

ಬೆಂಗಳೂರು: ದೇಶದ ಕೀರ್ತಿ ಪತಾಕೆಯನ್ನು ಪ್ರಪಂಚದೆಲ್ಲೆಡೆ ಹಾರಿಸಿದ ಇಸ್ರೋದ ವಿಜ್ಞಾನಿಗಳ ತಂಡವನ್ನು ರಾಜ್ಯ ಸರ್ಕಾರದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಭಿನಂದಿಸಿ ಗೌರವಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೋರಿದ್ದಾರೆ.
ಚಂದ್ರಯಾನ ಯಶಸ್ವಿಯಾದ ಹಿನ್ನೆಲೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಚಂದ್ರನ ಅಂಗಳಕ್ಕೆ ಕಾಲಿಡುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದೆ. ಇದು ಭಾರತದ ಹಾಗೂ ಭಾರತೀಯರ ಗೆಲುವಾಗಿದೆ. ಈ ಐತಿಹಾಸಿಕ ಸಾಧನೆ ಮಾಡಿದ ಇಸ್ರೋದ ಎಲ್ಲ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಈ ತಂಡವನ್ನು ರಾಜ್ಯ ಸರ್ಕಾರ ಕರೆದು ಗೌರವಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಚಂದ್ರಯಾನ - 3 ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿದೆ. ಛಲ ಬಿಡದೆ ಅಂದುಕೊಂಡಿದ್ದನ್ನು ಇಸ್ರೋ ಸಾಧಿಸಿದೆ. ಈ ಮೂಲಕ ಇಡೀ ತಂಡವನ್ನು ಮುನ್ನಡೆಸಿದ ಇಸ್ರೋ ಅಧ್ಯಕ್ಷ ಸೋಮನಾಥ್ ಹಾಗೂ ಅವರ ತಂಡಕ್ಕೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಯನ್ನು ಹೇಳಬಯಸುತ್ತೇನೆ ಎಂದಿದ್ದಾರೆ.