

ನವದೆಹಲಿ: ಕರೊನಾ ಲಸಿಕೆ ಸಂಶೋಧನೆಯಲ್ಲಿ ಇನ್ನಿಲ್ಲದ ಪೈಪೋಟಿ ನಡೆಯುತ್ತಿದ್ದು, ಅಂತಿಮ ಹಂತದ ಪರೀಕ್ಷೆ ನಡೆಸುತ್ತಿರುವ ಕಂಪನಿಗಳು ಮತ್ತಷ್ಟು ವೇಗದಲ್ಲಿ ಪ್ರಯೋಗಗಳನ್ನು ಪೂರ್ಣಗೊಳಿಸುವ ಒತ್ತಡಕ್ಕೆ ಒಳಗಾಗಿವೆ.
ಈ ನಡುವೆ, ಹಲವು ಕಂಪನಿಗಳು ಆರಂಭಿಕ ಹಂತದಲ್ಲಿ ಯಶಸ್ಸು ಗಳಿಸಿ ತುರ್ತು ಬಳಕೆಗೆ ಔಷಧ ಉತ್ಪಾದನೆ ಆರಂಭಿಸಿವೆ. ಜಗತ್ತಿನ ಹಲವು ಕಂಪನಿಗಳು ಇದಕ್ಕೆ ಹೊರತೇನಲ್ಲ.
ಅದರಂತೆ, ಆಕ್ಸ್ಫರ್ಡ್ ವಿವಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಕೋವಿಶೀಲ್ಡ್ ಎಂದು ಹೆಸರಿಟ್ಟಿದೆ. ಸದ್ಯ ಈ ಲಸಿಕೆಯ ಮೂರನೇ ಹಂತದ ಹಾಗೂ ಅಂತಿಮ ಕ್ಲಿನಿಕಲ್ ಟ್ರಯಲ್ ಜಗತ್ತಿನ ವಿವಿಧೆಢೆ ನಡೆಯುತ್ತಿದೆ. ಅಂತೆಯೇ, ಇದೇ ಲಸಿಕೆಯ 2ನೇ ಹಾಗೂ 3ನೇ ಹಂತದ ಪರೀಕ್ಷೆ ಭಾರತದಲ್ಲೂ ನಡೆಯಬೇಕಿದೆ.
ಆದರೆ, ಈ ಲಸಿಕೆ 73 ದಿನಗಳಲ್ಲಿ ವಾಣಿಜ್ಯ ಬಳಕೆಗಾಗಿ ಮಾರುಕಟ್ಟೆಗೆ ಬಲಿದೆ ಎಂದು ಹೇಳಲಾಗುತ್ತಿದೆ. ಈ ಲಸಿಕೆಯ ಉತ್ಪಾದನೆ ಕಾರ್ಯ ಆರಂಭವಾಗಿರುವುದರಿಂದ ಇಂಥದ್ದೊಂದು ಸುದ್ದಿ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ, ವಾಸ್ತವವೇ ಬೇರೆ.
ಸದ್ಯ ಸರ್ಕಾರ ಉತ್ಪಾದನೆಗೆ ಅನುಮತಿ ನೀಡಿರುವುದು ಕೇವಲ ದಾಸ್ತಾನು ಮಾಡಿಕೊಳ್ಳಲು ಮಾತ್ರ. ಎಲ್ಲ ಹಂತದ ಪರೀಕ್ಷೆಗಳು ಮುಗಿದು ಫಲಿತಾಂಶ ಬಂದ ಬಳಿಕವಷ್ಟೇ ಇದು ಮಾರುಕಟ್ಟೆಯಲ್ಲಿ ಅಥವಾ ವಾಣಿಜ್ಯ ಬಳಕೆಗೆ ಮುಕ್ತವಾಗಲಿದೆ ಎಂದು ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಆದಾರ್ ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ.