ದೇಗುಲಕ್ಕೆ ನೆಲಹಾಸು ಹಾಕಿಸಿದ್ದು ತಪ್ಪೇ?

devagange
ದೇವಗಂಗೆ ದೇವಸ್ಥಾನದ ಎದುರು ಇಂಟರ್‌ಲಾಕ್ ನೆಲಹಾಸು ಅಳವಡಿಸಿರುವುದು.
Published on

ಹೊಸನಗರ: ಇತಿಹಾಸ ಪ್ರಸಿದ್ಧ ದೇವಗಂಗೆ ಸಪ್ತಕೊಳದ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಅಭಿವೃದ್ಧಿ ಕುರಿತು ವಿವಾದ ಸೃಷ್ಟಿಯಾಗಿದೆ. ದೇಗುಲದ ಎದುರು ಭಾಗದಲ್ಲಿ ಭಕ್ತರು ಇಂಟರ್‌ಲಾಕ್ ನೆಲಹಾಸು ಅಳವಡಿಸಿರುವುದು ಪುರಾತತ್ವ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ.

ತಲೆತಲಾಂತರದಿಂದ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿರುವ ದೇಗುಲದ ವಿಚಾರದಲ್ಲಿ ಇಲಾಖೆಯು ಇದೀಗ ತಳೆಯುತ್ತಿರುವ ಧೋರಣೆ ಬಗ್ಗೆ ಗ್ರಾಮಸ್ಥರಲ್ಲಿ ಆಕ್ರೋಶ ಉಂಟುಮಾಡಿದೆ. ತಾಲೂಕಿನ ಇತಿಹಾಸ ಪ್ರಸಿದ್ಧ ದೇವಗಂಗೆ ಗಂಗಾಧರೇಶ್ವರ ಸನ್ನಿಧಿ ಪ್ರಸ್ತುತ ವಿವಾದದ ವಿಷಯ.

ದೇಗುಲದ ಎದುರು ಇಂಟರ್‌ಲಾಕ್ ಟೈಲ್ಸ್ ಅಳವಡಿಸಿರುವುದೇ ವಿವಾದಕ್ಕೆ ಮುಖ್ಯ ಕಾರಣ. ಶ್ರೀ ಗಂಗಾಧರೇಶ್ವರ ದೇವಾಲಯ ಸ್ಥಳೀಯರೇ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿನಿತ್ಯದ ಪೂಜೆ, ಎಳ್ಳಮಾವಾಸ್ಯೆ ಜಾತ್ರೆ, ಕಾರ್ತಿಕ ದೀಪೋತ್ಸವ, ಮಹಾ ಶಿವರಾತ್ರಿ ಸೇರಿ ಎಲ್ಲ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ಪ್ರತಿನಿತ್ಯ ಪೌರೋಹಿತ್ಯ ನಡೆಸುವ ಅರ್ಚಕರಿಗೂ ಸ್ಥಳೀಯರೇ ಸಮಿತಿ ರಚಿಸಿಕೊಂಡು ಸಂಭಾವನೆ ನೀಡುತ್ತ ಬಂದಿದ್ದಾರೆ. ಮಳೆಗಾಲದಲ್ಲಿ ದೇಗುಲದ ಎದುರು ಕೆಸರಿನಿಂದ ಓಡಾಡಲು ಸಮಸ್ಯೆ ಆಗುತ್ತಿದ್ದ ಕಾರಣ ಭಕ್ತರ ಅಭಿಪ್ರಾಯದಂತೆ ಮರಳಿನ ಮೇಲೆ ಇಂಟರ್‌ಲಾಕ್ ಅಳವಡಿಸಿದ್ದಾರೆ. ಇದು ಪುರಾತತ್ವ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದು ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ದೇಗುಲದ ಎದುರಲ್ಲಿ ಭಕ್ತರು ಇಂಟರ್‌ಲಾಕ್ ನೆಲಹಾಸು ಅಳವಡಿಸಿರುವುದರ ವಿರುದ್ಧ ಪುರಾತತ್ವ ಇಲಾಖೆ ಅಡ್ಡಿಪಡಿಸಿರುವುದಲ್ಲದೆ ಠಾಣೆಗೆ ದೂರು ನೀಡಿದೆ. ಇದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಠಾಣೆಗೆ ತೆರಳಿ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಭಕ್ತರು ಹೇಳುವುದೇನು?: ದೇವಗಂಗೆ ಸಪ್ತಕೊಳ ಮಾತ್ರ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತದೆಯೇ ಹೊರತು, ದೇವಸ್ಥಾನ ಇಲಾಖೆ ವ್ಯಾಪ್ತಿಗೆ ಸೇರಿಲ್ಲ. ಒಂದು ವೇಳೆ ಇಲಾಖೆ ವ್ಯಾಪ್ತಿಗೆ ಬಂದರೆ ಆ ಬಗ್ಗೆ ದಾಖಲೆ ನೀಡಿ ಗ್ರಾಮಸ್ಥರಿಗೆ ಸ್ಪಷ್ಟನೆ ನೀಡಲಿ. ಬಸವನಬ್ಯಾಣ ಮತ್ತು ದೇವಗಂಗೆ ಈ ಎರಡು ಗ್ರಾಮಗಳಿಗೆ ಇರುವುದು ಇದೊಂದೇ ದೇಗುಲ. ಎಲ್ಲ ಭಕ್ತರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ಈ ದೇಗುಲವನ್ನು ನಿರ್ಮಾಣ ಮಾಡಿದ್ದು ಸಹ ನಮ್ಮ ಪೂರ್ವಜರು. ನಂತರದಲ್ಲೂ ಹಲವು ಬಾರಿ ಅಭಿವೃದ್ಧಿ ಕೆಲಸವನ್ನು ಗ್ರಾಮಸ್ಥರೇ ನಡೆಸಿದ್ದಾರೆ. ದೇವಸ್ಥಾನದಲ್ಲಿ ಧಾರ್ಮಿಕ ಅನುಷ್ಠಾನಗಳು ನಡೆದರೆ ಮಾತ್ರ ಗ್ರಾಮಗಳಿಗೆ ಒಳ್ಳೆಯದು. ದೇವಸ್ಥಾನ ತಮಗೆ ಸೇರಿದ್ದು ಎಂದು ಹೇಳಿಕೊಳ್ಳುವ ಪುರಾತತ್ವ ಇಲಾಖೆ ದೇವಸ್ಥಾನದ ಅಭಿವೃದ್ಧಿಗೆ ಹಣ ವಿನಿಯೋಗಿಸಿಲ್ಲ. ಇಲ್ಲಿನ ಸ್ವಚ್ಛತೆಗೂ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಹೇಳಿಕೆ ಬದಲು: ಈ ಹಿಂದೆ ಶ್ರೀ ಗಂಗಾಧರೇಶ್ವರ ದೇಗುಲ ಅಭಿವೃದ್ಧಿ ಮಾಡುವಂತೆ ಪುರಾತತ್ವ ಇಲಾಖೆಯನ್ನು ಕೋರಲಾಗಿತ್ತು. ಆ ಸಂದರ್ಭ ಪರಿಶೀಲನೆಗೆ ಬಂದ ಅಂದಿನ ಪುರಾತತ್ವ ಇಲಾಖೆ ಅಧಿಕಾರಿ ಅರ್ಜುನ್ ಬಂಗಾರ್ಜಿ, ಸದರಿ ದೇವಸ್ಥಾನ ಪುರತತ್ವ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಗ್ರಾಮಸ್ಥರೇ ಅಭಿವೃದ್ಧಿಪಡಿಸಬಹುದು ಎಂಬ ಹೇಳಿಕೆ ನೀಡಿದ್ದರು. ಅದರಂತೆ 1996ರಲ್ಲಿ ಗ್ರಾಮಸ್ಥರು ದೇವಸ್ಥಾನದ ಗೋಡೆ ನಿರ್ಮಾಣ, ನೆಲಹಾಸು, ಮೇಲ್ಛಾವಣಿ, ಅನೇಕ ಅಭಿವೃದ್ಧಿ ಕಾರ್ಯನಡೆಸಿ, ಸುಗಮವಾಗಿ ಪೂಜಾ ಕಾರ್ಯ ನಡೆಸುತ್ತಿದ್ದಾರೆ. ಆದರೆ ಇದೀಗ ಇದ್ದಕ್ಕಿದ್ದಂತೆ ಪುರಾತತ್ವ ಇಲಾಖೆ ಅಭಿವೃದ್ಧಿಗೆ ಅಡ್ಡಿ ಮಾಡುತ್ತಿರುವುದೇಕೆ ಎಂಬುದು ಸ್ಥಳೀಯರ ಪ್ರಶ್ನೆ.

ಅಧಿಕಾರಿಗಳು ಬರಲಿ: ಇಂದು ದೇವಗಂಗೆ ಸಪ್ತಕೊಳ, ದೇಗುಲ ಸಂರಕ್ಷಣೆ ಆಗಿದ್ದರೆ ಅದಕ್ಕೆ ಸ್ಥಳೀಯರ ಕಾಳಜಿಯೇ ಕಾರಣವೇ ಹೊರತು ಇಲಾಖೆಯದ್ದಲ್ಲ. ಗ್ರಾಮಸ್ಥರ ಸಹಕಾರದಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಪಾವಿತ್ರ್ಯತೆ ಕಾಪಾಡಿಕೊಂಡು ಸಾಗುತ್ತಿದೆ. ಆದರೆ ಇದೀಗ ದೇಗುಲದ ಮುಂಭಾಗದಲ್ಲಿ ಭಕ್ತರು ಇಂಟರ್‌ಲಾಕ್ ನೆಲಹಾಸು ಅಳವಡಿಸಿರುವುದರ ವಿರುದ್ಧ ಪುರಾತತ್ವ ಇಲಾಖೆ ಪೊಲೀಸ್ ಠಾಣೆಗೆ ದೂರು ನೀಡಿರುವುದು ಸರಿಯಲ್ಲ ಎಂಬುದು ಗ್ರಾಮಸ್ಥರ ವಾದ. ಪ್ರಸಕ್ತ ಎದ್ದಿರುವ ವಿವಾದದ ಸಲುವಾಗಿ ಅಧಿಕಾರಿಗಳು ಬಂದು ಗ್ರಾಮಸ್ಥರೊಂದಿಗೆ ಸಮಾಲೋಚಿಸಲಿ. ದೇಗುಲದ ಹಿತದೃಷ್ಟಿಯಿಂದ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದೆ. ಅಧಿಕಾರಿಗಳು ದೇಗುಲದ ಹಿತದೃಷ್ಟಿಯಿಂದ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕೇ ಹೊರತು ವಿವಾದಕ್ಕೆ ಕಾರಣರಾಗಬಾರದು ಎಂಬುದು ಗ್ರಾಮಸ್ಥರ ಆಗ್ರಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net