More

    ಮೊದಲ ಬಾರಿಗೆ ಕೂಚ್ ಬೆಹಾರ್ ಟ್ರೋಫಿ ಜಯಿಸಿದ ಕರ್ನಾಟಕ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    ಬೆಂಗಳೂರು: ಆತಿಥೇಯ ಕರ್ನಾಟಕ ತಂಡ 19 ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    79 ವರ್ಷಗಳಲ್ಲಿ ಮೊದಲ ಬಾರಿಗೆ ಕೂಚ್‌ ಬಿಹಾರ್‌ ಟ್ರೋಫಿ ಗೆದ್ದಿರುವ ಕರ್ನಾಟಕದ 19 ವರ್ಷದೊಳಗಿನವರ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳು. ಈ ಗೆಲುವು ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಆರಂಭಿಕ ಬ್ಯಾಟರ್‌ ಪ್ರಖರ್‌ ಚತುರ್ವೇದಿ ಅಜೇಯ 404 ರನ್‌ ಗಳಿಸಿ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ತಂಡವು 890 ರನ್‌ಗಳ ದಾಖಲೆಯ ಮೊತ್ತವನ್ನು ಪೇರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಯುವ ಆಟಗಾರರು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಫೇಸ್​ಬುಕ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ಶಿವಮೊಗ್ಗದ ನವುಲೆ ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ (ಜ.15) ಮುಕ್ತಾಯಗೊಂಡ ಪಂದ್ಯದಲ್ಲಿ ಬೆಳಗ್ಗೆ 6 ವಿಕೆಟ್‌ಗೆ 626 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ, ಪ್ರಕಾರ್ ಚತುರ್ವೇದಿ- ಎನ್.ಸಮರ್ಥ (55*ರನ್, 135 ಎಸೆತ, 6 ಬೌಂಡರಿ) ಜೋಡಿ ಮುರಿಯದ 9ನೇ ವಿಕೆಟ್‌ಗೆ ಕಲೆಹಾಕಿದ 173 ರನ್‌ಗಳ ಜತೆಯಾಟದ ನೆರವಿನಿಂದ 8 ವಿಕೆಟ್‌ಗೆ 890 ರನ್‌ಗಳಿಸಿದಾಗ ಚಹಾ ವಿರಾಮಕ್ಕೂ ಮುನ್ನ ಉಭಯ ತಂಡಗಳ ನಾಯಕರ ಸಮ್ಮತಿ ಪಡೆದ ಅಂಪೈರ್‌ಗಳು ಪಂದ್ಯವನ್ನು ಡ್ರಾ ಎಂದು ಘೋಷಿಸಿದರು. ಫೈನಲ್‌ನಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವೂ ಇದಾಗಿದೆ. ಕರ್ನಾಟಕ ತಂಡದ ನಾಯಕ ಧೀರಜ್ ಗೌಡ ಪ್ರಶಸ್ತಿಯೊಂದಿಗೆ 30 ಲಕ್ಷ ರೂ. ನಗದು ಬಹುಮಾನ ಸ್ವೀಕರಿಸಿದರು.

    ಮುಂಬೈ: 380, ಕರ್ನಾಟಕ: 8 ವಿಕೆಟ್‌ಗೆ 890 ಡಿಕ್ಲೇರ್ (ಪ್ರಕಾರ್ ಚತುರ್ವೇದಿ 404*,ಹಾರ್ದಿಕ್ ರಾಜ್ 51, ಎಸ್.ಯು.ಕಾರ್ತಿಕ್ 50, ಪ್ರೇಮ್ ದೇವಕರ್ 136ಕ್ಕೆ 3, ನೂತನ್ 41ಕ್ಕೆ 2, ಮನನ್ ಭಟ್ 198ಕ್ಕೆ 2).

    ಯುವರಾಜ್ ದಾಖಲೆ ಪತನ
    ಪ್ರಕಾರ್ ಚತುರ್ವೇದಿ ಕೂಚ್ ಬೆಹಾರ್ ಟ್ರೋಫಿ ಫೈನಲ್‌ನಲ್ಲಿ 400 ರನ್‌ಗಳಿಸಿದ ಮೊದಲ ಬ್ಯಾಟರ್ ಎನಿಸಿದರು. ಈ ಮೂಲಕ ಯುವರಾಜ್ ಸಿಂಗ್ ಅವರ 25 ವರ್ಷ ಹಳೆಯ ದಾಖಲೆಯೊಂದನ್ನು ಮುರಿದರು. 1999ರ ಫೈನಲ್‌ನಲ್ಲಿ ಬಿಹಾರ ಎದುರು ಪಂಜಾಬ್ ಪರ ಯುವರಾಜ್ ಸಿಂಗ್ 357 ರನ್ ಬಾರಿಸಿದ್ದು ಇದುವರೆಗಿನ ಗರಿಷ್ಠ ರನ್ ಎನಿಸಿತ್ತು. ಈ ಪಂದ್ಯದ ವೇಳೆ ಎಂಎಸ್ ಧೋನಿ ಬಿಹಾರ ತಂಡದಲ್ಲಿದ್ದರು. 2011ರಲ್ಲಿ ಅಸ್ಸಾಂ ವಿರುದ್ಧ ಲೀಗ್‌ನಲ್ಲಿ ಮಹಾರಾಷ್ಟ್ರದ ವಿಜಯ್ ಜೋಲ್ 451* ರನ್ ಸಿಡಿಸಿದ್ದು ಟೂರ್ನಿಯ ಗರಿಷ್ಠ ರನ್ ಸಾಧನೆಯಾಗಿದೆ.

    ಯುವರಾಜ್ ಸಿಂಗ್ ದಾಖಲೆ ಮುರಿದ ಕರ್ನಾಟಕದ ಪ್ರಕಾರ್ ಚತುರ್ವೇದಿ ಚತುಃಶತಕದ ದಾಖಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts