ಸಾಮಾಜಿಕ ಜಾಲತಾಣದಿಂದ ಹಣ ಹರಿದು ಬರುತ್ತಾ? ನಿಜವೆಂದು ಸಾಬೀತು ಮಾಡಿದ ಮನೆಗೆಲಸದಾಕೆ! Housemaid

Housemaid
Published on

Housemaid: ಸಾಮಾಜಿಕ ಜಾಲತಾಣದಲ್ಲಿ ಕೇವಲ ನೆಗೆಟಿವ್​ ಮಾತ್ರ ಇಲ್ಲ ಪಾಸಿಟಿವ್​ ಅಂಶಗಳು ಕೂಡ ಇದೆ. ನಾವು ಹೇಗೆ ಬಳಸಿಕೊಳ್ಳುತ್ತೇವೆ ಅನ್ನೋದರ ಮೇಲೆ ನಿಂತಿದೆ. ಜಾಲತಾಣದ ಗೀಳಿಗೆ ಬಿದ್ದು ಬದುಕು ಹಾಳು ಮಾಡಿಕೊಂಡವರು ಮಾತ್ರ ಇಲ್ಲ. ಇದೇ ಜಾಲತಾಣವನ್ನು ನಂಬಿ ಬದುಕು ಕಟ್ಟಿಕೊಂಡವರು ಕೂಡ ನಮ್ಮ ನಡುವೆ ಇದಾರೆ ಎಂಬುದಕ್ಕೆ ಈ ತಾಜಾ ಉದಾಹರಣೆಯೇ ಸಾಕ್ಷಿ.

ಅನೀಶ್​ ಭಗತ್​ ಹೆಸರು ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಪರಿಚಯವಿರುತ್ತದೆ. ಕೆಲವರಿಗೆ ಹೆಸರಿನ ಪರಿಚಯವಿಲ್ಲದಿದ್ದರೂ ಮುಖ ಪರಿಚಯ ಇದ್ದೇ ಇರುತ್ತದೆ. ಅನೀಶ್​ ಭಗತ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ತನ್ನ ಇನ್​​ಸ್ಟಾಗ್ರಾಂನಲ್ಲಿ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ.

ಅನೀಶ್​ ಅವರ ವಿಡಿಯೋದಲ್ಲಿ ಆಗಾಗ ಅವರ ಮನೆಗೆಲಸದಾಕೆ ರೇಷ್ಮಾ ಕಾಣಿಸಿಕೊಳ್ಳುತ್ತಿರುತ್ತಾರೆ. ಅನೀಶ್​ ಜತೆ ರೇಷ್ಮಾ ಅವರು ಕಾಮಿಡಿ ಮತ್ತು ಡಾನ್ಸ್​ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿರುತ್ತವೆ. ಇತ್ತೀಚೆಗಷ್ಟೇ ರೇಷ್ಮಾ ಅವರು ಹೊಚ್ಚ ಹೊಸ ಮನೆಯನ್ನು ಹೊಂದಿದ್ದು, ಅವರ ಖುಷಿಯ ವಿಡಿಯೋವನ್ನು ಅನೀಶ್ ಹಂಚಿಕೊಂಡಿದ್ದಾರೆ. ಅಂದಹಾಗೆ ರೇಷ್ಮಾ ಅವರ ಬಳಿ ಯಾವುದೇ ಸಾಮಾಜಿಕ ಜಾಲತಾಣ ಖಾತೆ ಇಲ್ಲ. ಕೇವಲ ಅನೀಶ್‌ ಜತೆ ವಿಡಿಯೋ ಕಾಣಿಸಿಕೊಳ್ಳುತ್ತಾರಷ್ಟೇ. ಅದರ ಮೂಲಕ ಗಳಿಸಿದ ಆದಾಯವನ್ನು ಬಳಸಿಕೊಂಡು ಯಾವುದೇ ಸಾಲವಿಲ್ಲದೆ ಮನೆಯನ್ನು ಹೊಂದುವ ರೇಷ್ಮಾ ಅವರ ಕನಸನ್ನು ಅನೀಶ್​ ನನಸು ಮಾಡಿದ್ದಾರೆ.

ಅನೀಶ್ ಅವರ ಇನ್​ಸ್ಟಾಗ್ರಾಂ ಫಾಲೋವರ್ಸ್​ಗೆ ರೇಷ್ಮಾ ಅವರು ಪರಿಚಿತ ಮುಖವಾಗಿದ್ದಾರೆ. ಆರಂಭದಲ್ಲಿ ಕುತೂಹಲದಿಂದ ಕಾಣಿಸಿಕೊಂಡ ರೇಷ್ಮಾ, ಕ್ರಮೇಣ ಅನೀಶ್​ ಅವರ ವಿಡಿಯೋಗಳ ಸಾಮಾನ್ಯ ಭಾಗವಾದರು. ಕಳೆದ ವರ್ಷ, ರೇಷ್ಮಾ ಅವರು ಅನೀಶ್ ಜೊತೆಗೆ ವಿವಿಧ ಬ್ರಾಂಡ್ ಸಹಯೋಗಗಳಲ್ಲಿ ಭಾಗವಾಗಿದ್ದಾರೆ. ಈ ಮೂಲಕ ಭಾರಿ ಆದಾಯದ ಪಾಲನ್ನು ಗಳಿಸಿದ್ದಾರೆ.

ರೇಷ್ಮಾ ಅವರ ಈ ಹಿಂದಿನ ನಿವಾಸವು ಇಕ್ಕಟ್ಟಾದ ಮತ್ತು ಅನಾನುಕೂಲಕರವಾಗಿತ್ತು. ಹೀಗಾಗಿ ಆರಾಮದಾಯಕವಾದ ಮನೆಯನ್ನು ಹೊಂದುವುದು ಯಾವಾಗಲೂ ರೇಷ್ಮಾ ಅವರ ಕನಸಾಗಿತ್ತು. ಇದೀಗ ಅನೀಶ್, ರೇಷ್ಮಾ ಅವರ ಹೊಸ ಮನೆಯನ್ನು ಕನಸನ್ನು ನನಸು ಮಾಡಿದ್ದಾರೆ. ಹೊಸ ಮನೆ ವಿನ್ಯಾಸ ಮತ್ತು ಗೃಹಪ್ರವೇಶ ಸಮಾರಂಭಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಅನೀಶ್​ ಹಂಚಿಕೊಂಡಿದ್ದಾರೆ. ಈ ಸಾಧನೆಯು ರೇಷ್ಮಾ ಅವರ ಕುಟುಂಬಕ್ಕೆ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಏಕೆಂದರೆ, ರೇಷ್ಮಾ ಅವರು ಇಂತಹ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ.

ರೇಷ್ಮಾ ಅವರ ಹೊಸ ಮನೆಯು ಎರಡು ವಿಶಾಲವಾದ ಕೋಣೆಗಳನ್ನು ಹೊಂದಿದೆ. ಮೊದಲ ಕೊಠಡಿಯು ವಿಶಾಲವಾದ ಹಾಲ್​ ಮತ್ತು ಮಲಗುವ ಕೋಣೆಯನ್ನು ಹೊಂದಿದೆ. ಎರಡನೆಯದು ಊಟದ ಪ್ರದೇಶ ಮತ್ತು ಅಡುಗೆಮನೆಯನ್ನು ಹೊಂದಿದೆ. ಅನೀಶ್ ಅವರು ಪ್ರಮುಖ ಬ್ರಾಂಡ್​ನ ಸಹಯೋಗದೊಂದಿಗೆ ಹೊಸ ಮನೆಯನ್ನು ಸುಂದರವಾಗಿ ಅಲಂಕರಿಸುವ ಮೂಲಕ ರೇಷ್ಮಾ ಅವರನ್ನು ಮತ್ತಷ್ಟು ಆಶ್ಚರ್ಯಗೊಳಿಸಿದರು. ತನ್ನ ಸಂಪೂರ್ಣ ಸುಸಜ್ಜಿತ ಮನೆಯೊಳಗೆ ಕಾಲಿಡುತ್ತಿದ್ದಂತೆ ರೇಷ್ಮಾ ಅವರು ಕುಣಿದು ಕುಪ್ಪಳಿಸಿರುವ ಭಾವುಕ ದೃಶ್ಯ ಅನೀಶ್​ ಹಂಚಿಕೊಂಡಿರುವ ವಿಡಿಯೋದಲ್ಲಿದೆ.

ತನ್ನ ಜೀವನದಲ್ಲಿ ಇಷ್ಟೊಂದು ನೆಮ್ಮದಿಯಿಂದ ಇರಬಹುದೆಂದು ಊಹಿಸಿರಲಿಲ್ಲ ಎಂದು ರೇಷ್ಮಾ ಸಂತಸ ವ್ಯಕ್ತಪಡಿಸಿದರು. ಹೃದಯಸ್ಪರ್ಶಿ ವಿಡಿಯೋ ಕೆಲವೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಅನೀಶ್ ಅವರು ತಮ್ಮ ಮನೆಕೆಲಸಗಾರನನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಂಡಿದ್ದಕ್ಕಾಗಿ ನೆಟ್ಟಿಗರು ಶ್ಲಾಘಿಸಿದ್ದಾರೆ. ಆಗಾಗ ಮನೆಕೆಲಸಗಾರರನ್ನು ನಿರ್ಲಕ್ಷಿಸುವ ಮತ್ತು ಕೆಟ್ಟದಾಗಿ ನಡೆಸಿಕೊಳ್ಳುವವರಿಗೆ ಅನೀಶ್​ ನಡೆ ಮಾದರಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net