ಕನ್ನಡಿಗ ಕೆಎಲ್​ ರಾಹುಲ್​ಗೆ ಪುಣೆಯಲ್ಲಿ ಮತ್ತೆ ಚಾನ್ಸ್, ಕೋಚ್​ ಗಂಭೀರ್​ ಒಲವು; ಶತಕ ಸಿಡಿಸಿದರೂ ಸರ್ಫ್ರಾಜ್​ ಔಟ್​?

web rahul
Published on

ಪುಣೆ: ಕನ್ನಡಿಗ ಕೆಎಲ್​ ರಾಹುಲ್​ ತವರು ನೆಲ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ಎರಡೂ ಇನಿಂಗ್ಸ್​ಗಳಲ್ಲಿ ವೈಫಲ್ಯ ಕಂಡ ಬಳಿಕ ಕ್ರಿಕೆಟ್​ ಪ್ರೇಮಿಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಶುಭಮಾನ್​ ಗಿಲ್​ ಬದಲಿಗೆ ಸ್ಥಾನ ಪಡೆದಿದ್ದ ಸರ್ಫ್ರಾಜ್​​ ಖಾನ್​ ಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿ ಪುಣೆ ಟೆಸ್ಟ್​ಗೆ ಗಿಲ್​ ಫಿಟ್​ ಆಗಿ ಮರಳಿದರೆ ಸ್ರಾರ್ಜ್​ ಬದಲಿಗೆ ರಾಹುಲ್​ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ ಎನ್ನಲಾಗಿತ್ತು. ಆದರೆ ಮಂಗಳವಾರ ಪುಣೆಯಲ್ಲಿ ಭಾರತ ತಂಡದ ಮೊದಲ ಅಭ್ಯಾಸ ಅವಧಿಯ ನಡುವೆ ಸುದ್ದಿಗೋಷ್ಠಿಗೆ ಹಾಜರಾದ ಸಹಾಯಕ ಕೋಚ್​ ರ್ಯಾನ್​ ಟೆನ್​ ಡೋಶೆಟ್​ ಆ ಸಾಧ್ಯತೆಯನ್ನು ತಳ್ಳಿಹಾಕಿದ್ದು, ಕೆಎಲ್​ ರಾಹುಲ್​ ಪುಣೆ ಟೆಸ್ಟ್​ನಲ್ಲೂ ಸ್ಥಾನ ಉಳಿಸಿಕೊಳ್ಳುವ ಸೂಚನೆ ರವಾನಿಸಿದ್ದಾರೆ. 32 ವರ್ಷದ ರಾಹುಲ್​ ಬೆಂಗಳೂರಿನಲ್ಲಿ 0 ಮತ್ತು 12 ರನ್​ ಗಳಿಸಿದ್ದರು.

ಮುಖ್ಯ ಕೋಚ್​ ಗೌತಮ್​ ಗಂಭೀರ್​, ರಾಹುಲ್​ಗೆ ದೀರ್ ಅವಕಾಶವನ್ನು ಕಲ್ಪಿಸಲು ಬಯಸಿದ್ದಾರೆ. ಸಂಜು ಸ್ಯಾಮ್ಸನ್​ರಂತೆ ರಾಹುಲ್​ ಹೆಚ್ಚಿನ ಅವಕಾಶಗಳನ್ನು ಪಡೆಯಲಿದ್ದಾರೆ. ಸದ್ಯಕ್ಕೆ ರಾಹುಲ್​ ಫಾರ್ಮ್​ ಬಗ್ಗೆ ತಂಡದಲ್ಲಿ ಯಾವುದೇ ಕಳವಳವಿಲ್ಲ ಎಂದು ಡೋಶೆಟ್​ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಬೆಂಗಳೂರು ಟೆಸ್ಟ್​ನಲ್ಲಿ ಶತಕ ಸಿಡಿಸಿದ ನಡುವೆಯೂ ಸರ್ಫ್ರಾಜ್​​ ಖಾನ್​ ಪುಣೆ ಟೆಸ್ಟ್​ನಿಂದ ಹೊರಗುಳಿಯುವ ಸಾಧ್ಯತೆಗಳಿವೆ.

ತಂದೆಯಾದ ಸರ್ಫ್ರಾಜ್​​ ಖಾನ್​

ಬೆಂಗಳೂರು ಟೆಸ್ಟ್​ನಲ್ಲಿ ಚೊಚ್ಚಲ ಶತಕದ ಸಂಭ್ರಮ ಕಂಡ ಬೆನ್ನಲ್ಲೇ ಸರ್ಫ್ರಾಜ್​​ ಖಾನ್​ ತಂದೆಯಾಗಿ ಖುಷಿ ಹೆಚ್ಚಿಸಿಕೊಂಡಿದ್ದಾರೆ. ಸರ್ಫ್ರಾಜ್​​ ಪತ್ನಿ ರೋಮನಾ ಜಹೂರ್​ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದರು. ಸರ್ಫ್ರಾಜ್​-ರೋಮಾನ 2023ರ ಆಗಸ್ಟ್​ನಲ್ಲಿ ವಿವಾಹವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net