

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕೆಲವು ಮಕ್ಕಳು ಹದಿಹರಯಕ್ಕೆ ಬಂದಾಗ ಶರೀರದ ರಚನೆ ಹಾಗೂ ಕ್ರಿಯಾ ಚಟುವಟಿಕೆಗಳಲ್ಲಿ ಆಗುವ ಬದಲಾವಣೆಗಳಿಂದ ಸಂಪೂರ್ಣವಾಗಿ ಗುಣಮುಖರಾಗುವುದೂ ಇದೆ. ಇನ್ನು ಕೆಲವರ ದೇಹದಲ್ಲಿ ಮಧ್ಯವಯಸ್ಸಿನಲ್ಲಿ ಇಂತಹ ಪರಿವರ್ತನೆ ಆಗುವುದೂ ಇದೆ. ಆ ಮಕ್ಕಳ ತಂದೆತಾಯರಲ್ಲೂ ಬಾಲ್ಯದಲ್ಲಿ ಇಂತಹುದೇ ಮಾರ್ಪಾಡುಗಳು ಘಟಿಸಿರುವುದನ್ನು ಹಲವರು ನೆನಪಿಸಿಕೊಳ್ಳುತ್ತಾರೆ.
ಆದರೆ ಎಲ್ಲ ಮಕ್ಕಳಲ್ಲಿ ಅದು ಹೀಗಾಗುವುದಿಲ್ಲ. ಮಕ್ಕಳಾಗಿದ್ದಾಗ ಕಂಡುಬರುವ ಉಸಿರಾಟದ ಸಮಸ್ಯೆಯನ್ನು ಆಗಲೇ ಸಮರ್ಪಕವಾದ ಚಿಕಿತ್ಸೆ ನೀಡಿ ಪರಿಹರಿಸಿಕೊಳ್ಳಬೇಕೇ ಹೊರತು ವಯಸ್ಸಾಗುವ ತನಕ ಕಾದು ನೋಡುವ ತಂತ್ರದಲ್ಲಿ ಹುರುಳಿಲ್ಲ, ಸರಿಯೂ ಅಲ್ಲ.
ಬೇಸಿಗೆಯಲ್ಲಿ ಸಂಜೆ ಹೊತ್ತು ಶಾಲೆ ಬಿಡುವ ಸಮಯದಲ್ಲಿ ಜೋರಾಗಿ ಅಕಾಲಿಕ ಮಳೆ ಬಂದುಬಿಟ್ಟರೆ ಅಲ್ಲಿರುವ ಸಾವಿರ ವಿದ್ಯಾರ್ಥಿಗಳೂ ಮಳೆನೀರಲ್ಲಿ ತೋಯುತ್ತಾರೆ, ಅದರಲ್ಲೇ ಆಟವಾಡುತ್ತಾರೆ. ಬೇಸಿಗೆಯಾದ್ದರಿಂದ ಶಾಲೆಗೆ ಯಾರೂ ಕೊಡೆಯನ್ನು ಒಯ್ದಿರುವುದಿಲ್ಲ. ಆ ದಿನ ರಾತ್ರಿ ಹತ್ತು ಮಕ್ಕಳಿಗೆ ಶೀತಜ್ವರ, ಕೆಮ್ಮು ಪ್ರಾರಂಭವಾಗುತ್ತದೆ. ರೋಗದ ಕಾರಣವೇನೆಂಬುದು ಹೆತ್ತವರಿಗೂ ಗೊತ್ತಿರುತ್ತದೆ. ಚಿಕಿತ್ಸೆ ನೀಡುವ ವೈದ್ಯರಿಗೂ ತಿಳಿದಿದೆ. ಆದರೆ ಆ ಮಳೆಯೇ ಜ್ವರ ಕೆಮ್ಮುಗಳಿಗೆ ಮೂಲ ಕಾರಣವಲ್ಲ!! ಯಾವ ಮಕ್ಕಳ ಶ್ವಾಸಕಾಂಗವ್ಯೂಹದ ರೋಗನಿರೋಧಕ ಶಕ್ತಿ ತಾತ್ಕಾಲಿಕವಾಗಿ ಕಡಿಮೆಯಿರುತ್ತದೋ, ಆ ಮಕ್ಕಳು ಮಾತ್ರ ರೋಗದಿಂದ ಅಂದು ಬಾಧಿತರಾಗಿರುತ್ತಾರೆ.
ಹೆಚ್ಚಿನ ಮನೆಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿರುತ್ತಾರೆ. ಹಲವು ಮಕ್ಕಳಿಗೆ ಶೀತ, ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಗಳು ಆಗಿಂದಾಗ್ಯೆ ಬಾಧಿಸುತ್ತಾ ಇರುತ್ತದೆ. ತರಗತಿಯಲ್ಲಿ ಯಾರೇ ಒಬ್ಬರು ಕೆಮ್ಮಿದರೆ, ಸೀನಿದರೆ ಸಾಕು ಇಂತಹ ಮಕ್ಕಳಲ್ಲಿ ತಕ್ಷಣ ರೋಗಲಕ್ಷಣಗಳು ಆರಂಭವಾಗಿಬಿಡುತ್ತವೆ. ಶಾಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವುದರಿಂದ ಹಾಗೂ ಆರೋಗ್ಯದ ಸಮಸ್ಯೆ ಇರುವ ಅನೇಕರ ಜೊತೆ ಏಳೆಂಟು ಗಂಟೆ ಕಾಲಕಳೆಯುವುದರಿಂದ ಒಬ್ಬರಿಗಿರುವ ಕೆಮ್ಮು ಇನ್ನೊಬ್ಬರಿಗೆ ಹರಡುವುದು ಸಹಜವೇ.
ಇದುವೇ ರೋಗ ಬರಲು ಕಾರಣವೆಂದು ವೈದ್ಯರೂ ಸೇರಿದಂತೆ ಎಲ್ಲರೂ ನಂಬುತ್ತಾರೆ. ತಿಂಗಳಿಗೆ ಎರಡುಬಾರಿ ಕಾಯಿಲೆಯಿಂದ ಚಡಪಡಿಸಿ ಒದ್ದಾಡಿ ವೈದ್ಯರ ಬಳಿ ಹೋಗುತ್ತಿರುತ್ತಾರೆ. ಪ್ರಾರಬ್ಧ ಕರ್ಮವೆಂದುಕೊಂಡು ಮತ್ತೆಮತ್ತೆ ಅನುಭವಿಸಿ ಸುಮ್ಮನಾಗುತ್ತಾರೆ. ಕೆಮ್ಮುತ್ತಿದ್ದ ವಿದ್ಯಾರ್ಥಿಯ ಪಕ್ಕದಲ್ಲೇ ಕುಳಿತು ಪಾಠ ಕೇಳಿದ, ಜೊತೆಯಾಗಿ ಆಟವಾಡಿದ, ಊಟಮಾಡಿದ ವಿದ್ಯಾರ್ಥಿಗಳಿಗೆ ಏನೂ ಆಗಿರುವುದಿಲ್ಲ! ತರಗತಿಯಲ್ಲಿರುವ ಬಹುತೇಕರ ಬಳಿ ಯಾವುದೇ ರೀತಿಯ ಶೀತ, ಕೆಮ್ಮು ಸುಳಿದಿರುವುದೇ ಇಲ್ಲ! ಯಾಕೆ ಹೀಗೆ ಎಂದು ಅರ್ಥೈಸಿಕೊಳ್ಳುವುದರಲ್ಲಿ ಸಮರ್ಪಕವಾಗಿ ನಡೆಯಬೇಕಾದ ಚಿಕಿತ್ಸೆಯ ದಿಕ್ಕು ಅಡಗಿದೆ.
ಯಾರಲ್ಲಿ ಶ್ವಾಸವಹಸಂಸ್ಥಾನ ಬಲಹೀನವಾಗಿರುತ್ತದೋ ಅವರಿಗೆ ನಿರಂತರವಾಗಿ ಉಸಿರಾಟದ ಸಮಸ್ಯೆ ಕಾಡುತ್ತಿರುತ್ತದೆ. ಯಾವ ದೇಹದಲ್ಲಿ ಶ್ವಾಸಕಾಂಗವ್ಯೂಹ ಪ್ರಬಲವಾಗಿರುತ್ತದೋ, ಅದು ಬೇರೆಯವರಿಗೆ ಬಂದಿರುವ ಕೆಮ್ಮು ಜ್ವರಗಳಿಗೆ ತುತ್ತಾಗುವುದಿಲ್ಲ, ಮಾತ್ರವಲ್ಲ ಅವರ ದೇಹಕ್ಕೆ ಪಕ್ಕದವರಿಗೆ ಕಾಯಿಲೆ ಇತ್ತೆಂದೂ ಗೊತ್ತಾಗುವುದಿಲ್ಲ!
ಮನೆಯಲ್ಲಿ ಅವಳಿ ಮಕ್ಕಳಿದ್ದಾಗ ಅವರ ಬಟ್ಟೆ-ಬರೆ, ಗಾಳಿ-ಬೆಳಕು, ಆಹಾರ-ವಿಹಾರ ಎಲ್ಲವೂ ಸಮಾನವಾಗಿರುತ್ತದೆ. ಹಾಗಿದ್ದೂ ಒಂದು ಮಗುವಿಗೆ ಸದಾ ಉಸಿರಾಟದ ತೊಂದರೆ. ಇನ್ನೊಂದು ಮಗು ಕಾಯಿಲೆಗಳಿಲ್ಲದೇ ಲವಲವಿಕೆಯಿಂದ ಕ್ರಿಯಾಶೀಲವಾಗಿರುತ್ತದೆ. ಮನೆಯ ಪಕ್ಕದಲ್ಲಿ ಕಟ್ಟಡ ನಿರ್ವಣ, ರಸ್ತೆಯ ದುರಸ್ತಿ ಎಲ್ಲವೂ ನಡೆಯುತ್ತಿದ್ದು ಸಿಕ್ಕಾಪಟ್ಟೆ ಧೂಳು ಮನೆಗೆ ಬರುತ್ತಿರುತ್ತದೆ. ವಾತಾವರಣ ಕಲುಷಿತಗೊಂಡಿರುವುದು ಬರಿಯ ಕಣ್ಣಿಗೇ ಕಾಣುತ್ತಿರುತ್ತದೆ.
ಆ ಧೂಳು, ಹೊಗೆಗಳಿಂದಲೇ ಇಷ್ಟೆಲ್ಲಾ ಅವಾಂತರ ಎಂದು ಮನೆಮಂದಿಗೂ ತಿಳಿದಿರುತ್ತದೆ, ವೈದ್ಯರೂ ಅದನ್ನೇ ಹೇಳುತ್ತಾರೆ. ಆದರೆ ಮೂಲಕಾರಣ ಈ ಧೂಳು, ಹೊಗೆಗಳಲ್ಲ! ಧೂಳೇ ಕಾರಣವಾಗಿದ್ದರೆ ಮನೆಯಲ್ಲಿರುವ ಎಲ್ಲರಿಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬೇಕಿತ್ತು. ಆದರೆ ವಾಸ್ತವ ಹಾಗಿಲ್ಲ. ಮನೆಯಲ್ಲಿ ಎಲ್ಲರೂ ಅದೇ ಧೂಳು, ಹೊಗೆ ಕಲುಷಿತ ವಾತಾವರಣದಲ್ಲೇ ಇದ್ದರೂ ಚೆನ್ನಾಗಿದ್ದಾರೆ! ಅಂದಮೇಲೆ ಎಲ್ಲವೂ ಒಂದೇ ಆಗಿರುವ ಅವಳಿಗಳಲ್ಲಿ ಯಾಕಿಂತಹ ಭಿನ್ನತೆ?! ಯಾರು ತೊಂದರೆಗೆ ಒಳಗಾಗುತ್ತಿದ್ದಾರೋ ಅವರ ಶ್ವಾಸಕೋಶ ಗಟ್ಟಿಯಿಲ್ಲ ಎಂಬುದು ಆಯುರ್ವೆದದ ತಿಳುವಳಿಕೆ. ಉಳಿದವರಿಗೆ ಬೇರೆ ಹಲವಾರು ಕಾಯಿಲೆಗಳಿರಬಹುದು.
ಆದರೆ ಬಲಶಾಲಿಯಾದ ಶ್ವಾಸಕಾಂಗ ವ್ಯವಸ್ಥೆಯಿದೆ ಎಂದರ್ಥ. ಕಾಯಿಲೆಯನ್ನು ಹೆಚ್ಚಿಸುವ ಅಂಶಗಳು ಬೇರೆ, ಕಾರಣಗಳು ಬೇರೆ, ಶ್ವಾಸರೋಗದ ಮೂಲ ಕಾರಣವೇ ಬೇರೆ! ಸದೃಢವಾದ ಈ ಚಿಂತನೆ ಚಿಕಿತ್ಸೆಯ ದಿಕ್ಕನ್ನೇ ಬದಲಾಯಿಸುತ್ತದೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತದೆ. ಇನ್ನಷ್ಟು ವಿವರಣೆಗಳೊಂದಿಗೆ ಆಸ್ತಮಾದ ಅಂತರಂಗವನ್ನು ಮುಂದೆ ಅರಿಯಬೇಕಿದೆ.(ಪ್ರತಿಕ್ರಿಯಿಸಿ: vvsudina@gmail.com)