FACT CHECK: ಅಹಮದಾಬಾದ್​ನಲ್ಲಿ ಕಟ್ಟಲಾಗುತ್ತಿರುವ 7 ಅಡಿಯ ಗೋಡೆ ನಿಜವಾಗಿಯೂ ಟ್ರಂಪ್​ ಕಣ್ಣಿಗೆ ಸ್ಲಂ ಕಾಣದಿರುವಂತೆ ಮಾಡುವುದಕ್ಕಾ?

wall
Published on

ಅಹಮದಾಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಫೆ.24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್​ನ ಮೊಟೆರಾದಲ್ಲಿ ನಿಮಿರ್ಸಲಾಗಿರುವ ಕ್ರೀಡಾಂಗಣವನ್ನು ಟ್ರಂಪ್​ ಉದ್ಘಾಟನೆ ಮಾಡಲಿದ್ದು, ಅದಕ್ಕೆಂದು ಅಹಮದಾಬಾದ್​ನಲ್ಲಿ ಭಾರಿ ಸಿದ್ಧತೆ ನಡೆಸಲಾಗುತ್ತಿದೆ. ಟ್ರಂಪ್​ ಭೇಟಿಯ ಪ್ರಯುಕ್ತ ಅವರಿಗೆ ನಗರದ ಸ್ಲಂ ಕಾಣದಿರಲೆಂದು 7 ಅಡಿಯ ಗೋಡೆಯನ್ನು ಕಟ್ಟಲಾಗುತ್ತಿದೆ ಎನ್ನುವುದು ಸುದ್ದಿಯಾಗಿತ್ತು. ಇದೀಗ ಆ ಗೋಡೆಯ ಸತ್ಯಾಂಶವನ್ನು ಇಂಡಿಯಾ ಟಿವಿ ಬಿಚ್ಚಿಟ್ಟಿದೆ.

ಟ್ರಂಪ್​ನ ಕಣ್ಣಿಗೆ ಕೊಳೆಗೇರಿ ಕಾಣದಿರಲಿ ಎನ್ನುವ ಕಾರಣದಿಂದ ಮೋದಿ ಸರ್ಕಾರವು ತರಾತುರಿಯಲ್ಲಿ 7 ಅಡಿಯ ಗೋಡೆ ನಿರ್ಮಾಣ ಮಾಡಿಸುತ್ತಿದೆ ಎನ್ನುವುದು ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ನಿಜ ಏನೆಂದರೆ ಅಲ್ಲಿ 7 ಅಡಿಯ ಗೋಡೆ ನಿರ್ಮಾಣವಾಗುತ್ತಿಲ್ಲ, ಬದಲಾಗಿ 4 ಅಡಿಯ ಗೋಡೆ ನಿರ್ಮಾಣವಾಗುತ್ತಿದೆ. ಹಾಗೆಯೇ ಈ ಗೋಡೆಯನ್ನು ಸ್ಲಂ ಮುಚ್ಚಿಡಬೇಕು ಎನ್ನುವ ಕಾರಣದಿಂದ ನಿರ್ಮಾಣ ಮಾಡಲಾಗುತ್ತಿಲ್ಲ.

ಗೋಡೆ ನಿರ್ಮಿಸಲಾಗುತ್ತಿರುವುದು ಸರಣಿ ಆವಾಸ್​ ಪ್ರದೇಶದಲ್ಲಿ. ಈ ಪ್ರದೇಶದಲ್ಲಿ ಕಳೆದ 50-60 ವರ್ಷಗಳಿಂದ ಅನಧಿಕೃತ ಅತಿಕ್ರಮಣ ಹೆಚ್ಚಾಗಿ ನಡೆಯುತ್ತಿದೆ. ಆ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಅಲ್ಲಿ ಗೋಡೆಯನ್ನು ಕಟ್ಟಲಾಗುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬರುವ ನಿರ್ಧಾರ ಆಗುವ ಮೊದಲೇ ಅಲ್ಲಿ ಗೋಡೆ ಕಟ್ಟುವ ಯೋಜನೆಯನ್ನು ಹಾಕಲಾಗಿತ್ತು. ಇದೀಗ ಆ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ ಅಷ್ಟೇ.

ಈ ಗೋಡೆಯನ್ನು ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯ ಸರ್ಕಾರವಾಗಲಿ ನಿರ್ಮಿಸುವಂತೆ ಆದೇಶಿಸಿಲ್ಲ. ಅಹಮದಾಬಾದ್​ನ ಮುನ್ಸಿಪಲ್​ ಕಾರ್ಪೋರೇಶನ್​ ವತಿಯಿಂದ ನಗರದ ಹಿತರಕ್ಷಣೆಗಾಗಿಯೇ ಗೋಡೆ ನಿರ್ಮಾಣವಾಗುತ್ತಿದೆ. ಮುನ್ಸಿಪಲ್​ ಕಾರ್ಪೋರೇಶನ್​ ಆಯುಕ್ತರಾಗಿರುವ ವಿಜಯ್​ ನೇಹ್ರಾ ಈ ಕುರಿತು ಮಾತನಾಡಿದ್ದು, "ಸ್ಥಳೀಯ ಪತ್ರಿಕೆಯೊಂದು ಗೋಡೆಯನ್ನು ಸ್ಲಂ ಮುಚ್ಚುವುದಕ್ಕೆಂದು ನಿರ್ಮಿಸಲಾಗುತ್ತಿದೆ ಎಂದು ವರದಿ ಮಾಡಿತ್ತು. ಅದು ತಪ್ಪೋ ಸರಿಯೋ ಎಂದು ಪರಿಶೀಲಿಸದೆ ರಾಷ್ಟ್ರೀಯ ಮಾಧ್ಯಮಗಳೂ ಸಹ ಅದನ್ನೇ ವರದಿ ಮಾಡಿದವು. ಟ್ರಂಪ್​ ಬರುವ ನಿರ್ಧಾರಕ್ಕಿಂತ ಬಹಳ ಮೊದಲೇ ಗೋಡೆಯ ಯೋಜನೆಯನ್ನು ಹಾಕಲಾಗಿತ್ತು. ಆದರೆ ಇದೀಗ ಕಾಕತಾಳೀಯವಾಗಿ ಇವೆರೆಡು ವಿಚಾರಗಳಿಗೂ ಸಂಬಂಧ ಕಲ್ಪಿಸಲಾಗಿದೆ." ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net