ಐಪಿಎಸ್ ಅಧಿಕಾರಿ ಸಸ್ಪೆಂಡ್: ಜೆಡಿಎಸ್ ಒತ್ತಾಯ

JDs delegation
Published on

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೊಳಕು ಪದ ಬಳಸಿದ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರರಾವ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಗೆ ಸೋಮವಾರ ಸಲ್ಲಿಸಿದ ದೂರಿನಲ್ಲಿ ಜೆಡಿಎಸ್ ನಿಯೋಗ ಒತ್ತಾಯಿಸಿದೆ.

ಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಮುಂತಾದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಡಿಜಿಪಿ ಚಂದ್ರಶೇಖರರಾವ್ ಅವರನ್ನು ಅಮಾನತ್ತಿನಲ್ಲಿಟ್ಟು, ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಈ ದೂರಿನಲ್ಲಿ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಉಪ ನಾಯಕಿ ಶಾರದಾ ಪೂರ‌್ಯ ನಾಯಕ್, ಶಾಸಕರಾದ ಎ.ಮಂಜು, ಟಿ.ಎ.ಶರವಣ, ವೆಂಕಟ ಶಿವಾರೆಡ್ಡಿ, ಕರೆಮ್ಮ ನಾಯಕ, ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ.ಾರುಕ್ ಇನ್ನಿತರರು ಇದ್ದರು.

ದುರ್ಬಳಕೆ ಆರೋಪ

ನಂತರ ಸಿ.ಬಿ.ಸುರೇಶ್ ಬಾಬು ಸುದ್ದಿಗಾರರೊಂದಿಗೆ ಮಾತನಾಡಿ ಐಪಿಎಸ್ ಅಧಿಕಾರಿ ಚಂದ್ರಶೇಖರರಾವ್ ತಮ್ಮ ಹದ್ದುಮೀರಿ ವರ್ತಿಸಿ, ಉದ್ಧಟತನ ಪ್ರದರ್ಶಿಸಿದ್ದಾರೆ. ಅಧಿಕಾರಿಗಳನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಹಿಮಾಚಲಪ್ರದೇಶ ವೃಂದದ ಅಧಿಕಾರಿಯಾಗಿರುವ ಚಂದ್ರಶೇಖರರಾವ್ ಸಬೂಬುಗಳನ್ನು ಹೇಳಿಕೊಂಡು ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಬಿಡಾರ ಹೂಡಿದ್ದಾರೆ. ಭ್ರಷ್ಟಾಚಾರ, ಸುಲಿಗೆ ದೂರುಗಳೂ ಇರುವುದರಿಂದ ರಾಜ್ಯದ ಸೇವೆಯಿಂದ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net