ಘನವಾವುದು?

1-6877e54f03484
Published on
ಘನ ಅಂದರೆ ದೊಡ್ಡದು, ಶ್ರೇಷ್ಠವಾದುದು. ಇನ್ನೂ ಹಲವಾರು ಅರ್ಥಗಳಿವೆ, ಇರಲಿ. ಇಲ್ಲಿ ಬಸವಣ್ಣನವರು ತಮ್ಮ ವಚನದಲ್ಲಿ ಘನ ವಾವುದು ಎಂಬ ಬಗ್ಗೆ ಚನ್ನಾಗಿ ತಿಳಿಸಿದ್ದಾರೆ. ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು/ ಧರೆ ಘನವೆಂಬೆನೆ? ನಾಗೇಂದ್ರನ ಪಣಾ ಮಣಿಯ ಮೇಲಡಗಿತ್ತು/ನಾಗೇಂದ್ರ ಘನವೆಂಬೆನೆ?/ ಪಾರ್ವತಿಯ ಕಿರುಬೆರಳಿನ ಮುದ್ರಿಕೆಯಾಯಿತ್ತು/

ಅಂತಹ ಪಾರ್ವತಿ ಘನವೆಂಬನೆ? ಪರಮೇಶ್ವರನ/ಅರ್ಧಾಂಗಿನಿ ಯಾದಳು, ಅಂತಹ ಪರಮೇಶ್ವರ ಘನವೆಂಬನೆ/ ನಮ್ಮ ಕೂಡಲ ಸಂಗನ ಶರಣರ ಮನದ ಕೊನೆಯ ಮೇಲಡಗಿದನು...ಜಗತ್ತಿನಲ್ಲಿ ದೊಡ್ಡದಾವುದು? ಎಂಬ ಪ್ರಶ್ನೆ ಬಂದಾಗ ಜಗದಲ್ಲಿ ಎಲ್ಲಕ್ಕಿಂತ ಸಮುದ್ರ ದೊಡ್ಡದು ಅದು ಹೇಗೆ? ಅಂದರೆ ಮೂರು ಪಾಲು ನೀರು ಇದೆ.

ಒಂದು ಪಾಲು ಭೂಮಿ ಇದೆ ಅಂದಾಗ ಸಮುದ್ರ ದೊಡ್ಡದಾಯಿತು. ಆದರೆ ಆ ಸಮುದ್ರವು ಭೂಮಿಯ ಆಧಾರದಿಂದ ಭೂಮಿಯ ಮೇಲೆ ಅಡಗಿದೆ. ಅದಕ್ಕೆ ಸಮುದ್ರಕ್ಕಿಂತ ಭೂಮಿ ದೊಡ್ಡದಾಯಿತು. ಭೂಮಿ ಮೇಲೆಯೆ ಎಲ್ಲ ಜಗದ ವ್ಯವಹಾರಗಳು ನಡೆಯುತ್ತವೆ ಆದರೆ ಈ ಭೂಮಿ ಯಾವ ಆಧಾರ ಮೇಲೆ ನಿಂತಿದೆಯೆಂದರೆ ಆದಿಶೇಷ ಅಥವಾ ನಾಗೇಂದ್ರನ ಹೆಡೆಯ ಮೇಲೆ ನಿಂತಿದೆ. ಅಂದಾಗ ಭೂಮಿಗಿಂತ ನಾಗೇಂದ್ರ ದೊಡ್ಡವನಾದನು.

ನಾಗೇಂದ್ರಗಿಂತ ದೊಡ್ಡವರಾರು? ನಾಗೇಂದ್ರನು ಪಾರ್ವತಿಯ ಕಿರುಬೆರಳಿನ ಉಂಗುರುವಾಗಿದ್ದಾನೆ (ಮುದ್ರಿಕೆ). ಅವನೂ ದೊಡ್ಡವನಲ್ಲ, ಇಲ್ಲಿ ಪಾರ್ವತಿ ದೊಡ್ಡವಳಾದಳು. ಬಸವಣ್ಣನವರ ಪ್ರಕಾರ, ಪಾರ್ವತಿಯೂ ದೊಡ್ಡವಳಲ್ಲ. ಆಕೆ ಸಹ ಪರಮೇಶ್ವರನ ಅರ್ಧಾಂಗಿ ಆಗಿದ್ದಾಳೆ. ಪರಮೇಶ್ವರ ದೊಡ್ಡವ ಅಂತೀರಾ? ಆತನೂ ದೊಡ್ಡವನಲ್ಲ. ಮತ್ತೆ ಯಾರು ದೊಡ್ಡವರು? ಶರಣರು ದೊಡ್ಡವರು.

ಹೇಗೆ? ಶರಣರು ಆ ಪರಮಾತ್ಮನನ್ನು ಮನದಲ್ಲಿರಿಸಿ ಮನದ ಕೊನೆಯಲ್ಲಿ ಇರಿಸಿಕೊಂಡಿದ್ದಾರೆ. ಅದಕ್ಕೆ ಜಗತ್ತಿನಲ್ಲಿ ಘನವಾವುದೆಂದರೆ ಶರಣರು ದೊಡ್ಡವರಾದರು, ಶ್ರೇಷ್ಠರಾದರು. ಅವರೆಲ್ಲ ಶಿವನನ್ನು ಮನದ ಕೊನೆಯಲ್ಲಿರಿಸಿಕೊಂಡು ಕೀರ್ತಿವಂತರಾಗಿ ಜನಮನದಲ್ಲಿ ಉಳಿದಿದ್ದಾರೆ. ಇದೆಲ್ಲವನ್ನು ತಿಳಿದು ನಡೆದರೆ ನಮಗೂ ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net