

ಹಾವೇರಿ: ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಜನಾಂದೋಲನ ಮಾಡಬೇಕು ಎಂದು ಬಿಜೆಪಿ ತೀರ್ಮಾನ ಮಾಡಿದೆ. ಜನರ ವಿಶ್ವಾಸದೊಂದಿಗೆ ಯಾವ ಪ್ರದೇಶದಲ್ಲಿ ಯಾವ ವಿಷಯ ತೆಗೆದುಕೊಂಡು ಜನಾಂದೋಲನ ರೂಪಿಸಬೇಕು ಎಂದು ಪಕ್ಷದ ಪ್ರಮುಖರ ಜತೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರಾಮಾಣಿಕ ಅಧಿಕಾರಿಗಳ ನೈತಿಕತೆ ಕುಂದಿದೆ. ಆಡಳಿತ ಪಕ್ಷದ ಶಾಸಕರು ಮಾತಾಡಿದರೂ ಸಿಎಂ ಹಾಗೂ ಡಿಸಿಎಂ ತುಟಿ ಪಿಟಕ್ ಅನ್ನುತ್ತಿಲ್ಲ. ಸಂಪುಟ ಸಹೋದ್ಯೋಗಿಗಳು ಬಹಿರಂಗವಾಗಿ ಪತ್ರ ಬರೆಯುತ್ತಾರೆ. ಸಚಿವ ಸಂಪುಟದಲ್ಲೂ ಸಾಮರಸ್ಯ ವಿಶ್ವಾಸವಿಲ್ಲ. ಸಚಿವರು ಸಂಪುಟದಲ್ಲಿ ಎತ್ತುವ ಪ್ರಶ್ನೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಬಹಿರಂಗವಾಗಿ ಪತ್ರ ಬರೆಯುತ್ತಿದ್ದಾರೆ ಎಂದರು.
ಮಳೆ ಬಂದರೂ ಪರಿಹಾರ ಇಲ್ಲ. ಬೆಳೆ ಹಾನಿಗೆ ಪರಿಹಾರ ಇಲ್ಲ. ಮನೆ ಕುಸಿದರೂ ಪರಿಹಾರ ಇಲ್ಲ. ಯಾವುದೇ ರೀತಿ ಜನಸ್ಪಂದನೆ ಕೆಲಸ ಆಗುತ್ತಿಲ್ಲ. ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಜನಾಂದೋಲನ ಪ್ರಾರಂಭ ಆಗಲಿದೆ. ಆಯಾ ಪ್ರದೇಶದ ಸಮಸ್ಯೆ ಕುರಿತು ಜನಾಂದೋಲನ ನಡೆಸಲಾಗುವುದು ಎಂದರು.
ಜಿಲ್ಲಾಡಳಿತ ಹೊಣೆ ಹೊರಲಿ
ರೈತರ ಆತ್ಮಹತ್ಯೆ ಪರಿಶೀಲನೆ ಮಾಡುವ ವ್ಯವಸ್ಥೆಯೇ ಇದೆ. ಶಿವಾನಂದ ಪಾಟೀಲ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮಾತುಗಳನ್ನಾಡಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳ ಹೊಣೆ ಜಿಲ್ಲಾಡಳಿತ ಹೊರಬೇಕು, ಸರ್ಕಾರ ಪರಿಹಾರ ಕೊಡಬೇಕು. ರೈತ ಸಂಪರ್ಕ ಕೇಂದ್ರದಿಂದ ನಕಲಿ ಬೀಜ ಕೊಟ್ಟಿದಾರೆ. ಸರ್ಕಾರವೇ ನಕಲಿ ಮಾಡಿದ ಹಾಗೆ ಆಯಿತು. ಪಕ್ಕದ ಧಾರವಾಡ ಜಿಲ್ಲೆಯಲ್ಲಿ ಚೆನ್ನಾಗಿ ಬೀಜಗಳು ಹುಟ್ಟಿವೆ. ಅಲ್ಲಿ ಮಧ್ಯ ಪ್ರದೇಶದಿಂದ ತರಿಸಿದ್ದಾರೆ. ಮಹಾರಾಷ್ಟ್ರದಿಂದ ತರಿಸಿದ್ದು ಇಲ್ಲಿದೆ. ಕೃಷಿ ಸಚಿವರು ಈ ಬಗ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.