

ಟೆಹ್ರಾನ್: ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯ ನಂತರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೊದಲ ಬಾರಿಗೆ ಸಾರ್ವಜನಿಕ ಸಭೆ ನಡೆಸಿದರು. ಶುಕ್ರವಾರ(ಅ.4)ದ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಖಮೇನಿ ವಿಶ್ವದ ಮುಸ್ಲಿಮರು ಒಂದಾಗುವಂತೆ ಮನವಿ ಮಾಡಿದರು. ಶತ್ರುಗಳ ಯೋಜನೆಗಳನ್ನು ಸೋಲಿಸಲಾಗುವುದು ಎಂದು ಇಸ್ರೇಲ್ ವಿರುದ್ಧ ಗುಡುಗಿದರು. Israel- Iran
ಇದನ್ನೂ ಓದಿ: Tirupati Laddu Row: ಮತ್ತೊಂದು ಡೈರಿಗೆ ನೋಟಿಸ್!
ಮುಸ್ಲಿಂ ರಾಷ್ಟ್ರಗಳು ಅಫ್ಘಾನಿಸ್ತಾನದಿಂದ ಯೆಮೆನ್‌ವರೆಗೆ, ಇರಾನ್‌ನಿಂದ ಗಾಜಾ ಮತ್ತು ಲೆಬನಾನ್‌ವರೆಗೆ ತಮ್ಮ ರಕ್ಷಣೆಗೆ ಸಜ್ಜಾಗಬೇಕಾಗುತ್ತದೆ ಎಂದು ಖಮೇನಿ ಹೇಳಿದರು. ಇರಾನ್ ಹಿಜ್ಬುಲ್ಲಾ ಜೊತೆಗಿದೆ. ಇಸ್ರೇಲ್‌ಗೆ ಇರಾನ್ ತಕ್ಕ ಉತ್ತರ ನೀಡಿದೆ. ಇಸ್ರೇಲ್ ದಾಳಿ ವೇಳೆ ಇರಾನ್ ಕೂಡ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಇಸ್ರೇಲ್‌ಗೆ ಪ್ರತಿಕ್ರಿಯಿಸಲು ನಾವು ವಿಳಂಬ ಮಾಡುವುದಿಲ್ಲ ಅಥವಾ ಆತುರಪಡುವುದಿಲ್ಲ. ಪ್ರತಿಯೊಂದು ದೇಶಕ್ಕೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಅಮಾಯಕ ನಾಗರಿಕರನ್ನು ಕೊಂದು ಇಸ್ರೇಲ್ ಗೆದ್ದಂತೆ ನಟಿಸುತ್ತಿದೆ. ಕಳೆದ ವರ್ಷ ಅ.7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಸರಿಯಾಗಿದೆ ಎಂದು ಖಮೇನಿ ಸಮರ್ಥಿಸಿಕೊಂಡರು.
ನಾವು ದುಃಖಿತರಾಗಿದ್ದೇವೆ ಆದರೆ ಸೋಲಲಿಲ್ಲ. ಅರಬ್ ಮುಸ್ಲಿಮರು ನಮ್ಮನ್ನು ಬೆಂಬಲಿಸಬೇಕಿದೆ. ಎಲ್ಲ ಮುಸ್ಲಿಂರು ಸಹೋದರತೆಯಿಂದ ಒಗ್ಗಟ್ಟಾಗಿ ಸಾಗುವುದು ಒಳ್ಳೆಯದು. ನಾವು ಇಸ್ರೇಲಿ ಆಕ್ರಮಣವನ್ನು ವಿರೋಧಿಸುತ್ತಿದ್ದೇವೆ. ಅದನ್ನು ಮುಂದುವರಿಸುತ್ತೇವೆ. ಇಸ್ರೇಲ್ ವಿರುದ್ಧ ಸಶಸ್ತ್ರ ಪಡೆಗಳ ಕ್ರಮ ಸಮರ್ಥನೀಯ ಮತ್ತು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಅಗತ್ಯ ಬಿದ್ದರೆ ಮತ್ತೆ ಇಸ್ರೇಲ್ ಮೇಲೆ ದಾಳಿ ನಡೆಸುವುದಾಗಿ ಹೇಳಿದ್ದಾರೆ.