ಇರಾನ್- ಚೀನಾ ಬೃಹತ್ ಒಪ್ಪಂದ?: ಭಾರತದ ಜತೆಗಿನ ರೈಲ್ವೇ ಯೋಜನೆ ರದ್ದು

China Iran
Published on

ನವದೆಹಲಿ: ಲಡಾಖ್ ಗಡಿ ಸಂಘರ್ಷದಿಂದಾಗಿ ಭಾರತ ಮತ್ತು ಚೀನಾ ಮಧ್ಯೆ ಬಿಕ್ಕಟ್ಟಿನ ಪರಿಸ್ಥಿತಿ ನಿರ್ವಣವಾಗಿರುವ ನಡುವೆಯೇ, ಪ್ರಮುಖ ಯೋಜನೆಯೊಂದರ ಒಪ್ಪಂದದಿಂದ ಇರಾನ್ ಭಾರತವನ್ನು ಕೈಬಿಟ್ಟಿದೆ. ಚೀನಾದೊಂದಿಗೆ ಸುಮಾರು 400 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಇರಾನ್ ಸಹಿ ಹಾಕುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನದ ಗಡಿ ಬಳಿ ಚಬಹಾರ್ ಬಂದರಿನಿಂದ ಜಹೆದನ್​ಗೆ ರೈಲು ಮಾರ್ಗ ನಿರ್ವಿುಸಲು ಭಾರತದ ಜತೆ ಮಾಡಿಕೊಳ್ಳಲಾದ ಒಪ್ಪಂದವನ್ನು ಇರಾನ್ ಏಕಾಏಕಿ ಕೈಬಿಟ್ಟಿದೆ. ಒಪ್ಪಂದ ಮಾಡಿಕೊಂಡು ನಾಲ್ಕು ವರ್ಷಗಳು ಕಳೆದರೂ ಭಾರತದಿಂದ ಯೋಜನೆಗೆ ಹಣಕಾಸು ನೆರವು ಬರುತ್ತಿಲ್ಲ. ಹೀಗಾಗಿ ರೈಲ್ವೆ ಯೋಜನೆಯನ್ನು ಭಾರತದ ನೆರವು ಪಡೆಯದೇ, ಇರಾನ್​ನ ರಾಷ್ಟ್ರೀಯ ಅಭಿವೃದ್ಧಿ ನಿಧಿಯ (ಎನ್​ಡಿಎಫ್) ಮೂಲಕ ಪೂರ್ಣಗೊಳಿಸುತ್ತೇವೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಚೀನಾ ಮತ್ತು ಭಾರತದ ಬಿಕ್ಕಟ್ಟಿನ ನಡುವೆ ಇರಾನ್​ನ ಈ ಕ್ರಮ ಮಹತ್ವ ಪಡೆದಿದೆ.

2016ರಲ್ಲಿ ಒಪ್ಪಂದ: ಚಬಹಾರ್ ಬಂದರು ಪ್ರದೇಶದಿಂದ 628 ಕಿ.ಮೀ ಉದ್ದದ ರೈಲ್ವೆ ಹಳಿ ನಿರ್ಮಾಣ ಯೋಜನೆಯಾಗಿದೆ. ಅಫ್ಘಾನಿಸ್ತಾನದ ಜರಂಜ್ ಗಡಿವರೆಗೆ ತನ್ನ ರೈಲ್ವೆ ಮಾರ್ಗ ವಿಸ್ತರಿಸುವುದು ಇರಾನ್ ಪ್ರಮುಖ ಉದ್ದೇಶ. 2016ರಲ್ಲಿ ಟೆಹರಾನ್​ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಚಬಹಾರ್ ರೈಲ್ವೆ ಯೋಜನೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದ ಅನ್ವಯ ಯೋಜನೆಗೆ ಭಾರತ 1.6 ಬಿಲಿಯನ್ ಅರಬ್ ಡಾಲರ್ ಹೂಡಿಕೆ ಮಾಡಬೇಕಾಗಿತ್ತು. ಈ ಯೋಜನೆ ಭಾರತ ಮತ್ತು ಅಫ್ಘಾನಿಸ್ತಾನ ಸೇರಿ ಮಧ್ಯ ಏಷ್ಯಾದ ಇತರ ದೇಶಗಳಿಗೆ ಪರ್ಯಾಯ ಮಾರ್ಗವನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಕುರಿತು ಇರಾನ್, ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ತ್ರಿಪಕ್ಷೀಯ ಒಪ್ಪಂದವೂ ನಡೆದಿತ್ತು. ಯೋಜನೆಯನ್ನು ಭಾರತೀಯ ರೈಲ್ವೆ ಕಂಪನಿ ಇರ್ಕಾನ್ 2022ರೊಳಗಾಗಿ ಪೂರ್ಣಗೊಳಿಸಬೇಕಿತ್ತು. ಇದಕ್ಕಾಗಿ ಭಾರತದಿಂದ ಇಂಜಿನಿಯರ್​ಗಳನ್ನೂ ಸಹ ಇರಾನ್​ಗೆ ಕಳುಹಿಸಲಾಗಿತ್ತು. ಆದರೆ ಇರಾನ್ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೆಚ್ಚಿಸಿದ್ದರಿಂದಾಗಿ ಭಾರತ ಈ ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಿರಲಿಲ್ಲ ಎನ್ನಲಾಗಿದೆ.

ಚೀನಾ ಷಡ್ಯಂತ್ರ?: ಭಾರತ ಹಾಗೂ ಅಮೆರಿಕ ಎರಡೂ ರಾಷ್ಟ್ರಗಳಿಗೆ ತಿರುಗೇಟು ನೀಡಲು ಇರಾನ್ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ರೈಲ್ವೆ ಒಪ್ಪಂದದಿಂದ ಭಾರತವನ್ನು ಚೀನಾ ಕೈಬಿಡಿಸಿರುವ ಸಾಧ್ಯತೆ ಇದೆ. ಚೀನಾ-ಇರಾನ್ ಶೀಘ್ರದಲ್ಲೇ ದೊಡ್ಡ ಒಪ್ಪಂದ ಮಾಡಿಕೊಳ್ಳಲಿದ್ದು, ಇರಾನ್​ನಲ್ಲಿ ಚೀನಾ ಸುಮಾರು 400 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಇರಾನ್​ನಿಂದ ಚೀನಾ ಕಡಿಮೆ ಬೆಲೆಯಲ್ಲಿ ಕಚ್ಚಾತೈಲ ಆಮದು ಮಾಡಿಕೊಳ್ಳಬಹುದು. ಅಮೆರಿಕ ಬದ್ಧ ವೈರಿಯಾಗಿರುವ ಇರಾನ್​ಗೆ ಚೀನಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ನೀಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net