

ಪಂಜಾಬ್: ಇತ್ತೀಚೆಗಷ್ಟೇ ರೈಲಿನ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ಪುಂಡಾಟ ಮೆರೆದಿದ್ದ ಕಿಡಿಗೇಡಿಗಳು, ಸಿಲಿಂಡರ್ ಮೇಲೆ ರೈಲು ಹತ್ತಿದರೆ ಏನಾಗುತ್ತದೆ ಎಂಬುದನ್ನು ನೋಡಲು ಕಾದು ಕುಳಿತ್ತಿದ್ದರು. ಈ ವೇಳೆ ಲೋಕೋಪೈಲೆಟ್ ಅವರ ಸಮಯಪ್ರಜ್ಞೆಯಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಾವಿರಾರೂ ಪ್ರಯಾಣಿಕರ ಜೀವ ಉಳಿಯಿತು. ಇದೀಗ ಇಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ರೈಲು ಹಳಿ ಮೇಲೆ ಕಬ್ಬಿಣದ ರಾಡು ಇಟ್ಟು ಹುಚ್ಚಾಟ ಪ್ರದರ್ಶಿಸಿದ ದುಷ್ಕರ್ಮಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್‌ನ ಬಟಿಂಡಾದಲ್ಲಿ ರೈಲ್ವೆ ಹಳಿಯಲ್ಲಿ ಕಬ್ಬಿಣದ ರಾಡ್‌ಗಳು ಪತ್ತೆಯಾಗಿದ್ದು, ಇಲ್ಲಿಯೂ ಕೂಡ ಲೋಕೋಪೈಲೆಟ್ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ), ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ ರಾಡ್‌ಗಳು ಕಾಣಿಸಿಕೊಂಡ ಬೆನ್ನಲ್ಲೇ ಹಳಿ ಮೇಲಿದ್ದ 9ಕ್ಕೂ ಹೆಚ್ಚು ರಾಡ್‌ಗಳನ್ನು ಪೊಲೀಸರು ಸ್ಥಳದಿಂದ ತೆರವುಗೊಳಿಸಿದ್ದಾರೆ.
ಇಲ್ಲಿಯವರೆಗೆ 9 ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ರೈಲು ಹಳಿತಪ್ಪಿಸಲು ಕಿಡಿಗೇಡಿಗಳು ಯತ್ನಿಸಿದ ಐದನೇ ಘಟನೆ ಇದಾಗಿರುವುದು ಸದ್ಯ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಪುಂಡರ ಹುಚ್ಚಾಟಕ್ಕೆ ಕೊನೆಯ ಇಲ್ಲವೇ? ಎಂಬ ಪ್ರಶ್ನೆ ಇದೀಗ ಅನೇಕರಲ್ಲಿ ಬೆಂಬಿಡದೆ ಕಾಡತೊಡಗಿದೆ,(ಏಜೆನ್ಸೀಸ್).