ಪಾಕಿಸ್ತಾನದ ಮೇಲೆಯೇ ಕ್ಷಿಪಣಿ ಉಡಾಯಿಸಿದ ಇರಾನ್​: ಪರಿಣಾಮ ನೆಟ್ಟಗಿರಲ್ಲ ಎಂದ ಪಾಕ್​!

Iran Missile
Published on

ಇಸ್ಲಮಾಬಾದ್​: ಪಾಕಿಸ್ತಾನದಲ್ಲಿರುವ ಎರಡು ಉಗ್ರ ಸಂಘಟನೆಗಳ ನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಮಂಗಳವಾರ (ಜ.16)​ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನಿಯನ್​ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಇರಾಕ್ ಮತ್ತು ಸಿರಿಯಾದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ ಮರು ದಿನವೇ ಪಾಕಿಸ್ತಾನದ ಮೇಲೂ ದಾಳಿ ನಡೆದಿದೆ. ಬಲೂಚಿ ಉಗ್ರಗಾಮಿ ಸಂಘಟನೆ ಜೈಶ್ ಅಲ್ ಅದ್ಲ್​ಗೆ ಸಂಬಂಧಿಸಿದ ಎರಡು ನೆಲೆಗಳ ಮೇಲೆ ದಾಳಿ ನಡೆದಿದೆ.

ಈ ಹಿಂದೆ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರಾನ್ ಭದ್ರತಾ ಪಡೆಗಳ ಮೇಲೆ ಈ ಉಗ್ರಗಾಮಿ ಗುಂಪು ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಇರಾನ್​ ಪ್ರತಿತಂತ್ರ ರೂಪಿಸಿ, ದಾಳಿ ಮಾಡಿದೆ. ಕ್ಷಿಪಣಿ ಮತ್ತು ಡ್ರೋನ್​ ದಾಳಿಯಿಂದ ಎರಡೂ ನೆಲೆಗಳು ಧ್ವಂಸಗೊಂಡಿದೆ ಎಂದು ಇರಾನಿಯನ್​ ಮಾಧ್ಯಮ ಮಾಹಿತಿ ನೀಡಿದೆ.

ದೇಶದ ಉನ್ನತ ಭದ್ರತಾ ಸಂಸ್ಥೆಯೊಂದಿಗೆ ಸಂಯೋಜಿತವಾಗಿರುವ ಇರಾನ್‌ನ ನೂರ್‌ನ್ಯೂಸ್ ಮಾಧ್ಯಮ, ದಾಳಿಗೊಳಗಾದ ನೆಲೆಗಳು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿವೆ ಎಂದು ಹೇಳಿದೆ.

ಇರಾನ್‌ನ ಗಡಿಯಲ್ಲಿರುವ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮಾಹಿತಿ ಸಚಿವ ಜಾನ್ ಅಚಕ್ಜೈ ಅವರು ಇರಾನ್​ ದಾಳಿಯನ್ನು ಖಚಿತಪಡಿಸಲು ನಿರಾಕರಿಸಿದರು. ಪಾಕಿಸ್ತಾನಿ ಮಿಲಿಟರಿಯ ಸಾರ್ವಜನಿಕ ಸಂಪರ್ಕ ವಿಭಾಗ ಐಎಸ್​ಪಿಆರ್​ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ ಮತ್ತು ಈ ಘಟನೆಯು "ಗಂಭೀರ ಪರಿಣಾಮಗಳನ್ನು" ಉಂಟುಮಾಡಬಹುದು ಹಾಗೂ "ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಎಚ್ಚರಿಸಿದೆ. ಆದರೆ, ಈ ಬಗ್ಗೆ ಇರಾನ್​ನಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net