

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಹೊಸ ಮಾತುಕತೆಯ ಪ್ರಸ್ತಾಪವನ್ನು ಸೋಮವಾರ (ಅಕ್ಟೋಬರ್, 20) ತಿರಸ್ಕರಿಸಿದ್ದಾರೆ. ಅಲ್ಲದೆ, ಅಮೆರಿಕವು ನಮ್ಮ ಪರಮಾಣು ಸಾಮರ್ಥ್ಯಗಳನ್ನು ನಾಶಪಡಿಸಿದೆ ಎಂಬ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಖಮೇನಿ, ಟ್ರಂಪ್ ತಾವು ಡೀಲ್‌ಮೇಕರ್ ಎಂದು ಹೇಳುತ್ತಾರೆ. ಆದರೆ ಒಂದು ಒಪ್ಪಂದವು ಬಲವಂತದಿಂದ ಕೂಡಿದ್ದರೆ ಮತ್ತು ಅದರ ಫಲಿತಾಂಶವು ಪೂರ್ವನಿರ್ಧರಿತವಾಗಿದ್ದರೆ, ಅದು ಒಪ್ಪಂದವಲ್ಲ, ಬದಲಿಗೆ ಹೇರಿಕೆ ಮತ್ತು ಬೆದರಿಸುವಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಇರಾನ್ ಪರಮಾಣು ಕೇಂದ್ರಗಳ ಬಗ್ಗೆ ಕಳೆದ ವಾರ ಇಸ್ರೇಲಿ ಸಂಸತ್ತಿನಲ್ಲಿ ಮಾತನಾಡಿದ್ದ ಟ್ರಂಪ್, ಇಸ್ರೇಲ್ ಮತ್ತು ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಹಮಾಸ್ ನಡುವೆ ಗಾಜಾದಲ್ಲಿ ಕದನ ವಿರಾಮ ಪ್ರಾರಂಭವಾದ ನಂತರ, ಅಮೆರಿಕವು ಟೆಹ್ರಾನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾದರೆ ಉತ್ತಮವಾಗಿರುತ್ತದೆ ಎಂದು ಹೇಳಿದ್ದರು.
ಅಮೆರಿಕದ ಅಧ್ಯಕ್ಷ ಟ್ರಂಪ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇರಾನ್‌ನ ಪರಮಾಣು ಉದ್ಯಮದ ಮೇಲೆ ಬಾಂಬ್ ದಾಳಿ ಮಾಡಿ ನಾಶಪಡಿಸಿದರು. ಸರಿ, ಕನಸು ಕಾಣುತ್ತಲೇ ಇರಿ ಎಂದು ಖಮೇನಿ ತಿಳಿಸಿದ್ದಾರೆ. ಇರಾನ್ ಪರಮಾಣು ಸೌಲಭ್ಯಗಳನ್ನು ಹೊಂದಿದ್ದರೂ ಅಥವಾ ಇಲ್ಲದಿದ್ದರೂ ಅಮೆರಿಕಕ್ಕೂ ಇದಕ್ಕೂ ಏನು ಸಂಬಂಧವಿಲ್ಲ. ಈ ಹಸ್ತಕ್ಷೇಪಗಳು ತಪ್ಪು ಮತ್ತು ಬಲವಂತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯುರೇನಿಯಂ ಮೂಲಕ ಇರಾನ್ ರಹಸ್ಯವಾಗಿ ಪರಮಾಣು ಬಾಂಬ್ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಪಾಶ್ಚಿಮಾತ್ಯ ಶಕ್ತಿಗಳು ಆರೋಪಿಸುತ್ತವೆ. ಅಲ್ಲದೆ, ಇಂತಹ ಚಟುವಟಿಕೆಯನ್ನು ನಿಲ್ಲಿಸಬೇಕೆಂದು ಬಯಸುತ್ತವೆ. ಅದರೆ, ಈ ಆರೋಪವನ್ನು ಇರಾನ್ ನಿರಾಕರಿಸುತ್ತದೆ. ಈ ಕಾರ್ಯಕ್ರಮವು ಕೇವಲ ನಾಗರಿಕ ಇಂಧನ ಉದ್ದೇಶಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)