

ಶಿವಮೊಗ್ಗ: ಬಹುಸಂಖ್ಯಾತ ಹಿಂದುಗಳ ಆಚರಣೆಗಳ ಮೇಲೆ ದಾಳಿ ನಡೆಸುತ್ತಿರುವ ಮತಾಂಧರ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಬಹುಸಂಖ್ಯಾತ ಹಿಂದುಗಳು ತಮ್ಮ ಆಚರಣೆ, ಹಬ್ಬಗಳನ್ನು ಮಾಡುವುದೇ ತಪ್ಪು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಂತಿದೆ. ಮದ್ದೂರಿನಲ್ಲಿ ಗಣೇಶನ ಮೆರವಣಿಗೆ ಮೇಲೆ ಕಲ್ಲು ಎಸೆದಿದ್ದಾರೆ. ಭದ್ರಾವತಿಯಲ್ಲಿ ಈದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣೇಶ ಉತ್ಸವ, ಹನುಮ ಜಯಂತಿ ಮುಂತಾದ ಆಚರಣೆಗಳನ್ನು ಮಾಡುವುದೇ ಅಪರಾಧ ಎಂಬಂತಾಗಿದೆ. ಹಿಂದುಗಳ ಮೆರವಣಿಗೆ ಸಾಗುವ ಮಾರ್ಗವನ್ನೂ ಪೊಲೀಸರೇ ನಿರ್ಧರಿಸುತ್ತಿದ್ದಾರೆ. ಮುಸ್ಲಿಂ ಧಾರ್ಮಿಕ ಕೇಂದ್ರಗಳ ಸಮೀಪ ಮೆರವಣಿಗೆ ಸಾಗಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಹಿತಕರ ಘಟನೆ ನಡೆದಾಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇದೊಂದು ಸಣ್ಣ ಘಟನೆ ಎಂದು ಹೇಳಿಕೆ ನೀಡುತ್ತಾರೆ. ತಮ್ಮ ಮೇಲಾದ ದೌರ್ಜನ್ಯಕ್ಕೆ ಹಿಂದುಗಳು ಪ್ರತಿಭಟನೆ ನಡೆಸಿದರೆ ಅವರ ಮೇಲೆಯೇ ಪೊಲೀಸರು ಲಾಠಿ ಪ್ರಹಾರ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ಮುಸ್ಲಿಂ ಗೂಂಡಾಗಳು ಪದೇಪದೆ ರಾಜ್ಯದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. ಶತ್ರು ದೇಶದ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲವೇ? ಸಮಾಜದ ಅಶಾಂತಿಗೆ ಕಾರಣರಾದ ಮುಸ್ಲಿಂ ಗೂಂಡಾಗಳನ್ನು ಬಂಧಿಸಬೇಕು. ಹಿಂದುಗಳ ಹಬ್ಬಗಳ ಮೆರವಣಿಗೆಗಳಲ್ಲಿ ಮತಾಂಧರಿಂದ ಯಾವುದೇ ತೊಂದರೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಜಾಧವ್, ರಮೇಶ್‌ಕುಮಾರ್, ಮಹೇಶ್‌ಕುಮಾರ್, ಶ್ರೀಕಾಂತ್, ಕುಬೇರಪ್ಪ, ಮೋಹನ್, ಅನಿತಾ, ವೆಂಕಟೇಶ್, ಮೂರ್ತಿ, ಮಂಜುನಾಥ್, ಸೀತಾಲಕ್ಷ್ಮೀ ಪ್ರತಿಭಟನೆಯಲ್ಲಿದ್ದರು.