

ನವದೆಹಲಿ: ಗಾಜಾದ ಮೇಲಿನ ಇಸ್ರೇಲ್ ದಾಳಿಯನ್ನು ಕೊನೆಗೊಳಿಸಲು "ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸಬೇಕು" ಎಂದು ಇರಾನ್ ಭಾರತವನ್ನು ಕೇಳಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೋಮವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕರೆ ಮಾಡಿ ಮಾತನಾಡಿದ್ದು, ಪಾಶ್ಚಿಮಾತ್ಯ ವಸಾಹತುಶಾಹಿ ವಿರುದ್ಧದ ಭಾರತ ನಿರಂತರ ಹೋರಾಟ ನಡೆಸಿದೆ. ಅಲಿಪ್ತ ಚಳವಳಿಯ ಸಂಸ್ಥಾಪಕ ದೇಶ ಭಾರತವಾಗಿದೆ. ಹೀಗಾಗಿಯೇ ದಾಳಿ ಕೊನೆಗೊಳಿಸಲು ಭಾರತವು ತನ್ನೆಲ್ಲ ಶಕ್ತಿಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ ಎಂದು ರೈಸಿ ನೆನಪಿಸಿಕೊಂಡರು.
ತಕ್ಷಣದ ಕದನ ವಿರಾಮಕ್ಕಾಗಿ ಯಾವುದೇ ಜಾಗತಿಕ ಜಂಟಿ ಪ್ರಯತ್ನವನ್ನು ಟೆಹ್ರಾನ್ ಬೆಂಬಲಿಸುತ್ತದೆ, ಗಾಜಾದ ತುಳಿತಕ್ಕೊಳಗಾದ ಜನರಿಗೆ ನೆರವು ನೀಡುತ್ತದೆ ಎಂದು ಇರಾನ್ ಅಧ್ಯಕ್ಷರು ಮೋದಿಯವರ ಗಮನಕ್ಕೆ ತಂದರು.
"ಪ್ಯಾಲೆಸ್ತೀನ್ ಜನರ ಹತ್ಯೆ ಮುಂದುವರಿದಿರುವುದು ಪ್ರಪಂಚದ ಎಲ್ಲಾ ಸ್ವತಂತ್ರ ರಾಷ್ಟ್ರಗಳನ್ನು ಕೆರಳಿಸಿದೆ. ಅಮಾಯಕ ಮಹಿಳೆ ಮತ್ತು ಮಕ್ಕಳ ಹತ್ಯೆ, ಆಸ್ಪತ್ರೆ, ಶಾಲೆ, ಮಸೀದಿ, ಚರ್ಚ್ ಮತ್ತು ವಸತಿ ಪ್ರದೇದ ಮೇಲಿನ ದಾಳಿಗಳು ಖಂಡನೀಯ ಮತ್ತು ಸ್ವೀಕಾರಾರ್ಹವಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರು, ಘರ್ಷಣೆ ತಡೆಗಟ್ಟುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದು, ಮಾನವೀಯ ನೆರವು ನೀಡುವುದಕ್ಕೆ ಇರುವ ನಿಬಂಧನೆ ತೆರವುಗೊಳಿಸುವ ಅಗತ್ಯವಿದೆ. ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಮರುಸ್ಥಾಪಿಸುವುದು ಭಾರತದ ಆದ್ಯತೆಯಾಗಿದೆ ಎಂದರು.
ಅ.7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿ ನಂತರ ಇಸ್ರೇಲ್ ಯುದ್ಧ ಘೋಷಿಸಿತು. ಅಂದಿನಿಂದ ಪ್ರಧಾನಿ ಮೋದಿ ಶಾಂತಿ ಸ್ಥಾಪನೆಗೆ ವಿಶ್ವ ನಾಯಕರೊಂದಿಗೆ ನಿಯಮಿತವಾಗಿ ದೂರವಾಣಿ ಸಂಭಾಷಣೆ ನಡೆಸುತ್ತಿದ್ದಾರೆ. ಶುಕ್ರವಾರ ಮೋದಿ ಅವರು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ರೊಂದಿಗೆ ಮಾತನಾಡಿದ್ದರು. ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅಮಿರಾಬ್ದೊಲ್ಲಾಹಿಯಾನ್ ಅವರೊಂದಿಗೆ ಚರ್ಚಿಸಿದರು.
ಚಾಬಹಾರ್ ಬಂದರು ಅಭಿವೃದ್ಧಿ ಸೇರಿದಂತೆ ದ್ವಿಪಕ್ಷೀಯ ಸಹಕಾರ ನೀಡುವುದನ್ನು ಮುಂದುವರಿಸಲು ಭಾರತ ಮತ್ತು ಇರಾನ್ ಬದ್ಧತೆಯನ್ನು ಪ್ರಧಾನಿ ಮೋದಿ ಮತ್ತು ಇಬ್ರಾಹಿಂ ರೈಸಿ ಒಪ್ಪಿಕೊಂಡರು.