆಯಲ್ಲಿ ಆತನಿಗೆ ವಿಶ್ವಾಸವಿಲ್ಲ, ಮತ್ತೆ ಮತ್ತೆ ಭಗವಂತನನ್ನು ಮರೆಯುತ್ತಾನೆ. ಮತ್ತೆ ಸಂಸಾರದಲ್ಲಿ ಆಸಕ್ತನಾಗುತ್ತಾನೆ.ಮನುಷ್ಯ ಮೃತ್ಯುಶಯ್ಯೆಯಲ್ಲಿ ಭಗವಂತನ ಚಿಂತನೆ ಮಾಡಿದರೆ ಆತನ ಮನಸ್ಸು ಪರಿಶುದ್ಧವಾಗುತ್ತದೆ. ಆ ಮನಸ್ಸಿಗೆ ಮತ್ತೆ ಕಾಮ ಕಾಂಚನದಲ್ಲಿ ಆಸಕ್ತವಾಗಲು ಅವಕಾಶ ದೊರೆಯದು. ಮನುಷ್ಯನಿಗೆ ಭಗವಂತನಲ್ಲಿ ವಿಶ್ವಾಸವಿಲ್ಲ; ಅದಕ್ಕಾಗಿಯೇ ಆತ ಅಷ್ಟೊಂದು ದುಃಖವನ್ನು ಅನುಭವಿಸುವುದು. ನಿಜ, ಕೇವಲ ನಾಮ ಜಪ, ಸ್ಮರಣೆ ಎಂಬುದೆಲ್ಲ ತೋರ್ಪಡಿಕೆಗೆ ಸೀಮಿತವಾಗಬಾರದು. ಪೂರ್ಣ ಮನಸ್ಸಿನಲ್ಲಿ ಭಗವಂತನಲ್ಲಿ ನಂಬಿಕೆ, ವಿಶ್ವಾಸವಿಡಬೇಕು. ನಾಮ ಜಪ ಕೇವಲ ಅಂಕಿಅಂಶಗಳ ಹಿನ್ನೆಲೆಯಲ್ಲಿ ನಡೆಯಬಾರದು. ಪೂರ್ಣ ಏಕಾಗ್ರತೆ, ಪೂರ್ಣ ವಿಶ್ವಾಸದಿಂದ ಭಗವದ್ ಚಿಂತನೆ ಕೈಗೊಂಡರೆ ಖಂಡಿತ
ಭಗವದ್ ಸಾಕ್ಷಾತ್ಕಾರ ಪಡೆಯುವುದರಲ್ಲಿ ಸಂಶಯವೇ ಇರುವುದಿಲ್ಲ. ಈ ವಿಚಾರಕ್ಕೆ ಜ್ವಲಂತ ಸಾಕ್ಷಿ ಎಂದರೆ ಭಗವಾನ್ ರಾಮಕೃಷ್ಣರೇ ಎನ್ನಬಹುದು. ಅವರ ಪ್ರಕಾರ, ಭಗವಂತನ ಸ್ಮರಣೆ ಎಂದರೆ ಆ ಅದ್ಭುತ ಭಗವದ್ ರೂಪವನ್ನು ನಿರಂತರವಾಗಿ ಸ್ಮರಿಸುವುದು. ಇದರ ಮೊದಲ ಫಲಿತಾಂಶವೆಂದರೆ, ಭಗವಂತನು ಹೃದಯದಲ್ಲಿ ರಾರಾಜಿಸುತ್ತಿದ್ದಾನೆ ಎಂಬ ಅನುಭವ. ಇದರ ಪರಿಣಾಮವಾಗಿ ಅನಿರ್ವಚನೀಯ ಆನಂದ ಮತ್ತು ಶಾಂತಿ, ಮನಸ್ಸಿನ ತುಮುಲಾಟಗಳೆಲ್ಲಾ ಮಾಯವಾಗಿ ನೆಮ್ಮದಿಯು ಆವರಿಸುತ್ತದೆ. ಆಂತರ್ಯದಲ್ಲಿ ಭಗವದಾನಂದವನ್ನು ಅನುಭವಿಸಬಹುದು.
ಹೀಗೆ ನಿಜ ಅರ್ಥದಲ್ಲಿ ಭಗವದ್ ಚಿಂತನೆ, ಭಗವಾ ಧ್ಯಾನವನ್ನು ರಾಮಕೃಷ್ಣರು ತಮ್ಮ ವಚನಾಮೃತದಲ್ಲಿ ಅತ್ಯಂತ ಸಾಮಾನ್ಯ ಸಾಧಕನಿಗೂ ಅರಿವಾಗುವಂತೆ ಅನೇಕಾನೇಕ ಉದಾಹರಣೆಗಳ ಮೂಲಕ ವಿವರಿಸುತ್ತಾರೆ.
(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)
(ಪ್ರತಿಕ್ರಿಯಿಸಿ: vvsudina@gmail.com, swajapa@gmail.com)