ರಷ್ಯಾ-ಯೂಕ್ರೇನ್ ಶಾಂತಿ ಯತ್ನಕ್ಕೆ ಅಮೆರಿಕ ಗುಡ್​ಬೈ?

Donald Trump
Published on

ಶಾಂತಿ ಒಡಂಬಡಿಕೆ ಬಗ್ಗೆ ಸ್ಪಷ್ಟ ಸೂಚನೆಗಳು ಇಲ್ಲ ಟ್ರಂಪ್ ಆಡಳಿತ ಅಸಮಾಧಾನ

ಪ್ಯಾರಿಸ್: ರಷ್ಯಾ ಮತ್ತು ಯೂಕ್ರೇನ್ ನಡುವಣ ಯುದ್ಧವನ್ನು ಕೊನೆಗೊಳಿಸಿ ಶಾಂತಿ ಒಪ್ಪಂದ ಏರ್ಪಡಿಸುವ ತನ್ನ ಪ್ರಯತ್ನಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೀಘ್ರವೇ ಕೈ ಬಿಡಲಿದ್ದಾರೆ. ಶಾಂತಿ ಒಡಂಬಡಿಕೆ ಬಗ್ಗೆ ಸ್ಪಷ್ಟ ಸೂಚನೆಗಳು ಇಲ್ಲದಿದ್ದರೆ ಟ್ರಂಪ್ ತಮ್ಮ ಮಧ್ಯಸ್ಥಿಕೆಯಿಂದ ಹಿಂದೆ ಸರಿಯಲಿದ್ದಾರೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾಕೋ ರೂಬಿಯೋ ಶುಕ್ರವಾರ ಎಚ್ಚರಿಸಿದ್ದಾರೆ.

‘ನಾವು ವಾರಗಟ್ಟಲೆ, ತಿಂಗಳುಗಟ್ಟಲೆ ನಮ್ಮ ಪ್ರಯತ್ನಗಳನ್ನು ಮುಂದುವರಿಸಲು ಸಾಧ್ಯವಿಲ್ಲ. ಬೇಗನೇ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದು ಪ್ಯಾರಿಸ್​ನಲ್ಲಿ ಐರೋಪ್ಯ ಮತ್ತು ಯೂಕ್ರೇನ್ ನಾಯಕರ ಭೇಟಿಯ ನಂತರ ರೂಬಿಯೋ ಹೇಳಿದರು. ಈ ವಿಚಾರದಲ್ಲಿ ಅಧ್ಯಕ್ಷ ಟ್ರಂಪ್​ರ ನಿಲುವು ದೃಢವಾಗಿದೆ. ಅವರು ಈ ವಿಷಯದಲ್ಲಿ ಸಾಕಷ್ಟು ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸಿದ್ದಾರೆ. ಇದು ಮುಖ್ಯವೇ. ಆದರೆ, ಗಮನ ಹರಿಸಬೇಕಾದ ಇನ್ನೂ ಹಲವು ವಿಚಾರಗಳಿವೆ ಎಂದಿದ್ದಾರೆ. ಯೂಕ್ರೇನ್ ಜತೆಗಿನ ಅಮೆರಿಕ ಮಾತುಕತೆಯಲ್ಲಿ ಸ್ವಲ್ಪ ಪ್ರಗತಿಯಾಗಿರುವುದರ ನಡುವೆಯೇ ರೂಬಿಯೋ ಶಾಂತಿ ಸಂಧಾನ ಕೈಬಿಡುವ ಎಚ್ಚರಿಕೆ ನೀಡಿದ್ದಾರೆ. 2022ರ ಫೆಬ್ರವರಿ 24ರಂದು ಆರಂಭವಾದ ಕದನ ಇನ್ನೂ ಮುಂದುವರಿದಿದೆ.

ಯೂಕ್ರೇನ್ ಖನಿಜ ಒಪ್ಪಂದ

ಯೂಕ್ರೇನ್​ನ ಖನಿಜಗಳನ್ನು ಪಡೆಯಲು ಅಮೆರಿಕಕ್ಕೆ ಅನುಕೂಲವಾಗುವ ಒಪ್ಪಂದವೊಂದಕ್ಕೆ ಮುಂದಿನ ವಾರ ಸಹಿ ಹಾಕುವ ನಿರೀಕ್ಷೆಯಿದೆ ಎಂಬುದಾಗಿ ಟ್ರಂಪ್ ಗುರುವಾರ ಹೇಳಿದ್ದರು. ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರೊಂದಿಗೆ ಓವಲ್ ಕಚೇರಿಯಲ್ಲಿ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸಿ್ಕ ಜಗಳವಾಡಿದ ಕಾರಣ ಫೆಬ್ರವರಿಯಲ್ಲೇ ಈ ಒಪ್ಪಂದಕ್ಕೆ ಸಹಿ ಹಾಕುವ ಯತ್ನ ಮುರಿದು ಬಿದ್ದಿತ್ತು.

ಪ್ರಧಾನಿ ಮೋದಿ-ಎಲಾನ್ ಮಸ್ಕ್ ಮಾತುಕತೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ದಿಗ್ಗಜ ಉದ್ಯಮಿ ಎಲಾನ್ ಮಸ್ಕ್ ನಡುವೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆದಿದ್ದು, ತಂತ್ರಜ್ಞಾನ ಹಾಗೂ ಆವಿಷ್ಕಾರ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ಪಾಲುದಾರಿಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ವರ್ಷಾರಂಭದಲ್ಲಿ ವಾಷಿಂಗ್ಟನ್​ನಲ್ಲಿ ಭೇಟಿ ಆಗಿದ್ದಾಗ ಇವರಿಬ್ಬರು ರ್ಚಚಿಸಿದ್ದು, ಇದೀಗ ಇನ್ನೊಂದು ಸುತ್ತಿನ ಮಾತುಕತೆ ನಡೆದಿದೆ. ಎಲಾನ್ ಮಸ್ಕ್ ಅವರ ಟೆಸ್ಲಾ ಹಾಗೂ ಸ್ಟಾರ್​ಲಿಂಕ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವ ಕುರಿತಾಗಿಯೂ ಈ ವೇಳೆ ಚರ್ಚೆ ನಡೆದಿದೆ ಎಂಬುದು ತಿಳಿದುಬಂದಿದೆ.

ವರ್ಷಾರಂಭದಲ್ಲಿ ನಾವು ಭೇಟಿ ಆಗಿದ್ದಾಗ ಮಾತನಾಡಿದ ವಿಷಯಗಳೂ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಎಲಾನ್ ಮಸ್ಕ್ ಜತೆ ಮಾತುಕತೆ ನಡೆಸಿದ್ದಾಗಿ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಭಾರತ-ಅಮೆರಿಕ ನಡುವಿನ ಸಹಯೋಗಕ್ಕೆ ಅಪಾರ ಸಾಧ್ಯತೆಗಳಿದ್ದು, ಆ ಕುರಿತು ಮುಂದುವರಿದ ಪಾಲುದಾರಿಕೆಗೆ ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಸುಂಕ ಸಮರದ ಹಿನ್ನೆಲೆಯಲ್ಲಿ ಅಮೆರಿಕ-ಚೀನಾ ಸಂಘರ್ಷ ಉಲ್ಬಣಿಸಿರುವ ಮಧ್ಯೆಯೇ ಮೋದಿ-ಮಸ್ಕ್ ದೂರವಾಣಿ ಮೂಲಕ ಈ ಮಾತುಕತೆ ನಡೆಸಿರುವುದು ಗಮನ ಸೆಳೆದಿದೆ. ಕಳೆದ ಫೆಬ್ರವರಿಯಲ್ಲಿ ಟೆಸ್ಲಾ ಭಾರತದಲ್ಲಿ ಒಟ್ಟು 13 ಹುದ್ದೆಗಳಿಗೆ ಲಿಂಕ್ಡ್​ಇನ್​ನಲ್ಲಿ ನೇಮಕಾತಿ ಘೋಷಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net