ಐಒಸಿಎಲ್‌ನಲ್ಲಿ ಮೈನವಿರೇಳಿಸಿದ ಕಲ್ಪಿತ ಸನ್ನಿವೇಶ

iocl
Published on

ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಐಒಸಿಎಲ್ ಇಂಡೇನ್ ಬಾಟ್ಲಿಂಗ್ ಸ್ಥಾವರದ ಬೃಹತ್ ಟ್ಯಾಂಕರ್‌ನಲ್ಲಿ ಶುಕ್ರವಾರ ಲೀಕೇಜ್ ಕಂಡು ಬಂದ ಕೆಲವೇ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿತು. ಸಿಬ್ಬಂದಿ ಕಾರ್ಯಕ್ಷಮತೆ ಹಾಗೂ ಸಮಯಪ್ರಜ್ಞೆಯಿಂದ ಕೆಲವೇ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಇದರೊಂದಿಗೆ ಭಾರಿ ಅನಾಹುತವೊಂದು ತಪ್ಪಿದಂತಾಯಿತು. ಗಾಯಾಳುಗಳನ್ನು ಕೂಡಲೇ ಭದ್ರಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಕಲ್ಪಿತ ಸನ್ನಿವೇಶ ಸೃಷ್ಠಿಸಿದ ಸಿಬ್ಬಂದಿ, ಅವಘಡ ಸಂಭವಿಸಿದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು. ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಎಚ್ಚರಿಕೆ ಗಂಟೆ ಮೊಳಗಿಸುವುದು, ಅಗ್ನಿಶಾಮಕಕ್ಕೆ ಸಂದೇಶ ರವಾನಿಸುವುದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವುದು ಹೀಗೆ ವಿವಿಧ ಹಂತಗಳಲ್ಲಿ ಸಮಯ ಪರಿಪಾಲನೆಯ ಅಗತ್ಯವನ್ನು ಪ್ರಾತ್ಯಕ್ಷಿಕೆ ಮೂಲಕ ಅನಾವರಣಗೊಳಿಸಲಾಯಿತು.

ಬಾಟ್ಲಿಂಗ್ ಘಟಕದ ಮೂರನೇ ಸಾಲಿನಲ್ಲಿದ್ದ ಬೃಹತ್ ಟ್ಯಾಂಕರ್‌ನಲ್ಲಿ ಲೀಕೇಜ್ ಕಂಡು ಬಂದು ಬೆಂಕಿ ಹತ್ತಿಕೊಂಡ ತಕ್ಷಣ ನಿರಂತರವಾಗಿ ಅಪಾಯದ ಸೈರನ್ ಮೊಳಗಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಾವರದ ರಕ್ಷಣಾ ತಂಡ ಬೃಹತ್ ಪೈಪ್‌ಗಳ ಮೂಲಕ ರಾಸಾಯನಿಕ ಮಿಶ್ರಣ ನೀರನ್ನು ನಿರಂತರವಾಗಿ ಹಾಯಿಸಿ ಬೆಂಕಿ ನಿಯಂತ್ರಿಸಿದರು. ಗಾಯಗೊಂಡವರನ್ನು ಭದ್ರಾವತಿ ಆಸ್ಪತ್ರೆಗೆ ರವಾನಿಸಲಾಯಿತು.

ಮತ್ತೊಂದು ಸನ್ನಿವೇಶದಲ್ಲಿ ಸ್ಥಾವರದ ಗೇಟಿನ ಹೊರಭಾಗದಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಹೊತ್ತ ಲಾರಿಯಲ್ಲಿ ಬೆಂಕಿ ಕಂಡು ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಬಸವ ಪ್ರಭು ಶರ್ಮ, ಫ್ಯಾಕ್ಟರೀಸ್ ಸಹಾಯಕ ನಿರ್ದೇಶಕ ರವಿ ಬಾಬು, ಭದ್ರಾವತಿ ತಹಸೀಲ್ದಾರ್ ಆರ್.ಪ್ರದೀಪ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಗೋಪಿನಾಥ್, ಐಒಸಿಎಲ್ ಪ್ಲಾೃಂಟ್ ಮ್ಯಾನೇಜರ್ ಜೆ.ವಿಜಯ ಸೂರ್ಯ ಮತ್ತಿತರರು ಕಲ್ಪಿತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net