

Iran-Israel War: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸಂಘರ್ಷ ಇದೀಗ ತಾರಕಕ್ಕೇರಿದೆ. ಎರಡೂ ದೇಶಗಳ ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡಿದೆ. ಇರಾನ್-ಇಸ್ರೇಲ್ ಯುದ್ಧದಲ್ಲಿ ಅಮೆರಿಕ ಮೂಗು ತೂರಿಸಿದ್ದು, ಇರಾನ್ನ ಪರಮಾಣು ಕೇಂದ್ರಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಇದು ಸಂಘರ್ಷದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ. ಯುದ್ಧ ಪರಿಸ್ಥಿತಿಯಿಂದ ಈಗಾಗಲೇ ತೈಲ ಬೆಲೆ ಗಗನಕ್ಕೇರಿದ್ದು, ಬಹುತೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದ್ದು, ರಫ್ತು ಆಗಬೇಕಿದ್ದ ಬಾಸ್ಮತಿ ಅಕ್ಕಿ ದೇಶದಲ್ಲೇ ಉಳಿಯುವಂತಾಗಿದೆ.
ಎರಡೂ ದೇಶಗಳು ಪರಸ್ಪರ ವೈಮಾನಿಕ ದಾಳಿಗಿಳಿದಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ವಾತಾವರಣದಿಂದಾಗಿ, ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿದೆ. ಇದರ ಪರಿಣಾಮ, ಭಾರತದಿಂದ ಇರಾನ್‌ಗೆ ರಫ್ತು ಆಗಬೇಕಿದ್ದ ಬಾಸ್ಮತಿ ಅಕ್ಕಿ ದೇಶದ ದಾಸ್ತಾನುಗಳಲ್ಲೇ ಸಿಲುಕಿಕೊಂಡಿವೆ. ವರದಿಗಳ ಪ್ರಕಾರ, ಸುಮಾರು ಒಂದು ಲಕ್ಷ ಟನ್ ಬಾಸ್ಮತಿ ಅಕ್ಕಿ ಬಂದರುಗಳಲ್ಲಿಯೇ ಉಳಿದಿದೆ.
ಇಸ್ರೇಲ್-ಇರಾನ್ ಸಂಘರ್ಷವು ಕಡಲ ಸಂಪರ್ಕ ಮತ್ತು ವಿಮಾ ರಕ್ಷಣೆಯನ್ನು ಅಡ್ಡಿಪಡಿಸಿದೆ. ಹಡಗುಗಳು ಮತ್ತು ವಿಮಾ ರಕ್ಷಣೆಯ ಕೊರತೆಯಿಂದ ರಫ್ತುಗಳು ಅಡ್ಡಿಯಾಗಿವೆ. ಇರಾನ್‌ಗೆ ಉದ್ದೇಶಿಸಲಾದ ಸುಮಾರು ಒಂದು ಲಕ್ಷ ಟನ್ ಬಾಸ್ಮತಿ ಅಕ್ಕಿ ಭಾರತೀಯ ಬಂದರುಗಳಲ್ಲಿ ಸಿಲುಕಿಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ (AIREA) ತಿಳಿಸಿದೆ. ಉದ್ವಿಗ್ನತೆಯು ಹಡಗುಗಳು ಮತ್ತು ವಿಮಾ ಆಯ್ಕೆಗಳ ಕೊರತೆಗೆ ಕಾರಣವಾಗಿದೆ. ಇದರಿಂದಾಗಿ ಗುಜರಾತ್‌ನ ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಿಂದ ಸುಮಾರು 1 ಲಕ್ಷ ಟನ್ ಸರಕು ಸಾಗಣೆ ಸ್ಥಗಿತಗೊಂಡಿದೆ ಎಂದು AIREA ಅಧ್ಯಕ್ಷ ಸತೀಶ್ ಗೋಯಲ್ ಹೇಳಿದ್ದಾರೆ.
ಭಾರತದ ಒಟ್ಟು ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಇರಾನ್ ಶೇ.18ರಿಂದ20 ರಷ್ಟಿದೆ. ಟೆಹ್ರಾನ್‌ಗೆ ದೇಶದ ಬಾಸ್ಮತಿ ರಫ್ತಿನ ಸುಮಾರು ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿರುವ ಹರಿಯಾಣ ಈ ಹೊಡೆತವನ್ನು ಗಂಭೀರವಾಗಿ ಎದುರಿಸುತ್ತಿದೆ. ಕರ್ನಾಲ್ ಭಾರತದ ಬಾಸ್ಮತಿ ವ್ಯಾಪಾರದ ಪ್ರಮುಖ ಕೇಂದ್ರ. ಅದರ ನಂತರ ಕೈತಾಲ್ ಮತ್ತು ಸೋನಿಪತ್ ಇವೆ. ರಫ್ತುಗಳಲ್ಲಿ ತೀವ್ರ ಮಂದಗತಿ, ಸಾಗಣೆ ವಿಳಂಬ ಮತ್ತು ಹೆಚ್ಚುತ್ತಿರುವ ಪಾವತಿ ಬಾಕಿಯಿದೆ ಎಂದು ತಿಳಿದುಬಂದಿದೆ.
"ದೇಶದಿಂದ ಇರಾನ್‌ಗೆ ವಾರ್ಷಿಕವಾಗಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಲಾಗುತ್ತದೆ. ಇದರಲ್ಲಿ ಹರಿಯಾಣದ ಪಾಲು ಸುಮಾರು 30ರಿಂದ 35 ಪ್ರತಿಶತದಷ್ಟಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ವಿವಾದವು ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದಾಗಿ ಸುಮಾರು 2 ಲಕ್ಷ ಮೆಟ್ರಿಕ್ ಟನ್‌ಗಳ ( ಅಂದರೆ 1500 ಕೋಟಿ ರೂ.ಯಿಂದ 2000 ಕೋಟಿ ರೂ.ವರೆಗೆ) ಪಾವತಿಗಳನ್ನು ಸಹ ಸ್ಥಗಿತಗೊಳಿಸಲಾಗಿದೆ" ಎಂದು ಅಕ್ಕಿ ರಫ್ತುದಾರರ ಸಂಘದ ಹರಿಯಾಣ ಅಧ್ಯಕ್ಷ ಸುಶೀಲ್ ಜೈನ್ ಹೇಳಿದ್ದಾರೆ ತಿಳಿಸಿದ್ದಾರೆ,(ಏಜೆನ್ಸೀಸ್).