ರಾಹುಲ್​ ಗಾಂಧಿ ಮತಕಳ್ಳತನ ಆರೋಪ ತಳ್ಳಿಹಾಕಿದ ಚುನಾವಣಾ ಆಯೋಗ; SIR ಕುರಿತಾದ ನಿಲುವು ತಿಳಿಸುವಂತೆ ಸವಾಲ್​ | Election Commission

Rahul gandi | Election Commission
Published on

ದೆಹಲಿ: ಹರಿಯಾಣದಲ್ಲಿ ದೊಡ್ಡ ಮಟ್ಟದಲ್ಲಿ ಮತಕಳ್ಳತನವಾಗಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪವನ್ನು ಭಾರತೀಯ ಚುನಾವಣಾ ಆಯೋಗ (Election Commission) ಬುಧವಾರ (ಅ 5) ತಳ್ಳಿಹಾಕಿದೆ.

ಆರೋಪಗಳಿಗೆ ಪ್ರತಿಕ್ರಿಯಿಸಿರುವ ಆಯೋಗ, ಹರಿಯಾಣದಲ್ಲಿ ಮತದಾರರ ಪಟ್ಟಿಯ ವಿರುದ್ಧ ಯಾವುದೇ ಮೇಲ್ಮನವಿಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. 90 ವಿಧಾನಸಭಾ ಸ್ಥಾನಗಳ ಪೈಕಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಸ್ತುತ ಕೇವಲ 22 ಚುನಾವಣಾ ಅರ್ಜಿಗಳು ಬಾಕಿ ಉಳಿದಿವೆ ಎಂದು ಇದೇ ವೇಳೆ ತಿಳಿಸಿದೆ.

ಮತದಾನದ ದಿನದಂದು ಕಾಂಗ್ರೆಸ್‌ನ ಮತಗಟ್ಟೆ ಏಜೆಂಟರು ಏನು ಮಾಡುತ್ತಿದ್ದರು ಎಂದು ಪ್ರಶ್ನಸಿರುವ ಆಯೋಗ, ಮತದಾರರು ಈಗಾಗಲೇ ಮತ ಚಲಾಯಿಸಿದ್ದರೆ, ಅವರ ಗುರುತಿನ ಬಗ್ಗೆ ಅನುಮಾನವಿದ್ದರೆ ಆಕ್ಷೇಪಣೆ ಸಲ್ಲಿಸಬೇಕು ಎಂದು ತಿಳಿಸಿದೆ. ಮತದಾರರ ಪಟ್ಟಿಯಿಂದ ನಕಲಿ ಮತದಾರರನ್ನು ತೆಗೆದುಹಾಕುವ ಗುರಿಯನ್ನು ಹೊಂದಿರುವ ವಿಶೇಷ ತೀವ್ರ ಪರಿಷ್ಕರಣೆಯನ್ನು ರಾಹುಲ್ ಗಾಂಧಿ ಬೆಂಬಲಿಸುತ್ತಾರೆಯೇ ಅಥವಾ ವಿರೋಧಿಸುತ್ತಾರೆಯೇ ಎನ್ನುವುದನದ್ನು ಸ್ಪಷ್ಟಪಡಿಸುವಂತೆ ಕೋರಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ

ಮತದಾನದ ಮೇಲ್ವಿಚಾರಣೆ ಮಾಡಲು ಮತ್ತು ಅಕ್ರಮಗಳನ್ನು ಪತ್ತೆ ಮಾಡಲು ರಾಜಕೀಯ ಪಕ್ಷಗಳು ಬಿಎಲ್‌ಎಗಳನ್ನು ನೇಮಿಸುತ್ತವೆ. ಕಾಂಗ್ರೆಸ್ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಯಾವುದೇ ಆಕ್ಷೇಪಣೆಗಳನ್ನು ಎತ್ತಿಲ್ಲ ಮತ್ತು ಈ ನಿಟ್ಟಿನಲ್ಲಿ ಅವರು ಯಾವುದೇ ಮೇಲ್ಮನವಿಗಳನ್ನು ಸಲ್ಲಿಕೆಯಾಗಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. ನಕಲಿ ನಮೂದುಗಳು ಅಸ್ತಿತ್ವದಲ್ಲಿದ್ದರೆ, ಅಂತಹ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಗೆ ಪ್ರತಿಪಾದಿಸುತ್ತಾರೆ ಎಂದು ಚುನಾವಣಾ ಆಯೋಗವು ಟೀಕಿಸಿದ್ದು, ಆ ಮತದಾರರು ಕಾಂಗ್ರೆಸ್‌ಗೆ ಮತ ಹಾಕಿರಬಹುದಲ್ಲ ಎಂದು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಗಳನ್ನು ನವೀಕರಿಸುವುದು ಮತ್ತು ಸುಮಾರು 51 ಕೋಟಿ ಮತದಾರರ ಅರ್ಹತೆಯನ್ನು ಪರಿಶೀಲಿಸುವ ಗುರಿಯನ್ನು ಹೊಂದಿರುವ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ ಎರಡನೇ ಹಂತ ಆರಂಭವಾದ ಮರುದಿನವೇ ರಾಹುಲ್​ ಗಾಂಧಿಯಿಂದ ಈ ಮತ ಕಳ್ಳತನದ ಆರೋಪಗಳು ಮತ್ತೆ ಕೇಳಿ ಬಂದಿದೆ.

ರಾಹುಲ್​ ಗಾಂಧಿ ಆರೋಪವೇನು..?

2 ಕೋಟಿ ಮತದಾರರಿರುವ ಹರಿಯಾಣದಲ್ಲಿ 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ, ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅನರ್ಹ ಮತದಾರರು ಮತ್ತು 19.26 ಲಕ್ಷ ಬೃಹತ್ ಮತದಾರರು ಸೇರಿದ್ದಾರೆ ಇದರ ಅರ್ಥ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ, ಅಂದರೆ ಶೇಕಡಾ 12.5 ರಷ್ಟು, ಇದರ ಉದ್ದೇಶವೇ ಮೊಸದ ಮೂಲಕ ಕಾಂಗ್ರೆಸ್​ ಪಕ್ಷವನ್ನು ಸೋಲಿಸುವುದಾಗಿತ್ತು ಎಂದರು. ಹರಿಯಾಣ ಚುನಾವಣೆಯ ದಿನ ಎಲ್ಲಾ ಎಕ್ಸಿಟ್​ ಪೋಲ್​ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಗೆಲುವಿನ ಭವಿಷ್ಯ ನುಡಿದಿದ್ದವು, ಆದರೆ ಫಲಿತಾಂಶ ಬದಲಾಗಿ ಬಿಜೆಪಿ ಗೆಲುವು ಸಾಧಿಸಿವೆ ಎಂದರು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಮಾಧ್ಯಮಗಳ ಮುಂದೆ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿರುವ ವೀಡಿಯೊವನ್ನು ಸಹ ಪ್ರದರ್ಶಿಸಿದರು.

ಚುನಾವಣಾ ಆಯೋಗವು ಮನಸ್ಸು ಮಾಡಿದರೆ ಒಂದು ಸೆಕೆಂಡಿನಲ್ಲಿ ನಕಲಿ ಮತದಾರರನ್ನು ತೆಗೆದುಹಾಕಬಹುದು. ಆದರೆ ಅವರು ಏಕೆ ಅದನ್ನು ಮಾಡುತ್ತಿಲ್ಲ? ಕಾರಣ ಸ್ಪಷ್ಟ, ಅವರು ಬಿಜೆಪಿಗೆ ಸಹಾಯ ಮಾಡುತಿದ್ದಾರೆ ಎಂದು ಹೇಳಿದರು. ಇದೇ ವೇಳೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಂದೇ ರೀತಿಯ ಚಿತ್ರಗಳಿಗೆ ವಿಭಿನ್ನ ಹೆಸರುಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ನಿದರ್ಶನಗಳನ್ನು ತೋರಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net