

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಆರಂಭವಾಗಿ 10ಕ್ಕೂ ಅಧಿಕ ವಾರಗಳು ಕಳೆದಿದ್ದು, ವಾರ ಕಳೆದಂತೆ ಶೋ ರೋಚಕತೆ ಸೃಷ್ಟಿಸುವಲ್ಲಿ ಮಾತ್ರ ವಿಫಲವಾಗಿಲ್ಲ. ಶನಿವಾರದ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ, ಹನುಮಂತ ಹಾಗೂ ತ್ರಿವಿಕ್ರಮ್ಗೆ ನಿರೂಪಕ ಕಿಚ್ಚ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಭಾನುವಾರದ ಸಂಚಿಕೆಯಲ್ಲಿ ಮಾತ್ರ ನಾಮಿನೇಷನ್ಗೆ ಸಂಬಂಧಿಸಿದ ಪ್ರಕ್ರಿಯೆ ನಡೆಯಲಿದ್ದು, ಮನೆಮಂದಿಯಲ್ಲಾ ಚೈತ್ರಾ ಕುಂದಾಪುರ ಅವರನ್ನು ಕಸಕ್ಕೆ ಹೋಲಿಸಿ ಮಾತನಾಡಿದ್ದಾರೆ.
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ ಪ್ರೋಮೋ ನೋಡುವುದಾದರೆ ಬಿಗ್ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ. ಬಿಗ್ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರನ್ನು ಆ ಬುಟ್ಟಿಗೆ ಹಾಕಬೇಕು ಎಂದು ನಿರೂಪಕ ಕಿಚ್ಚ ಸುದೀಪ್ ಹೇಳುತ್ತಾರೆ. ಈ ವೇಳೆ ಹನುಮಂತು, ಮೋಕ್ಷಿತಾ, ರಜತ್ ಹಾಗೂ ಐಶ್ವರ್ಯಾ ಚೈತ್ರ ಅವರ ಹೆಸರನ್ನು ಕಸದ ಬ್ಯಾಗಿಗೆ ಅಂಟಿಸಿ ಕಾರಣವನ್ನು ಉಲ್ಲೇಖಿಸಿ ಅದನ್ನು ಡಸ್ಟ್ಬಿನ್ಗೆ ಹಾಕಿದ್ದಾರೆ. ಸಹ ಆಟಗಾರರ ಕಾರಣವನ್ನು ಚೈತ್ರಾ ಆಘಾತಕ್ಕೊಳಗಾಗಿದ್ದು, ಸದ್ಯ ಈ ಪ್ರೋಮೋ ವೈರಲ್ ಆಗಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.