ಕಾಂಗ್ರೆಸ್‌ನ ಉರಿಯುವ ಬೆಂಕಿಗೆ ಈಶ್ವರಪ್ಪ ತುಪ್ಪ ಸುರಿದರೆ ?

KS Eshwarappa
Published on

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯಲಿ, ನಾವು ಏನು ಅಂತ ತೋರಿಸುತ್ತೇವೆ ಎಂದು ಮಾಜಿ ಸಚಿವ, ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ನಿಗೂಢವಾಗಿ ಹೇಳಿದ್ದಾರೆ. ಆ ಮೂಲಕ ಆಡಳಿತ ಕಾಂಗ್ರೆಸ್‌ನ ಉರಿಯುವ ಬೆಂಕಿಗೆ ತುಪ್ಪ ಸುರಿದರಾ ? ಎಂಬ ಪ್ರಶ್ನೆ ತಲೆ ಎತ್ತಿದೆ.

ಅಧಿಕಾರ ಹಂಚಿಕೆ, ಸಿಎಂ ಹುದ್ದೆ ವಿಚಾರವಾಗಿ ಆಡಳಿತ ಕಾಂಗ್ರೆಸ್‌ನೊಳಗೆ ಹಲವರು ಉರಿಯುವ ಬೆಂಕಿಯಂತಾಗಿದ್ದು, ಕೆಲವರು ಸಿಎಂ ಹುದ್ದೆಯ ಪೈಪೋಟಿಗೆ ಧುಮುಕಿದ್ದಾರೆ. ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ತಿದಿಯೊತ್ತಿದಂತಾಗಿದೆ. ಹೈಕಮಾಂಡ್ ಬಯಸಿದರೆ ನಾನೂ ಸಿಎಂ ಆಗುವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು, ಎಲ್ಲಿಗೋ ಹೋಗಿ ನಿಲ್ಲುತ್ತದೆ ಗೊತ್ತಿಲ್ಲ.

ಕಾಂಗ್ರೆಸ್‌ನೊಳಗಿನ ಈ ತಿಕ್ಕಾಟವನ್ನೇ ಮುಂದಿಟ್ಟುಕೊಂಡು ಕೆ.ಎಸ್.ಈಶ್ವರಪ್ಪ, ಅತೃಪ್ತ ಸಚಿವರು ಹಾಗೂ ಶಾಸಕರು ಸೇರಿಕೊಂಡು ಸರ್ಕಾರವನ್ನು ಪತನಗೊಳಿಸುತ್ತಾರೆ ಎಂದು ಭವಿಷ್ಯ ನುಡಿದು, ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆದಿದೆ. ಲೋಕಸಭೆ ಚುನಾವಣೆ ನಂತರ ಏನು ಮಾಡುತ್ತೇವೆ ಎಂದು ಹೇಳಿದರೆ ಹೊರತು ಹೆಚ್ಚಿನ ವಿವರ ಬಾಯ್ಬಿಡಲಿಲ್ಲ.

ದೆಹಲಿಯಿಂದ ವಾಪಸ್ಸಾದ ಅವರು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಅಂತಾರೆ, ಅದನ್ನು ಕೇಂದ್ರ ನಾಯಕರು ನಿರ್ಧರಿಸುವರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದು, ಎಲ್ಲವೂ ಸರಿಯಿಲ್ಲ ಎನ್ನುವುದು ಸಾಬೀತಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಬಂದು ಹೋದರು. ಎಲ್ಲ ಸರಿಪಡಿಸುವ ಬದಲು ಚುನಾವಣೆಗೆ ತೆಗೆದುಕೊಂಡು ಹೋಗಬೇಕಾದದ್ದನ್ನು ತೆಗೆದುಕೊಂಡು ಹೋಗಿದ್ದಾರೆ. ಅವರಿಬ್ಬರೂ ವಾಪಸ್ ಹೋದ ಮೇಲೆ ಕಾಂಗ್ರೆಸ್ ಅಂತಃಕಲಹ ಸ್ಪೋಟಿಸಿದೆ ಎಂದು ಕೆ.ಎಸ್.ಈಶ್ವರಪ್ಪ ತಿವಿದರು.

ಸಮ್ಮಿಶ್ರ ಸರ್ಕಾರವಿದ್ದಂತಿದೆ !

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ (ಜಾತಿ ಗಣತಿ)ಗೆ ಸಂಬಂಧಿಸಿದ ಎಚ್.ಕಾಂತರಾಜ್ ವರದಿ ವಿಷಯವಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಂತಿದೆ !. ಸಿಎಂ ಸಿದ್ದರಾಮಯ್ಯ ಅವರು ಈ ವರದಿ ಸ್ವೀಕರಿಸುತ್ತೇವೆ ಎಂದರೆ, ನಾವು ಒಪ್ಪುವುದಿಲ್ಲವೆಂಬ ನಿರ್ಣಯ ಅಂಗೀಕರಿಸಿದ ಸಭೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಕ್ಷಿಯಾಗುತ್ತಾರೆ.

ಕಾಂತರಾಜ್ ವರದಿ ಬಗ್ಗೆ ಸಿದ್ದರಾಮಯ್ಯಗೆ ಪ್ರಾಮಾಣಿಕ ಕಾಳಜಿಯಿದ್ದರೆ ಅವರ ಮೊದಲ ಅಧಿಕಾರಾವಧಿಯಲ್ಲೇ ಸ್ವೀಕರಿಸಬಹುದಿತ್ತು. ನಂತರ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿಯೂ ಈ ಕೆಲಸ ಮಾಡಬಹುದಿತ್ತು ಎಂದು ಈಶ್ವರಪ್ಪ ಕುಟುಕಿದರು.

ಪಕ್ಷದ ರಾಷ್ಟ್ರೀಯ ನಾಯಕರ ಆಹ್ವಾನದ ಮೇರೆಗೆ ದೆಹಲಿಗೆ ಹೋಗಿ ಒಬಿಸಿ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿ ಬಂದಿರುವೆ. ಕೆಲವು ಸಮುದಾಯಗಳ ಒಬಿಸಿ ಮೀಸಲು, ಮತ್ತೆ ಹಲವೆಡೆ ಜಾತಿ ಗಣತಿ ಬೇಡಿಕೆಗಳಿವೆ. ತಜ್ಞರ ಅಧ್ಯಯನ ವರದಿ ಹಾಗೂ ಸುಪ್ರೀಂ ಕೋರ್ಟ್ ಏನು ಹೇಳುತ್ತದೆ ನೋಡಿಕೊಂಡು ಮುಂದಿನ ಹೆಜ್ಜೆಯಿಡಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net