ಬೇಳೂರು ರಾಘವೇಂದ್ರ ಶೆಟ್ಟಿಯಿಂದ ದಾಖಲೆ ಇಲ್ಲದ ಸುಳ್ಳು ಆರೋಪ: ಐಪಿಎಸ್​ ಅಧಿಕಾರಿ ಡಿ. ರೂಪಾ

Shetty Roopa
Published on

ಬೆಂಗಳೂರು: ಅಧ್ಯಕ್ಷ ಸ್ಥಾನ ಕಳೆದುಕೊಂಡು ಹತಾಶೆಗೊಳಗಾಗಿರುವ ಬೇಳೂರು ರಾಘವೇಂದ್ರ ಶೆಟ್ಟಿ ದಾಖಲೆ ಇಲ್ಲದೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಐಪಿಎಸ್ ಅಧಿಕಾರಿ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಆರೋಪಿಸಿದ್ದಾರೆ. ಮಾತ್ರವಲ್ಲದೆ, ರಾಘವೇಂದ್ರ ವಿರುದ್ಧ ಹಲವಾರು ಆರೋಪಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ.

  1. ಪ್ರತಿ ತಿಂಗಳು ತನ್ನ ಸಂಬಳವಲ್ಲದೆ ನಾಲ್ವರು ತನ್ನ ಬಳಿ ನಿಗಮದ ಕೆಲಸ ಮಾಡುತ್ತಿರುವುದಾಗಿ ಆ ಬೇನಾಮಿ ಜನರ ಸಂಬಳ ತಾನೇ ತೆಗೆದುಕೊಂಡಿರುವುದು ಕ್ರಿಮಿನಲ್​ ಅಪರಾಧ. ಅಸಲಿಗೆ ಆ ವ್ಯಕ್ತಿಗಳು ಈತನ ಬಳಿ ಕೆಲಸಕ್ಕೆ ಇಲ್ಲ. ಅಪ್ಪಿತಪ್ಪಿ ಇದ್ದರೂ ನಿಗಮದ ಕಚೇರಿಯಲ್ಲಿ ಕಂಡಿಲ್ಲ, ನಿಗಮದ ಕೆಲಸ ಮಾಡಿಲ್ಲ, ಕಚೇರಿಯಲ್ಲಿ ಹಾಜರಾತಿ ಇಲ್ಲ. ಇಲ್ಲದ ವ್ಯಕ್ತಿಗಳಿಗೆ ಸಂಬಳ ಕೊಡುವುದು ಸಾರ್ವಜನಿಕ ಬೊಕ್ಕಸಕ್ಕೆ ಮೋಸ ಮಾಡಿದಂತಲ್ಲವೇ? ಹಾಗಾಗಿ ಈ ಬೇನಾಮಿಗಳ ಸಂಬಳ ತಡೆ ಹಿಡಿದಿದ್ದೇನೆ. ಅವರಿಗೆ ಸಂಬಳ ಕೊಟ್ಟಿಲ್ಲ ಎಂದು ಶೆಟ್ಟಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ.
  2. ಮೂರೂವರೆ ಲಕ್ಷ ರೂ. ಮೌಲ್ಯದ ಗಂಧದ ಸಾಮಾನು ತೆಗೆದುಕೊಂಡು ಹೋಗಿರುವ ಶೆಟ್ಟಿ, ಇದುವರೆಗೆ ಅದರ ಹಣ ಪಾವತಿಸಿಲ್ಲ. ಉಲ್ಟಾ, ನಾನು ಮಾನ್ಯ ಮುಖ್ಯಮಂತ್ರಿಗಳು, ಸಣ್ಣ ಕೈಗಾರಿಕೆಗಳ ಸಚಿವರು ಹಾಗೂ ದೆಹಲಿಯ ಕರಕುಶಲ ಅಭಿವೃದ್ಧಿ ಆಯುಕ್ತರಿಗೆ ಅಫೀಷಿಯಲಿ, ಔಪಚಾರಿಕವಾಗಿ ಕೊಟ್ಟಿರುವ ಕೆಲವು ಕರಕುಶಲ ವಸ್ತುಗಳು, ಅಧಿಕೃತವಾಗಿ ಕೊಟ್ಟಿರುವುದಾಗಿದೆ. ರಾಘವೇಂದ್ರ ಶೆಟ್ಟಿ ಆರೋಪ ಸುಳ್ಳು. ಮೇಲೆ ಹೇಳಿದ ವಸ್ತುಗಳು ಕೊಟ್ಟಿರುವುದು ನನ್ನ ವೈಯಕ್ತಿಕ ಬಳಕೆಗಂತೂ ಅಲ್ಲ. ಅದರ ಸಾಕ್ಷಿಯಾಗಿ ಫೋಟೋಗಳಿವೆ.
  3. ರಾಘವೇಂದ್ರ ಶೆಟ್ಟಿಯ ಇಂಥ ಸುಳ್ಳು ಆರೋಪಕ್ಕೆ ಈಗಾಗಲೇ ಅಫೀಷಿಯಲ್​ ಆಗಿ ಉತ್ತರ ಕೂಡ ಕೊಡಲಾಗಿದೆ. ಅದು ಸರ್ಕಾರ ಮಟ್ಟದಲ್ಲಿ ಸರಿ ಇದೆ ಎಂದು ಒಪ್ಪಿಕೊಳ್ಳಲಾಗಿದೆ.
  4. ರಾಘವೇಂದ್ರ ಶೆಟ್ಟಿ ಮೇಲೆ ನಿಗಮಕ್ಕೆ ವಂಚನೆ ಮಾಡಿದ ಗುರುತರ ಆರೋಪವಿದೆ. ಸುಳ್ಳು ಸಂಬಳ ನೌಕರರ ಹೆಸರಲ್ಲಿ ತೆಗೆದು ಕೊಂಡಿರುವುದು, ಲಕ್ಷ ಲಕ್ಷ ರೂ. ಮೌಲ್ಯದ ಗಂಧದ ಸಾಮಾನು ಮನೆಗೆ ಸಾಗಿಸಿರುವುದು, ಅಯೋಧ್ಯ, ದೆಹಲಿ, ಕಾಶಿ.. ಈ ರೀತಿ ನಿಗಮದ ಕೆಲಸ ಇಲ್ಲದಿರುವ ಕಡೆ ಸುತ್ತಾಡಿ ಲಕ್ಷ ಲಕ್ಷ ರೂಪಾಯಿಗಳ ವಿಮಾನಯಾನ, ಫೈವ್ ಸ್ಟಾರ್ ಹೋಟೆಲ್ ಬಿಲ್​ ಇತ್ಯಾದಿ ಕ್ರಿಮಿನಲ್ ದುರ್ಬಳಕೆ ಆಗಿದೆ.
  5. ಸಿಸಿಟಿವಿ ಟ್ಯಾಂಪರ್ ಮಾಡಿ ಕ್ರಿಮಿನಲ್​ ಅಪರಾಧ ಎಸಗಿರುವುದು.
  6. ಎರಡು ಇನ್ನೋವಾ ಕಾರುಗಳು, ಇದರಲ್ಲಿ ಸ್ವಕಾರ್ಯ, ಸ್ವಂತ ಬ್ಯುಸಿನೆಸ್, ಸ್ವಂತ ವ್ಯವಹಾರಕ್ಕೆ ನಿಗಮದ ಕಾರು, ಪೆಟ್ರೋಲ್, ಬಳಸಿ, ಹೆಂಡತಿ ಮಕ್ಕಳನ್ನು ಸುತ್ತಿಸಿ, ಪ್ರತಿ ತಿಂಗಳೂ 30,000 ರೂಪಾಯಿ ಪೆಟ್ರೋಲ್ ಹಣ ನಿಗಮದಿಂದ ಪಡೆದಿರುವುದು.
  7. ಡ್ರೈವರ್ ಹೇಳಿಕೆಯ ಪ್ರಕಾರ ಆಲ್ಕೋಹಾಲ್ ಕುಡಿದು ಸ್ವತಃ ನಿಗಮದ ಗಾಡಿ ಚಲಾಯಿಸಿ ಅದನ್ನು ಹಿರಿಯೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಮಾಡಿ, ಬಡಪಾಯಿ ಡ್ರೈವರ್​ನನ್ನು ಆರೋಪಿ ಅಂತ ಮಾಡಿಸಿ, ನಿಗಮದಿಂದ ವಾಹನ ರಿಪೇರಿಗಾಗಿ 12 ಲಕ್ಷ ರೂ. ಭರಿಸುವ ಸಂದರ್ಭ ತಂದು, ನಿಗಮಕ್ಕೆ 12 ಲಕ್ಷ ಮೊತ್ತ ನಷ್ಟ ಮಾಡಿರುವುದು.
  8. ಪ್ರತಿ ಬೋರ್ಡ್ ಮೀಟಿಂಗ್​ನಲ್ಲಿ ಕೂಗಾಡುತ್ತ, ಕಾಲಹರಣ ಮಾಡಿ, ಪ್ರೊಸೀಡಿಂಗ್ಸ್​ಗೆ ಸಹಿ ಹಾಕದೇ ನಿಗಮದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಪಡಿಸಿರುವುದು.
  9. ಹೈಗ್ರೌಂಡ್ಸ್​ ಪೊಲೀಸ್ ಸ್ಟೇಷನ್​​ನಲ್ಲಿ 10 ಲಕ್ಷ ರೂಪಾಯಿ ವಂಚನೆ ಹಾಗೂ ಚೆಕ್ ಬೌನ್ಸ್ ಕೇಸಲ್ಲಿ ಅರೆಸ್ಟ್ ವಾರೆಂಟ್ ಕೋರ್ಟ್​ನಿಂದ ಜಾರಿಯಾದರೂ ಅಧಿಕಾರ ದುರ್ಬಳಕೆ ಮಾಡಿ ಅರೆಸ್ಟ್ ಆಗದ ಹಾಗೆ ಕಾನೂನಿಗೆ ಮಣ್ಣೆರಚುವ ಕೆಲಸ ಮಾಡಿರುವುದು.
  10. ಸಿರ್ಸಿ ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ 8 ಲಕ್ಷ ರೂ. ವಂಚನೆ ಹಾಗೂ ಚೆಕ್ ಬೌನ್ಸ್ ಕೇಸಲ್ಲಿ ಆರೋಪಿ ಆಗಿರುವುದು.
  11. ಕರಕುಶಲ ನಿಗಮದ ಸಾರ್ವಜನಿಕ ಹಣವನ್ನು ತನ್ನ ಸ್ವಾರ್ಥಕ್ಕೆ ಬಳಸುವ ಪ್ರಯತ್ನ ಮೊದಲ ದಿನದಿಂದಲೇ ಶೆಟ್ಟಿ ಮಾಡಿದ್ದು, ನಾನದಕ್ಕೆ ಅವಕಾಶ ಮಾಡಿ ಕೊಟ್ಟಿಲ್ಲವಾದ್ದರಿಂದ ಹತಾಶೆಯಿಂದ ಅಸಂಬದ್ಧ ಅರ್ಥಹೀನ ಮಾತುಗಳು ಒಂದೇ ಎರಡೇ..?!

ಈ ರೀತಿಯ ಅವ್ಯವಹಾರ ಮಾಡಿದ ರಾಘವೇಂದ್ರ ಶೆಟ್ಟಿಯನ್ನು ಕರಕುಶಲ ನಿಗಮದ ಅಧ್ಯಕ್ಷ ಸ್ಥಾನದಿಂದ ತೆಗೆದಿರುವುದು ಭ್ರಷ್ಟಾಚಾರ ವಿರುದ್ಧದ ಸರ್ಕಾರದ ಕ್ರಮ ದಿಟ್ಟವಾಗಿದೆ ಎಂದು ರೂಪಾ ಈ ಮೇಲಿನ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net