

ಬೆಂಗಳೂರು: ಬೆಂಗಳೂರು ಗ್ರಾಮಾಂತರ ನೆಲಮಂಗಲದ ಟಿ ಬೇಗೂರಿನ ಬಳಿ ಶನಿವಾರ (ಡಿಸೆಂಬರ್ 21) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ.
ಮೃತರನ್ನು ಚಂದ್ರ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಮೃತಪಟ್ಟಿದ್ದಾರೆ. ಐಷಾರಾಮಿ ಕಾರಿನ ಮೇಲೆ ಲಾರಿ ಉರುಳಿದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಲಾರಿ ಚಾಲಕ ಆರೀಫ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಚಾಲಕ ಆರೀಫ್ ಮಾತನಾಡಿದ್ದಾರೆ. ಡಾಬಸ್ಪೇಟೆಯಿಂದ ಬೆಂಗಳೂರಿನ ಕಡೆಗೆ ನಾನು ಬರುತ್ತಿದ್ದೆ. ಈ ವೇಳೆ ಎದುರುಗಡೆಯಿಂದ ಕಾರು ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ತಪ್ಪಿಸಲು ಹೋಗಿ ನನ್ನ ಕಂಟೇನರ್ ಲಾರಿ ನಿಯಂತ್ರಣ ತಪ್ಪಿತು. ಡಿವೈಡರ್ ಹಾರಿ ಮತ್ತೊಂದು ರಸ್ತೆಗೆ ನುಗ್ಗಿ ಲಾರಿಗೆ ಡಿಕ್ಕಿ ಆಯಿತು, ಆಗ ಕಾರಿನ ಮೇಲೆ ಪಲ್ಟಿಯಾಗಿದೆ. ಬಳಿಕ ನನಗೆ ಏನಾಯಿತು ಗೊತ್ತಿಲ್ಲ. ಎಚ್ಚರಗೊಂಡ ಬಳಿಕ ವಿಚಾರ ತಿಳಿದು ತುಂಬಾ ಬೇಜಾರಾಯಿತು ಎಂದು ಲಾರಿ ಚಾಲಕ ಆರೀಫ್ ಬೇಸರ ವ್ಯಕ್ತಪಡಿಸಿದ್ದಾರೆ.