ಚಬಹರ್​ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯಿಂದ ಭಾರತವನ್ನು ಕೈಬಿಟ್ಟ ಇರಾನ್​...

Rail Project
Published on

ನವದೆಹಲಿ: 2016ರಲ್ಲಿ ಭಾರತ-ಇರಾನ್​-ಅಫ್ಘಾನಿಸ್ತಾನ ನಡುವೆ ನಡೆದಿದ್ದ ಚಬಹರ್​ ತ್ರಿಪಕ್ಷೀಯ ಒಪ್ಪಂದದ ಒಂದು ಭಾಗವಾಗಿದ್ದ, ರೈಲು ಮಾರ್ಗ ನಿರ್ಮಾಣದಲ್ಲಿ ಇರಾನ್​ ಭಾರತವನ್ನು ಕೈಬಿಟ್ಟಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ವ್ಯಾಪಾರ ಮಾರ್ಗ ಕಂಡುಕೊಳ್ಳುವ ಸಲುವಾಗಿ ಭಾರತ 2016ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರ ಅನ್ವಯ ಚಹಬರ್​ ಬಂದರು ಅಭಿವೃದ್ಧಿಯನ್ನೂ ಮಾಡಲಾಗಿತ್ತು. ಆದರೆ ಒಪ್ಪಂದದ ಮತ್ತೊಂದು ಭಾಗವಾಗಿದ್ದ ಚಹಬರ್​ ಬಂದರಿನಿಂದ ಜಾಹೇದನ್​ಗೆ ರೈಲು ಮಾರ್ಗ ನಿರ್ಮಾಣಕ್ಕೆ ಭಾರತ ನಾಲ್ಕು ವರ್ಷಗಳಾದರೂ ಹಣ ನೀಡಿಲ್ಲ ಎಂಬ ಕಾರಣಕ್ಕೆ, ಇರಾನ್ ತಾನೇ ಸ್ವತಃ ರೈಲು ಮಾರ್ಗ ನಿರ್ಮಿಸಲು ಮುಂದಾಗಿದೆ. ಹಾಗೇ ಭಾರತವನ್ನು ಈ ಯೋಜನೆಯಿಂದ ಕೈಬಿಟ್ಟಿದೆ.

ಇರಾನ್​ ಪ್ರಾರಂಭ ಮಾಡಲಿರುವ ರೈಲು ಮಾರ್ಗ ಯೋಜನೆ ಮಾರ್ಚ್​ 22ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಅಲ್ಲದೆ, ಇರಾನಿಯನ್​ ನ್ಯಾಷನಲ್​ ಡೆವಲಪ್​​ಮೆಂಟ್​ ಫಂಡ್​​ನಿಂದ ಈ ಯೋಜನೆಗಾಗಿ 400 ಮಿಲಿಯನ್​ ಡಾಲರ್​ ಮಂಜೂರು ಮಾಡಲಾಗಿದೆ. ಒಪ್ಪಂದದ ನಿಯಮದ ಪ್ರಕಾರ ಭಾರತ ಈ ಯೋಜನೆಗೆ ಹಣ ನೀಡಬೇಕಿತ್ತು. ಆದರೆ ಇದೀಗ ಭಾರತದ ನೆರವು ಇಲ್ಲದೆ ಇರಾನ್​ ಕಾಮಗಾರಿ ಶುರು ಮಾಡಲಿದೆ.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇರಾನ್​ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಇರಾನ್​-ಭಾರತ-ಅಫ್ಘಾನಿಸ್ತಾನ ನಡುವೆ ತ್ರಿಪಕ್ಷೀಯ ಒಪ್ಪಂದವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಇರಾನ್​ ಅಧ್ಯಕ್ಷ ಹಸನ್​ ರೌಹಾನಿ, ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಚಹಬರ್​ನಿಂದ ರೈಲು ಮಾರ್ಗ ನಿರ್ಮಾಣ ಮಾಡಲು ಇಂಡಿಯನ್​ ರೈಲ್ವೆ ಕನ್​​ಸ್ಟ್ರಕ್ಷನ್​ ಲಿಮಿಟೆಡ್​ನಿಂದ 1.6 ಬಿಲಿಯನ್​ ಡಾಲರ್ ಹಣದ ನೆರವು ನೀಡುವುದಾಗಿ ಭರವಸೆ ನಿಡಲಾಗಿತ್ತು. ಆದರೆ ಅಮೆರಿಕ ಇರಾನ್​ ಮೇಲೆ ನಿರ್ಬಂಧ ಹೇರಿದ್ದರಿಂದ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ ಶುರುವಾಗಿರಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net