ಅಮೆರಿಕ ಸೇನಾ ದಾಳಿಗೆ ಇರಾನ್​ ಸೇನಾ ನಾಯಕನ ಹತ್ಯೆ: ಪ್ರತೀಕಾರದ ಎಚ್ಚರಿಕೆ ನೀಡಿದ ಇರಾನ್​ ನಾಯಕ

Iarn 3 jan 20
Published on

ತೆಹ್ರಾನ್​: ಬಾಗ್ದಾದ್​ ಏರ್​ಪೋರ್ಟ್​ನಲ್ಲಿ ಶುಕ್ರವಾರ ಅಮೆರಿಕ ಸೇನಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ನ ಪ್ರಮುಖ ಕ್ಯೂಡ್ಸ್​ ಪೋರ್ಸ್​ನ ಮುಖ್ಯಸ್ಥ ಜನರಲ್​ ಕಸ್ಸೆಮ್​ ಸೊಲೈಮಾನಿ ಹತ್ಯೆಯಾದ ಬೆನ್ನಲ್ಲೇ ಇರಾನ್​ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕಗೆ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.

ಕಸ್ಸೆಮ್​ ಸೊಲೈಮಾನಿ ಹತ್ಯೆ ಕುರಿತು ಟ್ವೀಟ್​ ಮಾಡಿರುವ ಅಯತೊಲ್ಲಾ ಅಲಿ ಖಮೇನಿ, ಹುತಾತ್ಮರಾಗಿರುವ ಸೊಲೈಮಾನಿಯವರ ಬಹುಕಾಲದ ಸೇವೆಗೆ ಸೂಕ್ತ ಪ್ರತಿಫಲ ದೊರೆಯಲಿದೆ ಎಂದು ಸಂತಾಪ ಸೂಚಿಸಿ, ದೇಶದಲ್ಲಿ ಮೂರು ದಿನಗಳ ಶೋಕಾಚರಣೆಗೆ ಕರೆ ನೀಡಿದ್ದಾರೆ. ಅಲ್ಲದೆ, ಸೊಲೈಮಾನಿ ಅವರ ಕೆಲಸ ಮತ್ತು ದಾರಿಯನ್ನು ತಡೆಯಲಾಗುವುದಿಲ್ಲ. ಅವರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಪ್ರತೀಕಾರ ತೀರಿಸಿಕೊಳ್ಳಲು ಎದುರು ನೋಡುತ್ತೇವೆ. ಹತ್ಯೆಯಿಂದ ಜಿಹಾದ್​ ಪ್ರಚೋದನಗೆ ಒಳಗಾಗೋದು ಖಂಡಿತ ಎಂದು ಎಚ್ಚರಿಸಿದ್ದಾರೆ.

ಇನ್ನು ಇರಾನ್​ ವಿದೇಶಾಂಗ ಸಚಿವರು ಕೂಡ ಸೊಲೈಮಾನಿ ಹತ್ಯೆಗೆ ಕಿಡಿಕಾರಿದ್ದು, ಇದೊಂದು ಅಪಾಯಕಾರಿ ಉಲ್ಬಣ ಎಂದು ಕರೆದಿದ್ದಾರೆ. ಅಲ್ಲದೆ, ಮುಂದಾಗುವ ಪರಿಣಾಮವನ್ನು ಅಮೆರಿಕ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನಿಯನ್​ ಪ್ರಮುಖ ಸೇನಾ ನಾಯಕ ಸೊಲೈಮಾನಿ ಅವರನ್ನು ಅಮೆರಿಕ ಹತ್ಯೆ ಮಾಡಿರುವುದು ಇರಾನ್​ ಮತ್ತು ಅಮೆರಿಕ ನಡುವಿನ ತಿಕ್ಕಾಟ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಇದು ಜಾಗತಿಕ ಮಟ್ಟದಲ್ಲೂ ಪರಿಣಾಮ ಬೀರಲಿದೆ. ಸೊಲೈಮಾನಿ ಮಾತ್ರವಲ್ಲದೆ, ಅವರ ಸಲಹೆಗಾರನಾಗಿರುವ ಇರಾಕಿ ಮಿಲಿಟಿಯಾ ಕಮಾಂಡರ್​ ಅಬು ಮಹ್ದಿ ಅಲ್​ ಮುಹಾಂದಿಸ್​ನನ್ನು ಅಮೆರಿಕ ಸೇನೆ ದಾಳಿಯಲ್ಲಿ ಹೊಡೆದುರುಳಿಸಿದೆ.​

ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ನಿರ್ದೇಶನ ಮೇರೆಗೆ ಅಮೆರಿಕ ಸೇನೆ ಸೊಲೈಮಾನಿ ಅವರನ್ನು ಹತ್ಯೆಗೈದಿರುವುದಾಗಿ ಪೆಂಟಗಾನ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ಕಾರ್ಯಾಚರಣೆ ನಡೆದ ಬೆನ್ನಲ್ಲೇ ಟ್ರಂಪ್​ ತಮ್ಮ ಟ್ವಿಟರ್​ನಲ್ಲಿ ಯುಎಸ್​ ಬಾವುಟವನ್ನು ಪೋಸ್ಟ್​ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಇರಾನ್ ರೂಪಿಸಿರುವ ಮುಂದಿನ ದಾಳಿಯ ಯೋಜನೆಗಳಿಗೆ ಅಡ್ಡಿಪಡಿಸಿ, ಭಯ ಹುಟ್ಟಿಸಲು ಈ ದಾಳಿ ನಡೆಸಿರುವುದಾಗಿ ಅಮೆರಿಕ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net