

ಮುಸ್ಲಿಂ ಹುಡುಗಿಯ ಮದುವೆ ವಯಸ್ಸಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(NCPCR) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.
21ರ ಮುಸ್ಲಿಂ ಯುವಕ ಮತ್ತು 16ರ ಮುಸ್ಲಿಂ ಹುಡುಗಿಯ ನಡುವಿನ ಪ್ರೇಮ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಮಾನ್ಯವೆಂದು ಪರಿಗಣಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪನ್ನು NCPCR ತನ್ನ ಅರ್ಜಿಯಲ್ಲಿ ಪ್ರಶ್ನಿಸಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ, ಒಬ್ಬ ಹುಡುಗಿ ಪ್ರೌಢಾವಸ್ಥೆಗೆ ಬಂದ ನಂತರ ಅಥವಾ ಕನಿಷ್ಠ 15 ವರ್ಷ ವಯಸ್ಸಿನವಳಾದ ನಂತರ ಮದುವೆಗೆ ಮಾನ್ಯವಾಗಿ ಪ್ರವೇಶಿಸಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಈ ವಿಷಯದ ಕುರಿತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶದ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆರ್.ಮಹಾದೇವನ್ ಅವರಿದ್ದ ಪೀಠ, ಪುರುಷ ಮತ್ತು ಹುಡುಗಿಯ ಒಪ್ಪಿಗೆಯೊಂದಿಗೆ ಮದುವೆ ಆಗಿದೆ ಎಂದು ಹೇಳಿದೆ. "ನಾವು ಸಮಾಜದ ವಾಸ್ತವತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಈಗ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಇದ್ದಾರೆ. ಎಲ್ಲರಿಗೂ ಶಿಕ್ಷಣದ ಸ್ವಾತಂತ್ರ್ಯವಿದೆ. ಈಗ ಅವರು ಪರಸ್ಪರ ಭಾವನೆಗಳನ್ನು ಬೆಳೆಸಿಕೊಂಡಿದ್ದಾರೆ. ಪ್ರೀತಿಸುವುದು ಅಪರಾಧ ಎಂದು ನೀವು ಹೇಳಬಲ್ಲಿರಾ?" ಎಂದು ಸುಪ್ರೀಂ ಕೋರ್ಟ್ ಪೀಠ ಕೇಳಿತು.
"ಇಬ್ಬರು ಮಕ್ಕಳಿಗೆ ರಕ್ಷಣೆ ನೀಡಬಾರದು ಎಂದು NCPCR ಹೇಳಲು ಸಾಧ್ಯವಿಲ್ಲ. ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸುವ ಹಕ್ಕು ಆಯೋಗಕ್ಕೆ ಇಲ್ಲ" ಎಂದು ಪೀಠವು ಅಭಿಪ್ರಾಯಪಟ್ಟಿತು.
ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (POCSO) ಕಾಯ್ದೆಯ ಉಲ್ಲಂಘನೆಯಾಗಿದೆ. ಏಕೆಂದರೆ ಇದು ಬಾಲ್ಯವಿವಾಹ ಮತ್ತು ಮಕ್ಕಳೊಂದಿಗೆ ಲೈಂಗಿಕ ಸಂಭೋಗಕ್ಕೆ ಪರಿಣಾಮಕಾರಿಯಾಗಿ ಅವಕಾಶ ಮಾಡಿಕೊಟ್ಟಿದೆ ಎಂದು NCPCR ತನ್ನ ಮೇಲ್ಮನವಿಯಲ್ಲಿ ತಿಳಿಸಿದೆ.(ಏಜೆನ್ಸೀಸ್)