

ಟೆಲ್ ಅವೀವ್: ಐರನ್ ಡೋಮ್ ವಾಯುರಕ್ಷಣಾ ವ್ಯವಸ್ಥೆಗೆ ಹೆಸರಾಗಿರುವ ಇಸ್ರೇಲ್ ಈಗ ‘ಐರನ್ ಬೀಮ್ ಹೆಸರಿನ ಹೊಸ ಉನ್ನತ-ಶಕ್ತಿಯ ಲೇಸರ್ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಐರನ್ ಡೋಮ್ ಸಾಂಪ್ರದಾಯಿಕ ಕ್ಷಿಪಣಿಗಳನ್ನು ಬಳಸಿಕೊಂಡು ಆಕಾಶದಿಂದ ಬರುವ ಬೆದರಿಕೆಗಳನ್ನು ತಟಸ್ಥಗೊಳಿಸುತ್ತದೆ. ಇದರ ವೆಚ್ಚವೂ ದುಬಾರಿಯಾಗಿದೆ. ಆದರೆ, ಐರನ್ ಬೀಮ್ ಕಡಿಮೆ ವೆಚ್ಚದಲ್ಲಿ ಲೇಸರ್ ಕಿರಣಗಳನ್ನು ಬಳಸಿಕೊಂಡು ರಾಕೆಟ್ಗಳು, ಡ್ರೋನ್ಗಳು ಮತ್ತು ಮೋರ್ಟಾರ್ ಶೆಲ್ಗಳನ್ನು ಆಕಾಶದಲ್ಲೇ ನಾಶಪಡಿಸುತ್ತದೆ.
ಈ ಸುಧಾರಿತ ತಂತ್ರಜ್ಞಾನವನ್ನು ಇಸ್ರೇಲ್ನ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ (ಡಿಡಿಆರ್ಡಿ), ಇಸ್ರೇಲ್ ವಾಯುಪಡೆ, ರಾಫೆಲ್ ಆಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಎಲ್ಬಿಟ್ ಸಿಸ್ಟಮ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ರಾಫೆಲ್ನಿಂದ ಇತ್ತೀಚೆಗೆ ಬಿಡುಗಡೆಯಾದ ಈ ವ್ಯವಸ್ಥೆಯ ಪ್ರಮುಖ ಶಕ್ತಿಯೆಂದರೆ ಅದರ ವೆಚ್ಚ ಮತ್ತು ಪರಿಣಾಮಕಾರಿತ್ವ. ಒಂದು ಲೇಸರ್ ಶಾಟ್ಗೆ ಕೇವಲ 2 ಡಾಲರ್ ಮೊತ್ತದ ವಿದ್ಯುತ್ ವೆಚ್ಚವಾಗುತ್ತದೆ. ಆದರೆ ಸಾಂಪ್ರದಾಯಿಕ ಕ್ಷಿಪಣಿ ವ್ಯವಸ್ಥೆಯಲ್ಲಿ ಒಂದು ಕ್ಷಿಪಣಿಗೆ 60,000 ಡಾಲರ್ ವೆಚ್ಚವಾಗುತ್ತದೆ. ಐರನ್ ಬೀಮ್ ಇಸ್ರೇಲ್ನ ಈಗಿನ ರಕ್ಷಣಾ ವ್ಯವಸ್ಥೆಗಳಾದ ಐರನ್ ಡೋಮ್ ಡೇವಿಡ್ ಸ್ಲಿಂಗ್ ಮತ್ತು ಆರೋ ಸಿಸ್ಟಮ್ಳೊಂದಿಗೆ ಸಂಯೋಜನೆಗೊಂಡು ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.
ಐರನ್ ಬೀಮ್ ಎಂದರೇನು?: ಐರನ್ ಬೀಮ್ 100 ಕಿಲೋವಾಟ್ನ ಉನ್ನತ-ಶಕ್ತಿಯ ಲೇಸರ್ ಆಯುಧ ವ್ಯವಸ್ಥೆ ಆಗಿದ್ದು, ಇದು ವಿವಿಧ ಬೆದರಿಕೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ. ಬೆಳಕಿನ ವೇಗದಲ್ಲಿ ಕಾರ್ಯನಿರ್ವಹಿಸುವ ಈ ವ್ಯವಸ್ಥೆ ಅನಿಯಮಿತ ಮ್ಯಾಗಜೀನ್, ತೀರಾ ಕಡಿಮೆ ವೆಚ್ಚ ಮತ್ತು ಕನಿಷ್ಠ ಕೊಲ್ಯಾಟರಲ್ ಹಾನಿಯನ್ನು ಒಳಗೊಂಡಿರುತ್ತದೆ. ಈ ವ್ಯವಸ್ಥೆಯು ಬಹುಮುಖವಾಗಿದೆ. ವಿವಿಧ ವೇದಿಕೆಗಳಿಗೆ ಇದನ್ನು ಸಂಯೋಜಿಸಬಹು. ಬಹುಪದರದ ರಕ್ಷಣಾ ಜಾಲದಲ್ಲಿ ಇದು ಮಹತ್ವದ್ದಾಗಿದೆ. ಇದು ರಾಕೆಟ್ಗಳು, ಡ್ರೋನ್ಗಳು, ಮೋರ್ಟಾರ್ ಶೆಲ್ ಮತ್ತು ಇತರ ಬೆದರಿಕೆಗಳನ್ನು ತಕ್ಷಣವೇ ಗುರಿಯಾಗಿಸಿ ನಾಶಪಡಿಸುತ್ತದೆ.
2023ರ ಆಗಸ್ಟ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಸಾವಿರಾರು ಕ್ಷಿಪಣಿಗಳನ್ನೂ ಉಡಾವಣೆ ಮಾಡಿದ್ದರು. ಇವುಗಳಲ್ಲಿ ಅನೇಕ ರಾಕೆಟ್ಗಳು ಇಸ್ರೇಲ್ನ ಪ್ರಮುಖ ಪ್ರದೇಶಗಳಿಗೆ ಅಪ್ಪಳಿಸಿದ್ದವು. ಉಗ್ರರು ಪ್ಯಾರಾಶೂಟ್ ಮೂಲಕ ಇಸ್ರೇಲ್ ವಾಯುಪ್ರದೇಶದೊಳಗೆ ಪ್ರವೇಶ ಮಾಡಿದ್ದರು. ಈ ಘಟನೆ ನಂತರ ಇಸ್ರೇಲ್ನ ಐರನ್ ಡೋಮ್ ರಕ್ಷಣಾ ವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆಗಳು ಮೂಡಿದ್ದವು. ವಿಶ್ವದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಹೊಂದಿದ್ದರೂ ಇಸ್ರೇಲ್ ಪಡೆ ಹಮಾಸ್ ದಾಳಿಯನ್ನು ತಡೆಯುವಲ್ಲಿ ಏಕೆ ವಿಫಲವಾಯಿತು ಎಂಬ ಚರ್ಚೆಗಳು ನಡೆದಿದ್ದವು. ಇಂಥಹ ದಾಳಿ ಮರುಕಳಿಸದಂತೆ ತಡೆಯಲು ಈಗ ಅತ್ಯಾಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.